ನೆಲಮಂಗಲ, ಅಕ್ಟೋಬರ್ 31: ತಿಲಕ ಇಟ್ಟುಕೊಂಡು ಬಂದ ಹಿಂದೂ ವ್ಯಕ್ತಿ ಎಂದು ಗೊತ್ತಾದ ಕಾರಣ, ‘ನಿಮಗೆ ಊಟ ಹಾಕಿಲ್ಲ, ಎದ್ದೋಗಿ’ ಎಂದು ವ್ಯಕ್ತಿಯೊಬ್ಬರನ್ನು ಅವಮಾನಿಸಿದ ಘಟನೆ ನೆಲಮಂಗಲದಲ್ಲಿ ನಡೆದಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇಸ್ಲಾಂಪುರದ ಅನ್ಯ ಕೋಮಿನ ನಿವಾಸಿಯೊಬ್ಬರ ಕುಟುಂಬದ ಮದುವೆ ಸಮಾರಂಭಕ್ಕೆ ರಾಜು ಎಂಬವರು ಊಟಕ್ಕೆ ಬಂದಿದ್ದರು. ವಧುವಿನ ಸಂಬಂಧಿಯೊಬ್ಬರು ಕರೆದ ಅವರು ಸಮಾರಂಭಕ್ಕೆ ಬಂದಿದ್ದರು. ಆದರೆ, ಊಟಕ್ಕೆ ಕುಳಿತಿದ್ದಾಗ ಅವರ ಹಣೆ ತಿಲಕ ಇದ್ದುದನ್ನು ನೋಡಿ ಅವಮಾನಿಸಲಾಗಿದೆ. ‘ನಿಮಗೆ ಊಟ ಹಾಕುವುದಿಲ್ಲ, ನಿಮ್ಮನ್ನು ಯಾರು ಕರೆದಿದ್ದಾರೆ’ ಎಂದು ಗದರಿದರು. ಹಿಂದೂಗಳಿಗೆ ನಾವು ಊಟ ಹಾಕುವುದಿಲ್ಲ ಇಲ್ಲಿಂದ ಎದ್ದು ಹೋಗಿ ಎಂದು ಕಳುಹಿಸಿದ್ದಾರೆ.
ಇದೆ ವೇಳೆ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು, ಹೀಗೆ ಮಾಡಬಾರದು. ಊಟಕ್ಕೆ ಕುಳಿತವರನ್ನು ಎಬ್ಬಿಸುವುದು ಸರಿಯಲ್ಲ. ಹಿಂದೂಗಳು ಬರಬಾರದು ಎಂದಿದ್ದರೆ ನೀವು ಕರೆಯಲೇ ಬಾರದಿತ್ತು. ನಾವು ಕೂಡ ನಿಮ್ಮ ಅಣ್ಣ-ತಮ್ಮಂದಿರು ತಾನೆ? ಅವರೇನೋ ಪಾಪ ಅಮಾಯಕರು, ಎಸ್ಸಿ ಎಸ್ಟಿ ಜನ, ಬಡವರು ಗೊತ್ತಿಲ್ಲದೆ ಬಂದು ಊಟಕ್ಕೆ ಬಂದಿದ್ದಾರೆ. ಉಣ್ಣಲು ಕುಳಿತವರನ್ನು ಎಬ್ಬಿಸುವುದು ಮಾನವೀಯತೆ ಅಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿರುವುದೂ ವೈರಲ್ ವಿಡಿಯೋದಲ್ಲಿದೆ.
ವಿಡಿಯೋ, ವರದಿ: ಮಂಜುನಾಥ್, ಟಿವಿ9 ನೆಲಮಂಗಲ
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ