National Unity Day: ಏಕತೆಯ ವಿಗ್ರಹ.. ರಾಷ್ಟ್ರೀಯ ಐಕ್ಯತೆ ಸಾರುತ್ತಿದೆ ಸರ್ದಾರ್ ವಲ್ಲಭ ಭಾಯ್‌ ಪಟೇಲ್ ‘ಮೂರ್ತಿ’! | Sardar Vallabhbhai Patel National Unity Day Statue Of Unity Gvd

National Unity Day: ಏಕತೆಯ ವಿಗ್ರಹ.. ರಾಷ್ಟ್ರೀಯ ಐಕ್ಯತೆ ಸಾರುತ್ತಿದೆ ಸರ್ದಾರ್ ವಲ್ಲಭ ಭಾಯ್‌ ಪಟೇಲ್ ‘ಮೂರ್ತಿ’! | Sardar Vallabhbhai Patel National Unity Day Statue Of Unity Gvd



National Unity Day: ಏಕತೆಯ ವಿಗ್ರಹ.. ರಾಷ್ಟ್ರೀಯ ಐಕ್ಯತೆ ಸಾರುತ್ತಿದೆ ಸರ್ದಾರ್ ವಲ್ಲಭ ಭಾಯ್‌ ಪಟೇಲ್ ‘ಮೂರ್ತಿ’! | Sardar Vallabhbhai Patel National Unity Day Statue Of Unity Gvd

ಅಖಂಡ ಭಾರತದ ಒಗ್ಗೂಡುವಿಕೆಗೆ ಕಾರಣೀಭೂತರಾದ ಭಾರತದ ಸ್ವಾತಂತ್ರ್ಯ ಇತಿಹಾಸದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್‌ ಪಟೇಲ್ ಅವರ ಜನ್ಮ ಶತಾಬ್ಧಿಯ ನೆನಪಿಗಾಗಿ ಈ ಆಚರಣೆಯನ್ನು 2014ರಲ್ಲಿ ಭಾರತ ಸರ್ಕಾರ ಆರಂಭಿಸಿತ್ತು.

-ಡಾ। ಮುರಲೀ ಮೋಹನ್ ಚೂಂತಾರು, ಸುರಕ್ಷಾ ದಂತ ಚಿಕಿತ್ಸಾಲಯ, ಹೊಸಂಗಡಿ.

ಪ್ರತಿ ವರ್ಷ ಅಕ್ಟೋಬರ್ 31ಅನ್ನು ರಾಷ್ಟ್ರೀಯ ಏಕತಾ ದಿವಸ್ ಅಥವಾ ರಾಷ್ಟ್ರೀಯ ಐಕ್ಯತಾ ದಿನ ಎಂದು ಆಚರಿಸಲಾಗುತ್ತದೆ. ಅಖಂಡ ಭಾರತದ ಒಗ್ಗೂಡುವಿಕೆಗೆ ಕಾರಣೀಭೂತರಾದ ಭಾರತದ ಸ್ವಾತಂತ್ರ್ಯ ಇತಿಹಾಸದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್‌ ಪಟೇಲ್ ಅವರ ಜನ್ಮ ಶತಾಬ್ಧಿಯ ನೆನಪಿಗಾಗಿ ಈ ಆಚರಣೆಯನ್ನು 2014ರಲ್ಲಿ ಭಾರತ ಸರ್ಕಾರ ಆರಂಭಿಸಿತ್ತು. ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕರ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ಎದ್ದುಕಾಣುವ ಹೆಸರೇ ಸರ್ದಾರ್ ವಲ್ಲಭ ಭಾಯ್‌ ಪಟೇಲ್. 1928ರ ಬಾರ್ಡೊಲಿ ಸತ್ಯಾಗ್ರಹದಲ್ಲಿ ವಲ್ಲಭ ಭಾಯ್‌ ಪಟೇಲರು ತೋರಿದ ಅಸಾಧಾರಣಾ ಧೈರ್ಯ ಮತ್ತು ಚಾಕಚಕ್ಯತೆಗೆ ಮಾರು ಹೋದ ಮಹಿಳೆಯರು, ಅವರಿಗೆ ಸರ್ದಾರ ಎಂಬ ಬಿರುದನ್ನು ನೀಡಿದ್ದರು.

ಸ್ವಾತಂತ್ರ್ಯ ನಂತರ ದಿನಗಳಲ್ಲಿ ಅಖಂಡ ಭಾರತದ ಕನಸನ್ನು ಕಂಡು ತುಂಡು ತುಂಡಾಗಿದ್ದ ಭಾರತದ ಭಾಗಗಳನ್ನು ಒಗ್ಗೂಡಿಸಿ ಸುಮಾರು 550 ತುಂಡರಸರ ಮನವೊಲಿಸಿ ಅಖಂಡ ಪ್ರಜಾಪ್ರಭುತ್ವವಾದಿ ಭಾರತದ ಜನುಮಕ್ಕೆ ಕಾರಣೀಭೂತರಾದವರೇ ಸರ್ದಾರ್ ಪಟೇಲರು. 1875ರಲ್ಲಿ ಜನಿಸಿದ ಪಟೇಲರು ತಮ್ಮ 75ನೇ ವಯಸ್ಸಿನಲ್ಲಿ 1950ರಲ್ಲಿ ಹೃದಯಸ್ತಂಭನದಿಂದ ಮುಂಬೈನಲ್ಲಿ ಮರಣಿಸಿದರು. ವೃತ್ತಿಯಿಂದ ಖ್ಯಾತ ವಕೀಲರಾಗಿದ್ದ ಪಟೇಲರು ಭಾರತದ ಮೊದಲ ಗೃಹಮಂತ್ರಿಯಾಗಿಯೂ ಕೆಲಸ ಮಾಡಿದ್ದರು. 1947ರ ಭಾರತ ಪಾಕಿಸ್ತಾನದ ಯುದ್ಧದ ಸಮರದಲ್ಲಿಯೂ ಅವರೇ ಭಾರತದ ಗೃಹ ಸಚಿವರಾಗಿದ್ದರು. ಒಂದಷ್ಟು ಕಾಲ ಭಾರತದ ಉಪಪ್ರಧಾನಿಯಾಗಿಯೂ ನೆಹರೂ ಅವರ ಜೊತೆ ಕೆಲಸ ಮಾಡಿದ್ದರು.

ಏನಿದು ಏಕತೆಯ ವಿಗ್ರಹ?: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವಿಸ್ಮರಣೀಯ ಕೊಡುಗೆ ನೀಡಿ ಅಖಂಡ ಭಾರತದ ಕನಸು ಕಂಡು ಅದನ್ನು ಸಾಕಾರಗೊಳಿಸುವಲ್ಲಿ ಹಗಲಿರುಳು ಅವಿರತ ಪರಿಶ್ರಮ ಪಟ್ಟು, ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಬಳಿಕ ‘ಪ್ರಜಾಪ್ರಭುತ್ವವಾದಿ’ ಸ್ವತಂತ್ರ ಭಾರತದ ಮೊದಲ ಉಪಪ್ರಧಾನಿ ಮತ್ತು ಮೊದಲ ಗೃಹಸಚಿವರಾದ ಉಕ್ಕಿನ ಮನುಷ್ಯ ಎಂಬ ಅನ್ವರ್ಥನಾಮದಿಂದ ದೇಶದಾದ್ಯಂತ ಚಿರಪರಿಚಿತರಾದ ಸರ್ದಾರ್ ವಲ್ಲಭ ಭಾಯ್‌ ಪಟೇಲ್ ಅವರ ಸಾಧನೆ ಮತ್ತು ಕಾಣಿಕೆಯನ್ನು ಯುವಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ಭಾರತ ಸರಕಾರ 2018ರ ಅ.31ರಂದು ಪಟೇಲರ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿತು. ಜಗತ್ತಿನ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಯನ್ನು ಈ ಪ್ರತಿಮೆ ಪಡೆದುಕೊಂಡಿದೆ.

ಪ್ರತಿಮೆಯ ವಿಶೇಷತೆಗಳು
1)ಅತೀ ಕಡಿಮೆ ಅವಧಿಯಲ್ಲಿ ಈ ವಿಗ್ರಹ ಸ್ಥಾಪನೆ ಆಗಿರುವ ದಾಖಲೆ ಹೊಂದಿದೆ. 42 ತಿಂಗಳುಗಳ ಅವಧಿಯಲ್ಲಿ ನಿರ್ಮಿಸಲು ಯೋಜನೆ ಹಾಕಿ ಕೇವಲ 33 ತಿಂಗಳುಗಳಲ್ಲಿ ನಿರ್ಮಾಣ ಮಾಡಲಾಯಿತು.

2)ಜಗತ್ತಿನ ಅತೀ ಎತ್ತರದ ಈ ವಿಗ್ರಹದಲ್ಲಿ 153 ಮೀಟರ್ ಎತ್ತರದಲ್ಲಿ ಸುತ್ತಲಿನ ವಿಹಂಗಮ ನೋಟ ನೋಡಲು ಗ್ಯಾಲರಿ ಇರುತ್ತದೆ. ಸುಮಾರು 200 ಮಂದಿ ಏಕಕಾಲಕ್ಕೆ ವಿಹಂಗಮ ನೋಟ ವೀಕ್ಷಿಸಬಹುದಾಗಿದೆ.

3)ಗಾಳಿ, ಭೂಕಂಪವನ್ನು ತಡೆಗಟ್ಟಲು ವಿಶೇಷ ತಂತ್ರಜ್ಞಾನದಿಂದ ಈ ವಿಗ್ರಹ ನಿರ್ಮಿಸಲಾಗಿದೆ. ಸೆಕೆಂಡಿಗೆ 60 ಕಿಲೋ ಮೀಟರ್ ವೇಗದ ಗಾಳಿಯನ್ನು ತಡೆಯುವ ಶಕ್ತಿ ಹೊಂದಿದೆ. 6.5 ರಿಕ್ಟರ್ ಮಾಪನದಷ್ಟು ತೀವ್ರತೆಯಲ್ಲಿ ಭೂಕಂಪವನ್ನು ತಡೆಯುವ ಶಕ್ತಿ ಹೊಂದಿದೆ.

4)ಈ ವಿಗ್ರಹದಿಂದ ಸರ್ದಾರ್ ಸರೋವರ ಅಣೆಕಟ್ಟನ್ನು 200 ಕಿ.ಮೀ. ದೂರದ ವರೆಗೆ ವೀಕ್ಷಿಸಬಹುದಾಗಿದೆ. ಸತ್ಪುರ ಮತ್ತು ವಿಂದ್ಯಾ ಪರ್ವತ ಶ್ರೇಣಿಗಳನ್ನು ಈ ವಿಗ್ರಹದ ಗ್ಯಾಲರಿಯಿಂದ ವೀಕ್ಷಿಸಬಹುದಾಗಿದೆ.

5)ಈ ವಿಗ್ರಹದ ನಿರ್ಮಾಣಕ್ಕಾಗಿ 5700 ಮೆಟ್ರಿಕ್ ಟನ್ ಕಬ್ಬಿಣ ಮತ್ತು ಭದ್ರತೆಗಾಗಿ 18500 ಮೆಟ್ರಿಕ್ ಕಬ್ಬಿಣವನ್ನು ಬಳಸಲಾಗಿದೆ. ಪ್ರತಿಮೆಯ ಹೊರಭಾಗಕ್ಕೆ ಕಂಚಿನ ಲೇಪನ ಮಾಡಲಾಗಿದೆ.

6)ಜಗತ್ತಿನ ಅತೀ ದೊಡ್ಡ ಈ ವಿಗ್ರಹ ಸ್ಥಾಪನೆಗೆ ‘ಲೋಹ ಸಂಗ್ರಹ ಆಂದೋಲನ’ ಮಾಡಿ ಲೋಹ ಸಂಗ್ರಹ ಮಾಡಲಾಗಿತ್ತು. ಹೀಗೆ ಸಂಗ್ರಹಿಸಿದ ಲೋಹವನ್ನು ಕರಗಿಸಿ, ಸರಳುಗಳನ್ನಾಗಿ ಮಾಡಿ ವಿಗ್ರಹ ನಿರ್ಮಾಣಕ್ಕೆ ಬಳಸಲಾಗಿದೆ.

7)ಈ ವಿಗ್ರಹ ನಿರ್ಮಾಣದಿಂದಾಗಿ 15000 ಮಂದಿ ಆದಿವಾಸಿ ಜನಾಂಗದವರಿಗೆ ನೇರ ಉದ್ಯೋಗ ದೊರಕುವಂತಾಗಿದೆ.

8)ಈ ವಿಗ್ರಹದ ನಿರ್ಮಾಣ ವಿನ್ಯಾಸ, ತಂತ್ರಜ್ಞಾನ ಮತ್ತು ನಿರ್ವಹಣೆಯನ್ನು ಲಾರ್ಸ್‍ನ್ ಮತ್ತು ಟಬ್ರೊ ಕಂಪನಿ ವಹಿಸಿಕೊಂಡಿದೆ. ₹2989 ಕೋಟಿ ವೆಚ್ಚದಲ್ಲಿ ಈ ವಿಗ್ರಹವನ್ನು ನಿರ್ಮಿಸಲಾಗಿದೆ.

9)ಜಗತ್ತಿನ ಅತೀ ಎತ್ತರದ ವಿಗ್ರಹವಾಗಿರುವ ಈ ಏಕತಾ ವಿಗ್ರಹ 182 ಮೀಟರ್ ಎತ್ತರ ಇದೆ. ನರ್ಮದಾ ನದಿ ತೀರದಲ್ಲಿ ಈ ವಿಗ್ರಹ ಸ್ಥಾಪನೆಯಾಗಿದೆ. ಚೀನಾದ ಬುದ್ಧನ ಸ್ಪ್ರಿಂಗ್ ದೇವಾಲಯ 153 ಮೀಟರ್ ಮತ್ತು ಜಪಾನಿ ಉಳಿತು ದೈಬುಸ್ತು ವಿಗ್ರಹ 120 ಮೀಟರ್ ಇದ್ದು, ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಹೊಂದಿದೆ.

10)ಈ ವಿಗ್ರಹದ ವಿನ್ಯಾಸವನ್ನು ಖ್ಯಾತ ಶಿಲ್ಪಿ ರಾಮ್‍ಸುತಾರ್ ಮಾಡಿದ್ದಾರೆ. ಪಾರ್ಲಿಮೆಂಟಿನಲ್ಲಿರುವ ಗಾಂಧೀಜಿ ಪ್ರತಿಮೆಯನ್ನೂ ಇವರೇ ಮಾಡಿದ್ದಾರೆ. ನರ್ಮದಾ ನದಿ ತಟದ, ಸತ್ಪುರ ಬೆಟ್ಟದ ತಪ್ಪಲಿನಲ್ಲಿ ಸರ್ದಾರ್ ಸರೋವರ್ ಅಣೆಕಟ್ಟನ್ನು ಮುಖ ಮಾಡಿ ಈ ವಿಗ್ರಹ ನಿಂತಿದೆ. ವಡೋದರ ನಗರದಿಂದ 100 ಕಿ.ಮೀ. ದೂರದ ನರ್ಮದಾ ಜಿಲ್ಲೆಯ ಕೇವದಿಯ ಗ್ರಾಮದಲ್ಲಿ ಈ ವಿಗ್ರಹ ತಲೆ ಎತ್ತಿ ನಿಂತಿದೆ.

ಕೊನೆ ಮಾತು

ರಾಷ್ಟ್ರೀಯ ಐಕ್ಯತೆಗೂ ವಿಗ್ರಹ ನಿರ್ಮಾಣಕ್ಕೂ ಏನಪ್ಪಾ ಸಂಬಂಧ ಎಂದು ಹಲವಾರು ಮಂದಿ ಟೀಕೆ ಮಾಡಿರುವುದಂತೂ ಎಲ್ಲರಿಗೂ ತಿಳಿದ ವಿಚಾರವೇ. ಕೋಟ್ಯಂತರ ರುಪಾಯಿ ಖರ್ಚು ಮಾಡಿ ವಿಗ್ರಹ ಸ್ಥಾಪನೆ ಮಾಡಿ ರಾಷ್ಟ್ರೀಯ ಐಕ್ಯತೆ ಸಾಧಿಸುವುದು ಸಾಧ್ಯವಾದಲ್ಲಿ ದೇಶದೆಲ್ಲೆಡೆ ಎಲ್ಲರ ವಿಗ್ರಹ ಹುಟ್ಟಿಕೊಳ್ಳಬಹುದು ಎಂದು ಟೀಕಾಕಾರರು ಟೀಕಿಸಿರುವುದು ನಮಗೆಲ್ಲಾ ತಿಳಿದೇ ಇದೆ. ಸರ್ದಾರ ಪಟೇಲರ ‘ಏಕತೆಯ ಮೂರ್ತಿ’ ಪ್ರತಿಯೊಬ್ಬ ಭಾರತೀಯರಿಗೆ ಸ್ಫೂರ್ತಿ ನೀಡಿ ತಾನು ದೇಶಕ್ಕಾಗಿ ಏನಾದರೂ ಮಾಡಲೇಬೇಕು ಎನ್ನುವ ತುಡಿತವನ್ನು ಮುಟ್ಟಿಸುವಲ್ಲಿ ಸಂಶಯವೇ ಇಲ್ಲ. ಅವರು ಯಾವ ಜಾತಿ ಯಾವ ಪಕ್ಷ, ಯಾವ ರಾಜ್ಯದವರು ಅನ್ನುವುದಕ್ಕಿಂತ ಅವರೊಬ್ಬ ದೇಶಪ್ರೇಮ ಭಾರತೀಯ ಎಂಬ ಸಂದೇಶ ನಮ್ಮ ಯುವಪೀಳಿಗೆಗೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲ ಅವರ ಏಕತಾ ಮೂರ್ತಿಯನ್ನು ಕಣ್ತುಂಬಿಕೊಂಡು ಅವರು ಹಾಕಿದ ಆದರ್ಶ ನಿಷ್ಠೆ ಪ್ರಾಮಾಣಿಕತೆ ಮತ್ತು ದೇಶ ಪ್ರೇಮದ ಹಾದಿಯಲ್ಲಿ ಸಾಗಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿ ನಾವಿಂದು ನಿಂತಿದ್ದೇವೆ. ಹಾಗಾದಲ್ಲಿ ಮಾತ್ರ ‘ಏಕತಾ ಮೂರ್ತಿ’ ನಿರ್ಮಾಣದ ಉದ್ದೇಶ ಸಾಫಲ್ಯವಾಗಬಹುದು ಮತ್ತು ‘ರಾಷ್ಟ್ರೀಯ ಏಕತಾ ದಿವಸದ ಆಚರಣೆ’ ಸಾರ್ಥಕವಾಗಬಹುದು. ಅದರಲ್ಲಿಯೇ ನಮ್ಮ ದೇಶದ ಹಿತ ಅಡಗಿದೆ.



Source link

Leave a Reply

Your email address will not be published. Required fields are marked *