ಒಂದೇ ಒಂದು ಹಿಟ್ ಸಿನಿಮಾ ಸಾಕು ಸಾಮಾನ್ಯ ನಟ ಅಥವಾ ನಿರ್ದೇಶಕ (ನಿರ್ದೇಶಕ) ಸ್ಟಾರ್ ಆಗಿಬಿಡಲು. ಒಂದು ಸಿನಿಮಾ ಹಿಟ್ ಆದ ಕೂಡಲೇ ಅಂಥಹವರ ಹಿಂದೆ ನಿರ್ಮಾಪಕರು ಸಾಲುಗಟ್ಟಿ ನಿಲ್ಲುತ್ತಾರೆ. ಆದರೆ ಸಿನಿಮಾದ ಯಶಸ್ಸಿನ ಅಮಲು ತಲೆಗೆ ಏರಿದವರು ಎಲ್ಲರಿಗಿಂತಲೂ ತಾವೇ ದೊಡ್ಡವರು ಎಂದು ಮೆರೆಯಲು, ವೃತ್ತಿಪರತೆಯನ್ನು ಮರೆಯುತ್ತಾರೆ, ಆಗಲೇ ಶುರು ಆಗುವುದು ನಿರ್ಮಾಪಕರಿಗೆ ಸಂಕಷ್ಟ. ಈಗ ತೆಲುಗಿನಲ್ಲಿ ಇದೆ ಆಗಿದೆ. ಹೊಂಬಾಳೆ ಸೇರಿದಂತೆ ಇನ್ನೂ ಕೆಲವು ನಿರ್ಮಾಣ ಸಂಸ್ಥೆಗಳು ನಿರ್ದೇಶಕರಿಂದ ಇಕ್ಕಟ್ಟಿಗೆ ಸಿಲುಕಿವೆ.
‘ಹನು-ಮ್ಯಾನ್’ ಸಿನಿಮಾ ನಿರ್ದೇಶನ ಮಾಡಿರುವ ಪ್ರಶಾಂತ್ ವರ್ಮಾ ಬಗ್ಗೆ ಈಗ ತೆಲುಗು ಚಿತ್ರರಂಗದ ಕೆಲ ದೊಡ್ಡ ನಿರ್ಮಾಪಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಹನುಮ್ಯಾನ್’ ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲೇ ಕೆಲವಾರು ನಿರ್ಮಾಪಕರು ಪ್ರಶಾಂತ್ ವರ್ಮಾಗೆ ಆತ ಕೇಳಿದಷ್ಟು ಮುಂಗಡ ಸಂಭಾವನೆ ಕೊಟ್ಟು ಸಿನಿಮಾ ನಿರ್ದೇಶಿಸಿಕೊಡುವಂತೆ ಕೇಳಿದರು. ಅದರಲ್ಲಿ ಹೊಂಬಾಳೆಯೂ ಒಂದು. ಆದರೆ ಈಗ ಪ್ರಶಾಂತ್ ವರ್ಮಾ ವೃತ್ತಿಪರತೆ ಮರೆತು ವರ್ತಿಸುತ್ತಿದ್ದಾನೆ ಎನ್ನುತ್ತಿದ್ದಾರೆ.
ಹೊಂಬಾಳೆ, ಡಿವಿವಿ ಹಾಗೂ ಇನ್ನೂ ಕೆಲವು ನಿರ್ಮಾಣ ಸಂಸ್ಥೆಗಳಿಗೆ ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆದು ಆ ಹಣವನ್ನು ಸ್ಟುಡಿಯೋ ಮತ್ತು ತಮ್ಮ ಕಛೇರಿ ನಿರ್ಮಾಣಕ್ಕೆ ವ್ಯಯಿಸಿರುವ ಪ್ರಶಾಂತ್ ವರ್ಮಾ ಇದೀಗ ಸಿನಿಮಾ ಪ್ರಾರಂಭಕ್ಕೆ ಮೀನ-ಮೇಷ ಎಣಿಸುತ್ತಿರುವುದು ನಿರ್ಮಾಪಕರ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಕೆಲವು ನಿರ್ಮಾಣ ಸಂಸ್ಥೆಗಳು ಪ್ರಶಾಂತ್ ವರ್ಮಾ ವಿರುದ್ಧ ತೆಲುಗಿನ ಫಿಲಂ ಚೇಂಬರ್ ಮೆಟ್ಟಿಲು ಏರಿದ್ದು, ವರ್ಮಾ ವಿರುದ್ಧ ದೂರು ನೀಡಿವೆ.
ಇದನ್ನೂ ಓದಿ:ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟ್‌ನಲ್ಲಿ ರಿಷಬ್ ಶೆಟ್ಟಿ: ಇದು ವಿಶೇಷ ಸಂಚಿಕೆ
ಪ್ರಶಾಂತ್ ವರ್ಮಾ, ರಿಷಬ್ ಶೆಟ್ಟಿ ನಟಿಸಲಿರುವ ‘ಜೈ ಹನುಮಾನ್’ ಸಿನಿಮಾ ಘೋಷಣೆ ಮಾಡಿದ್ದಾರೆ. ಹೊಂಬಾಳೆಯಿಂದ ಅಡ್ವಾನ್ಸ್ ಪಡೆದು ಪ್ರಭಾಸ್ ಜೊತೆಗೆ ಸೂಪರ್ ಹೀರೋ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಹಿಂದೂ ದೇವರುಗಳ ಕತೆಗಳನ್ನು ಇರಿಸಿಕೊಂಡು ಸೂಪರ್ ಹೀರೋ ಸಿನಿಮಾ ನಿರ್ಮಾಣ ಮಾಡುವುದಾಗಿ ಯೂನಿವರ್ಸ್ ಕ್ರಿಯೇಟ್ ಮಾಡುವುದಾಗಿ ಪ್ರಶಾಂತ್ ವರ್ಮಾ ಈ ಹಿಂದೆ ಹೇಳಿದ್ದರು. ಈ ಹಿಂದೆ ಬಾಲಿವುಡ್ ನಟ ರಣ್ವೀರ್ ಸಿಂಗ್ ಜೊತೆಗೆ ಪ್ರಶಾಂತ್ ವರ್ಮಾ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಸಿನಿಮಾ ಸೆಟ್ಟೇರಲಿಲ್ಲ, ರಣ್ವೀರ್ ಸಿಂಗ್ ಸಿನಿಮಾದಿಂದ ಹೊರನಡೆದರು. ರಣ್ವೀರ್ ಸಿಂಗ್ ಸಿನಿಮಾದಿಂದ ಹೊರಹೋಗಲು ಪ್ರಶಾಂತ್ ವರ್ಮಾನ ಉದ್ಧಟತನವೇ ಕಾರಣ ಎಂಬ ಸುದ್ದಿ ಆಗಲೇ ಹರಿದಾಡಿತ್ತು. ಆದರೆ ಈಗ ನೋಡಿದರೆ ವರ್ಮಾ ವಿರುದ್ಧ ದೂರು ದಾಖಲಾಗಿದೆ.
ಆದರೆ ಡಿವಿವಿ ನಿರ್ಮಾಣ ಸಂಸ್ಥೆಯು ತಮಗೂ ಹಾಗೂ ಪ್ರಶಾಂತ್ ವರ್ಮಾ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿದೆ. ಆದರೆ ಬೇರೆ ಯಾವ ನಿರ್ಮಾಣ ಸಂಸ್ಥೆಗಳು ಸಹ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ