ತುಮಕೂರು, ನವೆಂಬರ್ 3: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಆಂಧ್ರ ಗಡಿಯಲ್ಲಿ ಕಲಬೆರಕೆ ಸೇಂದಿ ಸೇವಿಸಿದ 15 ಮಂದಿ ಅಸ್ವಸ್ಥಗೊಂಡ ಘಟನೆ ಬೆಳಕಿಗೆ ಬಂದಿದೆ. ತೆರಿಯೂರು ಗ್ರಾಮದ 10 ಮಂದಿ ಹಾಗೂ ಆಂಧ್ರಪ್ರದೇಶದ ಚೋಳೂರು ಗ್ರಾಮದ 5 ಮಂದಿ ಅಸ್ವಸ್ಥರಾಗಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ ನಿರ್ಮಾಣವಾಗಿದೆ, ಚಿಕಿತ್ಸೆಗಾಗಿ ಹಿಂದೂಪುರ ಹಾಗೂ ಬೆಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಸ್ವಸ್ಥರಾದ ನಾಗರಾಜು ಮತ್ತು ನಿಂಗಕ್ಕ ಅವರನ್ನು ಹಿಂದೂಪುರ ಆಸ್ಪತ್ರೆಗೆ ದಾಖಲಿಸಲಾಗಿದೆ, ತೇರಿಯೂರು ಗ್ರಾಮದ ಮಾರಪ್ಪ, ದಾಸಪ್ಪ, ಚಿಕ್ಕನರಸಿಂಹಯ್ಯ ಹಾಗೂ ಟಿ. ನಾಗರಾಜು ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇನ್ನುಳಿದವರು ಪ್ರಾಥಮಿಕ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿಸಿದರು. ಘಟನೆ ನಡೆದ ಸ್ಥಳವಾದ ಚರ್ಲಾಪಳ್ಳಿ ಮುದ್ದೇನಹಳ್ಳಿ ಗೇಟ್ ಬಳಿ ಕೊಡಿಗೇನಹಳ್ಳಿ ಪೊಲೀಸರು ಹಾಗೂ ಆಂಧ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನಡೆದ ಈ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ