ಕನ್ನಡ ಚಿತ್ರರಂಗದ ಖ್ಯಾತ ನಟ ಹರೀಶ್ ರಾಯ್ ಅವರು ನಿಧನರಾಗಿದ್ದಾರೆ. ಅವರಿಗೆ ಕೇವಲ 55 ವರ್ಷ ವಯಸ್ಸಾಗಿತ್ತು. ಬದುಕಿ ಬಾಳಬೇಕಿದ್ದ ಅವರಿಗೆ ಕ್ಯಾನ್ಸರ್ ಬಲಿ ಪಡೆದಿದೆ. ಹಲವು ವರ್ಷಗಳಿಂದ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಈಗ ಹರೀಶ್ ರಾಯರ ನಿಧನಕ್ಕೆ ಎಲ್ಲರೂ ಸಂತಾಪ ಸೂಚಿಸುತ್ತಿದ್ದಾರೆ. ‘ಓಂ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಇದಲ್ಲದೆ, ‘ಕೆಜಿಎಫ್ 2’ ಚಿತ್ರದಲ್ಲಿ ಚಾಚಾ ಹೆಸರಿನ ಪಾತ್ರವನ್ನು ಹೊಂದಿದ್ದರು. ಅವರ ಹಿನ್ನೆಲೆಯ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.
ಹರೀಶ್ ರಾಯರು ಈ ಮೊದಲು TV9 ಕನ್ನಡದ ಜೊತೆಗೆ ಮಾತನಾಡುವಾಗ ತಮ್ಮ ಹಿನ್ನೆಲೆಯ ಬಗ್ಗೆ ಹೇಳಿದ್ದರು. ‘ನಾವು ಉಡುಪಿಯವರು. ನನ್ನ ತಾಯಿ ಕಡೆಯವರು ಚಿನ್ನದ ಅಂಗಡಿ ಹೊಂದಿದ್ದರು. ನಮ್ಮ ತಂದೆಯವರು ದೊಡ್ಡ ಜಮೀನುದಾರರು. ಊಳುವವನೇ ಹೊಲದ ಒಡೆಯ ಎಂಬ ಇಂದಿರಾ ಗಾಂಧಿ ತಂದ ನಿಯಮದಿಂದ ಒಂದಷ್ಟು ತೋಟ ಇಲ್ಲ. ಆದರೂ ಸುಮಾರು ತೋಟ ಇಲ್ಲ’ ಎಂದು ಹರೀಶ್ ಹೇಳಿದ್ದಾರೆ.
‘ನನಗೆ ತಾಯಿಯ ಪ್ರೀತಿ ನನಗೆ ಸಿಗಲಿಲ್ಲ. ನಾನು ಬೇರೆಯವರ ಮನೆಯಲ್ಲಿ ಬೆಳೆಯಬೇಕಾದ ಪರಿಸ್ಥಿತಿ ಬಂತು. ಈ ಕಥೆಯನ್ನು ಇನ್ನೊಂದು ದಿನ ಹೇಳ್ತೀನಿ. ಒಂದು ವರ್ಷ ಇದ್ದಾಗಲೇ ಬೇರೆಯವರ ಮನೆ ಸೇರಿದೆ. ನಾನು ಒಂದನೇ ತರಗತಿಯವರೆಗೆ ಬೇರೆಯವರ ಮನೆಯಲ್ಲೇ ಇದ್ದೆ. ನಂತರ ಮತ್ತೆ ಮನೆಗೆ ಬಂದೆ. ನನ್ನ ತಂದೆಗೆ ಕೋಪ ಜಾಸ್ತಿ. ನಾಗರ ಬೆಟ್ಟ ಎಂಬುದಿತ್ತು. ನನ್ನ ತಂದೆ ಹೊಡೆಯುತ್ತಿದ್ದರು. ತುಂಬಾ ಏಟು ತಿಂದಿದ್ದೇನೆ’ ಎಂದಿದ್ದರು ಹರೀಶ್ ರಾಯರು.
‘ನಾನು 10 ನೇ ತರಗತಿಯವರೆಗೆ ಮಾತ್ರ ಓದಿದೆ. ಒಂದು ದಿನ ಶಾಲೆಯಲ್ಲಿ ತಪ್ಪು ಮಾಡಿದೆ. ಅಪ್ಪನ ಕರೆದು ಬನ್ನಿ ಎಂದರು. ಭಯದಿಂದ ಸ್ಕೂಲ್ ಬಿಟ್ಟು ಬಾಂಬೆಗೆ ಓಡಿ ಹೋದೆ. 2 ವರ್ಷ ಅಲ್ಲೇ ಇದ್ದೆ. ಉಡುಪಿಯವರ ಜೊತೆ ಇದ್ದೆ. ನಾನು ಉಡುಪಿ ಭಟ್ಟರ ಮಗ ಅನ್ನೋದು ಗೊತ್ತಾಯ್ತು. ಅವರು ಮರಳಿ ಕಳುಹಿಸಿದರು. ಬಾಂಬೆಯಲ್ಲಿ ನನ್ನ ಮೇಲೆ ಕೆಲವು ಕೇಸುಗಳು ಇದ್ದವು. ಕೆಲವು ರೌಡಿಗಳನ್ನು ಎದುರು ಹಾಕಿಕೊಂಡಿದ್ದೆ. ಭೂಗತ ಜಗತ್ತಿನ ಪರಿಚಯವೂ ಆಗಿದೆ. ಹೀಗಾಗಿ, 1994ರಲ್ಲಿ ಬೆಂಗಳೂರಿಗೆ ಬಂದೆ’ ಎಂದಿದ್ದರು ಅವರು.
ಇದನ್ನೂ ಓದಿ: ಗೆದ್ದ ಕ್ಯಾನ್ಸರ್, ಖ್ಯಾತ ಖಳನಟ ಹರೀಶ್ ರಾಯ್ ನಿಧನ
‘ನನ್ನ ಗೆಳೆಯ ಉಪೇಂದ್ರ ಅವರನ್ನು ಪರಿಚಯ ಮಾಡಿಕೊಂಡರು. ಆ ಬಳಿಕ ಇಂಡಸ್ಟ್ರಿ ಪರಿಚಯ ಆಯಿತು. ಈ ವೇಳೆ ‘ಓಂ’ ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ಕಿತು’ ಎಂದಿದ್ದರು ಹರೀಶ್ ರಾಯ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.