
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾದಲ್ಲಿ ಸದ್ಯ ಬಿಗ್ ಬಾಸ್ ಕನ್ನಡ 12ರಲ್ಲಿ ಮನೆಮಾತಾಗಿರುವ ‘ಗಿಲ್ಲಿ’ ನಟ ನಟರಾಜ್ ಅವರು ಮಿಂಚಿರೋದು ಅವರ ಅಭಿಮಾನಿಗಳಿಗೆ ಸಖತ್ ರೋಮಾಂಚನ ತಂದಿದೆ. ಯಾವ ಪಾತ್ರ? ದರ್ಶನ್ ಸ್ನೇಹಿತರಾ? ಸ್ಟೋರಿ ನೋಡಿ..
ಕನ್ನಡದ ಸ್ಟಾರ್ ನಟ, ಕೊಲೆ ಅರೋಪದಲ್ಲಿ ಸದ್ಯಕ್ಕೆ ಜೈಲು ಪಾಲಾಗಿರುವ ದರ್ಶನ್ ತೂಗುದೀಪ ಅವರ ಮುಂಬರುವ ಸಿನಿಮಾ ‘ಡೆವಿಲ್’ ಇದೇ ತಿಂಗಳು 12 ರಂದು (12 December 2025) ತೆರೆಗೆ ಬರಲಿದೆ. ಇದೀಗ ಡೆವಿಲ್ ಚಿತ್ರದ ನಿರ್ಮಾಣ ಸಂಸ್ಥೆಯಾಗಿರುವ ‘ಶ್ರೀಜೈಮಾತಾ ಕಂಬೈನ್ಸ್’ ರವರು ತಮ್ಮ ಡೆವಿಲ್ ಚಿತ್ರದ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿರುವ ಹಲವು ಕಲಾವಿದರ ಪೋಸ್ಟರ್ಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದೆ. ಇದೀಗ ‘ಗಿಲ್ಲಿ’ ಖ್ಯಾತಿಯ ನಟ ನಟರಾಜ್ ಅವರ ಪೋಸ್ಟರ್ ರಿಲೀಸ್ ಆಗಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.
ಗಿಲ್ಲಿ ನಟ ಅವರ ನಿಜವಾದ ಹೆಸರು ʻನಟರಾಜ್ʼ. ಇವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರದ ಹಳ್ಳಿಯ ರೈತ ಕುಟುಂಬದಿಂದ ಬಂದವರು. ಗಿಲ್ಲಿ ನಟ ತಮ್ಮ 10ನೇ ತರಗತಿ ಪೂರ್ಣಗೊಳಿಸಿದ ನಂತರ 2 ವರ್ಷಗಳ ಕೋರ್ಸ್ ಐಟಿಐ ಮಾಡಿದ್ದಾರೆ. ಪಕ್ಕಾ ಹಳ್ಳಿ ಪ್ರತಿಭೆಯಾಗಿರುವ ಗಿಲ್ಲಿ, ತಮ್ಮ ಮಾತನಾಡುವ ಶೈಲಿಯನ್ನೇ ತನ್ನ ಕಾಮಿಡಿ ಡೈಲಾಗ್ನಲ್ಲಿ ಬಳಸಿಕೊಂಡು ಭಾರೀ ಜನಪ್ರಿಯತೆ ಪಡೆದಿದ್ದಾರೆ.
ʻಕಾಮಿಡಿ ಕಿಲಾಡಿಗಳು ಸೀಸನ್ 4ʼ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಗಿಲ್ಲಿ ರನ್ನರ್ ಅಪ್ ಪಟ್ಟ ಕೂಡ ಗಿಟ್ಟಿಸಿಕೊಂಡರು. ನಂತರ ಜೀ ಕನ್ನಡ ವಾಹಿನಿಯ ʻಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ʼ ಶೋನಲ್ಲಿ ಪ್ರಾಪರ್ಟಿ ಕಾಮಿಡಿ ಮಾಡುವ ಮೂಲಕ ಮತ್ತಷ್ಟು ವೀಕ್ಷಕರಿಗೆ ಗಿಲ್ಲಿ ಹತ್ತಿರವಾದರು. ಬಳಿಕ ʻಭರ್ಜರಿ ಬ್ಯಾಚುಲರ್ಸ್ʼ ರಿಯಾಲಿಟಿ ಶೋನಲ್ಲಿ ಗಿಲ್ಲಿ ಮಿಂಚಿದ್ದರು.
ಇತ್ತೀಚೆಗೆ ʻಕ್ವಾಟ್ಲೆ ಕಿಚನ್ʼ ಕುಕ್ಕಿಂಗ್ ಶೋನಲ್ಲಿಯೂ ಗಿಲ್ಲಿ ʻಕ್ವಾಟ್ಲೆʼ ಆಗಿ ಕಾಣಿಸಿಕೊಂಡಿದ್ದರು. ಸದ್ಯ ʻಬಿಗ್ ಬಾಸ್ʼ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ತಮ್ಮ ನಿಜವಾದ ಆಟದ ಮೂಲಕ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ವಿನ್ನರ್ ಕಾಂಡಿಡೇಟ್ ಎಂದೇ ಗಿಲ್ಲಿ ನಟ ನಟರಾಜ್ ಅವರನ್ನು ಹೈಲೈಟ್ ಮಾಡಲಾಗುತ್ತಿದೆ. ಇದೀಗ ನೋಡಿದರೆ, ದರ್ಶನ್ ನಟನೆಯ ಡೆವಿಲ್ ಸಿನಿಮಾದಲ್ಲಿ ಕೂಡ ಗಿಲ್ಲಿ ಮಿಂಚಿರೋದು ಅವರ ಅಭಿಮಾನಿಗಳಿಗೆ ಸಖತ್ ರೋಮಾಂಚನ ತಂದಿದೆ.