ಇದೇನು ಶಿಕ್ಷಣವೋ ವ್ಯವಹಾರವೋ? ಹೂ ಮನಸಿನ ಮಕ್ಕಳ ಭವಿಷ್ಯ ಮುರುಟದಿರಲಿ

ಇದೇನು ಶಿಕ್ಷಣವೋ ವ್ಯವಹಾರವೋ? ಹೂ ಮನಸಿನ ಮಕ್ಕಳ ಭವಿಷ್ಯ ಮುರುಟದಿರಲಿ


ಈಗ ಎಸ್ಸೆಸ್ಸೆಲ್ಸಿ ಓದುತ್ತಿರುವ ಮುಂದಿನ ವಿದ್ಯಾಭ್ಯಾಸಕ್ಕೆ ಸೀಟು ಕಾಯ್ದಿರಿಸುವ ಪ್ರಕ್ರಿಯೆ ಶುರುವಾಗಿಬಿಟ್ಟಿದೆ. ಮೊದಲ ಇಂತಿಷ್ಟು ಮೊತ್ತ ಅಂತ ಕೊಡಿ “ಸೀಟು ಬ್ಲಾಕ್ ಮಾಡಬೇಕಂತೆ. ಇನ್ನು ಮುಂದೆ ಒಂದು ಪ್ರವೇಶ ಪರೀಕ್ಷೆಯನ್ನು ಕಾಲೇಜಿನ ಕಡೆಯವರು ನಿಗದಿ ಮಾಡುತ್ತಾರೆ. ಅದನ್ನು ಬರೆದ ವಿದ್ಯಾರ್ಥಿಗಳ ಅಂಕಗಳ ಆಧಾರದ ಮೇಲೆ ವಿಜ್ಞಾನವೋ ವಾಣಿಜ್ಯವೋ ಕಲೆಯೋ ಅಂತ ತೀರ್ಮಾನಿಸಿ, ಅದರ ಮೂಲಕವೇ ಶುಲ್ಕವನ್ನು ಸಹ ನಿಗದಿಪಡಿಸಲಾಗಿದೆ. ನವೆಂಬರ್ ತಿಂಗಳಿನಲ್ಲಿ ಈಗ ಇದ್ದೇವೆ. ಹೆಚ್ಚೂ ಕಡಿಮೆ ಮುಂದಿನ ವರ್ಷದ ಮಾರ್ಚ್ ವೇಳೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆದು, ಮೇ ತಿಂಗಳ ಮೊದಲ ಅಥವಾ ಎರಡನೇ ವಾರದ ಫಲಿತಾಂಶ ಬರುತ್ತದೆ. ಅಲ್ಲಿಗೆ ಮುಖ್ಯ ಪರೀಕ್ಷೆಗೆ ನಾಲ್ಕೈದು ತಿಂಗಳು ಬಾಕಿ ಇದೆ. ಅಷ್ಟರಲ್ಲಾಗಲೇ ಕಾಲೇಜು ಯಾವುದು, ಕಾಂಬಿನೇಷನ್ ಯಾವುದು ಅನ್ನುವುದನ್ನು ಆಖೈರು ಮಾಡಿಕೊಂಡುಬಿಡಬೇಕು.

ತಮಾಷೆ ವಿಷಯ ಏನು ಗೊತ್ತಾ? ಕಲಾ ವಿಭಾಗದ ಬಗ್ಗೆ ಅಷ್ಟಾಗಿ ಆಸಕ್ತಿಯೇ ಕಾಣುತ್ತಿಲ್ಲ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜುವೊಂದಕ್ಕೆ ಸ್ನೇಹಿತನ ಮಗನ ಪ್ರವೇಶದ ವಿಚಾರಕ್ಕೆ ತೆರಳಿದ್ದಾಗ ನನಗೆ ತಿಳಿದ ಮಾಹಿತಿ ಏನೆಂದರೆ, ಇಪ್ಪತ್ತೈದು ಸಾವಿರ ರೂಪಾಯಿ ಕೊಟ್ಟು ಸೀಟ್ ಬ್ಲಾಕ್ ಮಾಡಬೇಕು. ಕನಿಷ್ಠ ಎಪ್ಪತ್ತೈದು ಪರ್ಸೆಂಟ್ ಬಾರದೇ ಹೋದಾಗ ಆ ಕಾಲೇಜಲ್ಲಿ ಪ್ರವೇಶ ಇಲ್ಲವಂತೆ. ಕನಿಷ್ಠ ಅಷ್ಟು ಅಂಕ ಬಂದಲ್ಲಿ ವಾಣಿಜ್ಯ ವಿಷಯದ ಆಯ್ಕೆಗೆ ತೊಂಬತ್ತು ಸಾವಿರ ಶುಲ್ಕ ಹಾಗೂ ವಿಜ್ಞಾನ ವಿಷಯಕ್ಕೆ ಒಂದು ಲಕ್ಷ ರೂಪಾಯಿ ಶುಲ್ಕ. ಆ ನಂತರ ಎಪ್ಪತ್ತೈದು ಪರ್ಸೆಂಟ್ ಗಿಂತ ಹೆಚ್ಚು ಅಂಕ ಬಂದಲ್ಲಿ, ಪ್ರತಿ ಐದು ಪರ್ಸೆಂಟ್ ಮೊತ್ತಕ್ಕೆ ಹತ್ತು ಸಾವಿರ ರೂಪಾಯಿ ಶುಲ್ಕ ಕಡಿಮೆ ಆಗುತ್ತದೆ. ಇನ್ನು ತಂದೆಯೋ ತಾಯಿಯೋ ಅದೇ ಕಾಲೇಜಿನಲ್ಲಿ ಓದಿದವರಾಗಿದ್ದರೆ ಶೇಕಡಾ ಹತ್ತು ಪರ್ಸೆಂಟ್ ರಿಯಾಯಿತಿ. ಅದೇ ಶಿಕ್ಷಣ ಸಂಸ್ಥೆಯಲ್ಲಿ ನಡೆಸುವ ಶಾಲೆಯಲ್ಲಿ ಓದಿದ ಮಕ್ಕಳಿಗೆ ಪ್ರವೇಶಕ್ಕೆ ಹಾಗೂ ಕಾಯ್ದಿರಿಸುವಿಕೆಯಲ್ಲೂ ಪ್ರಾಧಾನ್ಯ ಫೀ ಕೂಡ ರಿಯಾಯಿತಿ.

ಕಾಲೇಜಿನವರು ಉದಾರತೆ ಏನೆಂದರೆ, ಯಾರು ಸೀಟು ಬ್ಲಾಕ್ ಮಾಡಿಸಿರುತ್ತಾರಲ್ಲ ಆ ಹುಡುಗನದೋ ಅಥವಾ ಹುಡುಗಿಯದೋ ಎಪ್ಪತ್ತೈದು ಪರ್ಸೆಂಟ್ ಗಿಂತ ಕಡಿಮೆ ಬಂದರೂ ವಿನಾಯಿತಿ ತೋರಿಸಿ, ದೊಡ್ಡ ಮನಸ್ಸಿನ ಪ್ರವೇಶವನ್ನು ನೀಡುವುದಿಲ್ಲ.

ಈ ವರ್ಷದ ಜೂನ್‌ನಲ್ಲಿ ಎಸ್ಸೆಸ್ಸೆಲ್ಸಿ ತರಗತಿಗಳು ಪ್ರಾರಂಭವಾದವು ಅಂದುಕೊಂಡರೆ ನವೆಂಬರ್ ತಿಂಗಳಿನಲ್ಲಿ ಆರು ತಿಂಗಳು ಸಂಪೂರ್ಣ ಆದಂತಾಗುತ್ತದೆ. ಅದರಲ್ಲಿ ದಸರಾ ರಜಾ, ಹಬ್ಬ ಹರಿದಿನ, ಸರ್ಕಾರಿ ರಜಾ- ಭಾನುವಾರ ಎಂದೆಲ್ಲ ಲೆಕ್ಕ ಹಾಕಿದಲ್ಲಿ ಎಷ್ಟು ಪಠ್ಯಕ್ರಮ ಮುಗಿದಿರುವುದಕ್ಕೆ ಸಾಧ್ಯ? ಇನ್ನು ಟ್ಯೂಷನ್, ಯೂನಿಟ್ ಪರೀಕ್ಷೆಗಳು, ಸರ್ ಪ್ರೈಸ್ ಪರೀಕ್ಷೆಗಳು ಮತ್ತು ಎಲ್ಲಾ ಕಾಲೇಜಿನಲ್ಲಿ ಪ್ರವೇಶಕ್ಕೆ ಈಗಲೇ ಸೀಟ್ ಬ್ಲಾಕ್ ಮಾಡಬೇಕು, ಅದಕ್ಕೆ ಪ್ರವೇಶ ಪರೀಕ್ಷೆ ಬರೆಯಬೇಕು. ಅದರಲ್ಲಿಯೂ ಭಯಂಕರ ಒಳ್ಳೆ ಅಂಕ ಬರಲೇಬೇಕು.

ನನ್ನ ಸ್ನೇಹಿತನ ಮಗ ಡಿಪ್ಲೊಮಾ ತೆಗೆದುಕೊಂಡರೆ ಹೇಗೆ ಶಾಲೆಯ ದಿನಗಳಲ್ಲಿ ಸಹಪಾಠಿಯಾಗಿದ್ದವನ ವಿಚಾರಿಸಿದರೆ, ಈಗ ಬರೀ ಡಿಪ್ಲೊಮಾ ಸಾಕಾಗುವುದಿಲ್ಲ, ಎಂಜಿನಿಯರಿಂಗ್ ಸಹ ಮಾಡಬೇಕು. ಹಾಗೆ ಎಂಜಿನಿಯರಿಂಗ್ ಮಾಡಿದವರು ಇವತ್ತಿಗೆ ನನ್ನ ಕಂಪನಿಯಲ್ಲಿ ಒಂದು ಸಾವಿರ ರೂಪಾಯಿ ಅಪ್ರೆಂಟಿಸ್ ಶಿಪ್ ಪಡೆಯಲು ಬಡಿದಾಟ ನಡೆಸುವಂತೆ ಪ್ರಯತ್ನ ಮಾಡುತ್ತಾ ಇದ್ದಾರೆ ಅಂತ ಹೇಳಿದ್ದಾರೆ. ಅಂದ ಹಾಗೆ ನನ್ನ ಸ್ನೇಹಿತ ಡಿಪ್ಲೊಮಾ ಓದಿದವನು. ಸುಮಾರು ಹದಿನೈದು ವರ್ಷಗಳ ಹಿಂದೆ ಅವನಿಗೆ ಎಚ್ಎಎಲ್ ನಲ್ಲಿ ಕಾಯಂ ಕೆಲಸ ಸಿಕ್ಕಿತು. ಅವನು ಇನ್ನೂ ಮುಂದುವರಿದು, ಈಗ ಏನು ಓದಿದರೆ ಮುಂದೆ ಕೆಲಸ ಸಿಗುತ್ತದೆ, ಒಳ್ಳೆ ಸಂಬಳ ಸಿಗುತ್ತದೆ ಅಂತ ಹೇಳುವ ಧೈರ್ಯವೇ ನನಗಿಲ್ಲ. ಎಐ- ಮಶೀನ್ ಲರ್ನಿಂಗ್ ಇವೆಲ್ಲವೂ ಬಂದ ಮೇಲೆ ಕೆಲಸ ಕಳೆದುಕೊಳ್ಳುವವರೇ ಎಲ್ಲ ಕಡೆ ಕಾಣಿಸುತ್ತಾ ಇದ್ದಾರೆ. ಈಗ ಓದಿಗೆಲ್ಲ ಲಕ್ಷಗಟ್ಟಲೆ ದುಡ್ಡು ಸುರಿಯುವ ಬದಲಿಗೆ, ಒಂದು ಸರ್ಕಾರಿ ಪಿಯು ಕಾಲೇಜಿಗೆ ಹುಡುಗನನ್ನು ಸೇರಿಸಿ, ಒಂದೊಳ್ಳೆ ಕಡೆ ಟ್ಯೂಷನ್ ಸೇರಿಸಿದರೆ ಒಳ್ಳೆಯದು. ಯಾವುದೇ ಒಳ್ಳೆಯ ಕಾಲೇಜು ಅಂತ ರೂಪಾಯಿ ಕೊಟ್ಟು ಕಾಲೇಜಿಗೆ ಸೇರಿಸಿದರೂ ಟ್ಯೂಷನ್ ಗೆ ಸೇರಿಸಬೇಕು. ಆದರೆ ಬದಲಾಗಿ ಕಡಿಮೆ ಫೀ ಇರುವ ಕಾಲೇಜಿಗೆ ಸೇರಿಸುವುದು ಒಳ್ಳೆಯದು ಎಂಬ ಸಲಹೆಯನ್ನು ನೀಡಿ.

ಆದರೆ, ಎಸ್ಸೆಸ್ಸೆಲ್ಸಿ ನಂತರದ ಕೋರ್ಸ್‌ಗಳಿಗೆ ಇಷ್ಟು ಬೇಗ ಪ್ರವೇಶ ಪ್ರಕ್ರಿಯೆ ಶುರು ಮಾಡುವುದು ಎಷ್ಟರ ಮಟ್ಟಿಗೆ ಸರಿ? ಇಂಥ ವಿಚಾರಗಳಿಗೆ ಸರ್ಕಾರದಿಂದ ಸಹಮತ ಇದೆಯಾ? ಮಕ್ಕಳು ಹಾಗೂ ಪೋಷಕರ ಪರಿಸ್ಥಿತಿ ಎಲ್ಲಿಗೆ ಮುಟ್ಟುತ್ತಾ ಇದೆ ಎಂಬುದು ಈಗ ಬಹುವಾಗಿ ಕಾಡುತ್ತಿರುವ ಆತಂಕ. ಈ ಲೇಖನದಲ್ಲಿ ಹೇಳಿರುವ ಕಾಲೇಜು ಒಂದು ಸಂಕೇತ ಮಾತ್ರ. ಈ ಆ ಕಾಲೇಜಿನ ಹೆಸರನ್ನು ಸೂಚಿಸಲು ಹೋಗಿಲ್ಲ. ಆದರೆ ಎಲ್ಲ ಕಡೆ ಇದೇ ಪರಿಸ್ಥಿತಿ ಇದೆ.

ನಾನು ಹಾಗೂ ನನ್ನ ಸ್ನೇಹಿತ ಭೇಟಿ ನೀಡಿದ್ದ ಕಾಲೇಜಿನಲ್ಲಿ ಅಲ್ಲಿನ ಉಪನ್ಯಾಸಕರಿಗೆ ಯಾರಿಗೂ ಸರ್ಕಾರದಿಂದ ಸಂಬಳ ಬರುವುದಿಲ್ಲ. ಆದ್ದರಿಂದ ಸರ್ಕಾರದ ನಿಯಮಗಳು ಹಲವು ತಮಗೆ ಅನ್ವಯಿಸುವುದಿಲ್ಲ ಎಂಬ ಧ್ವನಿಯಲ್ಲಿ ಉತ್ತರ ಲಭ್ಯವಾಗಿದೆ.

ಎಸ್ಸೆಸ್ಸೆಲ್ಸಿಗೆ ಸಪ್ಲಿಮೆಂಟರಿ ಪರೀಕ್ಷೆಯೂ ಇರುತ್ತದೆ. ಅದರಲ್ಲಿ ಪಾಸ್ ಆಗಿರುವವರು ಸ್ಥಿತಿ ಏನು ಅಂತ ನೆನೆಸಿಕೊಂಡರೆ ಗಾಬರಿ ಆಗುತ್ತದೆ. ಈ ಮಧ್ಯೆ ಸರ್ಕಾರದಿಂದ ಪಾಸ್ ಆಗುವ ಕನಿಷ್ಠ ಅಂಕವನ್ನು 33ಕ್ಕೆ ಇಳಿಸಲಾಗಿದೆ. ಸರಿ, ಆ ವಿದ್ಯಾರ್ಥಿಯು ಬೆಂಗಳೂರಿನಂಥ ಕಾಲೇಜಿನಲ್ಲಿ ಯಾವ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಸಾಧ್ಯ? ಹೀಗೆ ಬರೆದು ಯಾರನ್ನೂ ಹೀಗಳೆಯುವುದೋ ಅಥವಾ ಆತ್ಮಸ್ಥೈರ್ಯ ಕುಗ್ಗಿಸುವುದು ಖಂಡಿತಾ ಉದ್ದೇಶವಲ್ಲ.

ಶಿಕ್ಷಣದಲ್ಲಿನ ಶಿಕ್ಷಣ ವ್ಯವಸ್ಥೆಯು ಹೀಗಿದೆ, ಇದರ ದೂರಗಾಮಿ ಪರಿಣಾಮವು ಆಲೋಚಿಸಿದರೆ ಹೃದಯವನ್ನು ಕತ್ತರಿಸುವಷ್ಟು ನೋವೆನಿಸುತ್ತದೆ. ಶಿಕ್ಷಣ ಸಂಸ್ಥೆಗಳಿಂದ ಲಾಭದ ಉದ್ದೇಶವಿಲ್ಲದೆ ನಡೆಸಬೇಕು ಎಂಬ ಕಾನೂನು ಇರುವಂಥ ದೇಶ ಭಾರತ. ಆದರೆ ಶುಲ್ಕಕ್ಕೆ, ಪ್ರವೇಶಾತಿಯ ವಿಚಾರಕ್ಕೆ ನಡೆಯುವ ಇಂಥ “ವಹಾರ”ಗಳು ಒಂದು ಚುನಾಯಿತ ಸರ್ಕಾರದ ಮೂಗಿನಡಿಯಲ್ಲಿ ನಡೆಯುತ್ತಿದೆ ಹಾಗೂ ಅದನ್ನು ವಿರೋಧಿಸಬೇಕಾದ ಕಡ್ಡಾಯ- ವಿದ್ಯಾರ್ಥಿಗಳು ಹಾಗೂ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದಾರೆ ಅಸಹ್ಯ ಹಾಗೂ ನಾಚಿಕೆಗೇಡು.

ಎಂ. ಶ್ರೀನಿವಾಸ, ಬೆಂಗಳೂರು



Source link

Leave a Reply

Your email address will not be published. Required fields are marked *