ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ವೇಳೆ ಗಿಲ್ ಭಾಗವಹಿಸಿದ್ದಾರೆ. ಈ ಮಗುವಿನ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಗಿಲ್ ಲೆಗ್ ಸೈಡ್ನತ್ತ ಫೋರ್ ಬಾರಿಸಿದಾಗ ಕುತ್ತಿಗೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹೀಗಾಗಿ ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ಹೊರ ನಡೆದಿದ್ದರು.
ಇದಾದ ಬಳಿಕ ವಿಪರೀತ ನೋವಿಗೆ ಒಳಗಾದ ಶುಭಮನ್ ಗಿಲ್ ಅವರನ್ನು ಕೊಲ್ಕತ್ತಾದ ವುಡ್ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಜೊತೆಗೆ ಅವರನ್ನು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಗಿದೆ ಎಂದು ತಿಳಿದು ಬಂದಿದೆ.
ಕುತ್ತಿಗೆ ಭಾಗದ ಸ್ನಾಯು ಸೆಳೆತದಿಂದಾಗಿ ಅವರು ತೊಂದರೆಗೆ ಸಿಲುಕಿದ್ದಾರೆ, ಹೀಗಾಗಿ ಕೊಲ್ಕತ್ತಾದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಟೀಮ್ ಇಂಡಿಯಾ ಮೂಲಗಳು ತಿಳಿಸಿವೆ. ಜೊತೆಗೆ ಮೂರನೇ ದಿನದಾಟದಲ್ಲಿ ಭಾರತ ತಂಡವನ್ನು ಉಪನಾಯಕ ರಿಷಭ್ ಪಂತ್ ಮುನ್ನಡೆಸಲಿದ್ದಾರೆ.
ಇನ್ನು ಕೊಲ್ಕತ್ತಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು 159 ರನ್ ಗಳಿಸಿ ಆಲೌಟಾದರೆ, ಟೀಮ್ ಇಂಡಿಯಾ ಪ್ರಥಮ 189 ರನ್‌ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿತು. ಇನ್ನು ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಸೌತ್ ಆಫ್ರಿಕಾ ತಂಡವು ಎರಡನೇ ದಿನದಾಟದ ಅಂತ್ಯದ ವೇಳೆಗೆ 7 ರನ್ ಕಳೆದುಕೊಂಡು 93 ರನ್ ಕಲೆಹಾಕಿದೆ.