ಸಾರ್ವತ್ರಿಕ ಮಕ್ಕಳ ದಿನಚಿತ್ರ ಕ್ರೆಡಿಟ್ ಮೂಲ: Freepik
ಮಕ್ಕಳು (ಮಕ್ಕಳ) ಭವಿಷ್ಯದ ಪ್ರಜೆಗಳು, ಅತ್ಯಮೂಲ್ಯ ಸಂಪತ್ತು ಮತ್ತು ಭವಿಷ್ಯದ ಅತ್ಯುತ್ತಮ ಭರವಸೆ ಕೂಡ ಹೌದು. ಹೀಗಿರುವಾಗ ಸದೃಢ ರಾಷ್ಟ್ರ ನಿರ್ಮಾಣವಾಗಬೇಕಾದರೆ, ಜಗತ್ತು ಸಕಾರಾತ್ಮಕ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕಾದರೆ ಮಕ್ಕಳನ್ನು ಸಶಕ್ತಗೊಳಿಸುವುದು ತುಂಬಾ ಮುಖ್ಯ. ಹೀಗಾಗಿ ಮಕ್ಕಳು ಆರೋಗ್ಯವಂತ, ವಿದ್ಯಾವಂತ ಮತ್ತು ಪ್ರಜ್ಞಾವಂತ ನಾಗರಿಕರಾಗಿ ಬೆಳೆಯಬೇಕು ಎಂಬ ಕಾರಣಕ್ಕಾಗಿ ಹಾಗೂ ಪ್ರತಿಯೊಬ್ಬ ಮಗುವಿಗೆ ಉತ್ತಮ ಶಿಕ್ಷಣ, ಆರೋಗ್ಯ, ಆಟ, ಸುರಕ್ಷತೆ ಮತ್ತು ಸಬಲೀಕರಣವನ್ನು ಉತ್ತೇಜಿಸುವ ಸಲುವಾಗಿ ನವೆಂಬರ್ 20 ರಂದು ಸಾರ್ವತ್ರಿಕ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗೆಗಿನ ಮಾಹಿತಿಯನ್ನು ತಿಳಿಯಿರಿ.
ಸಾರ್ವತ್ರಿಕ ಮಕ್ಕಳ ದಿನಾಚರಣೆಯ ಇತಿಹಾಸವೇನು?
ಸಾರ್ವತ್ರಿಕ ಮಕ್ಕಳ ದಿನದ ಪ್ರಾರಂಭವನ್ನು 1925 ರಲ್ಲಿ ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ILO) ಪ್ರಸ್ತಾಪಿಸಿತು. ಈ ಸಂದರ್ಭದಲ್ಲಿ ಬಲವಂತವಾಗಿ ದುಡಿತಕ್ಕೆ ಒಳಗಾಗುವ ಮತ್ತು ಶಿಕ್ಷಣವನ್ನು ಪಡೆಯಲು ಆಗದಿರುವ ಮಕ್ಕಳ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತದೆ. ಇದಾದ ನಂತರ 1954 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಕ್ಕಳ ಕಲ್ಯಾಣವನ್ನು ಉತ್ತೇಜಿಸುವ ಉದ್ದೇಶದಿಂದ ಸಾರ್ವಜನಿಕ ಮಕ್ಕಳ ದಿನವನ್ನು ಆಚರಿಸುವ ನಿರ್ಣಯವನ್ನು ಅಂಗೀಕರಿಸಿತು. 1990 ರಿಂದ, ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ಮಕ್ಕಳ ಹಕ್ಕುಗಳ ಘೋಷಣೆ ಮಾಡಿದ ಮತ್ತು ಮಕ್ಕಳ ಹಕ್ಕುಗಳ ಸಮಾವೇಶ ಈ ಎರಡನ್ನೂ ಅಂಗೀಕರಿಸಿದ ದಿನದ ನೆನಪಿಗಾಗಿ ನವೆಂಬರ್ 20 ರಂದೇ ಸಾರ್ವತ್ರಿಕ ಮಕ್ಕಳ ದಿನವನ್ನು ಆಚರಿಸುತ್ತಾ ಬರುತ್ತಿದೆ.
ಇದನ್ನೂ ಓದಿ: ಇಂದಿನ ಮಕ್ಕಳೇ ನಾಳಿನ ದೇಶದ ಉಜ್ವಲ ಭವಿಷ್ಯ; ಮಕ್ಕಳು ದಿನಾಚರಣೆಯ ಹಿನ್ನೆಲೆಯೇನು?
ಸಾರ್ವಜನಿಕ ಮಕ್ಕಳ ದಿನದ ಮಹತ್ವವೇನು?
- ಮಕ್ಕಳ ಹಕ್ಕುಗಳ ಬಗ್ಗೆ ಜಾಗತಿಕ ಜವಾಬ್ದಾರಿಯನ್ನು ಹೆಚ್ಚಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
- ಈ ದಿನವು ಪ್ರತಿಯೊಂದು ಮಗುವಿಗೂ ಶಿಕ್ಷಣ, ಆರೋಗ್ಯ, ಆಟ, ಸುರಕ್ಷತೆ ಮತ್ತು ಸಬಲೀಕರಣದ ಹಕ್ಕಿದೆ ಎಂದು ನೆನಪಿಸುತ್ತದೆ.
- ಈ ದಿನವು ಮಕ್ಕಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಎತ್ತಿ ತೋರಿಸುವುದಲ್ಲದೆ, ರಾಷ್ಟ್ರ ಮತ್ತು ಅದರ ಭವಿಷ್ಯಕ್ಕಾಗಿ ಸಮಾಜವನ್ನು ಇರಿಸುವುದು ಎಷ್ಟು ಮುಖ್ಯ ಎಂಬುದನ್ನು ನೆನಪಿಸುತ್ತದೆ.
- ಜೊತೆಗೆ ಸಾರ್ವತ್ರಿಕ ಮಕ್ಕಳ ದಿನವು ಮಕ್ಕಳ ಶಿಕ್ಷಣ ಮತ್ತು ಆರೋಗ್ಯವನ್ನು ಸುಧಾರಿಸುವುದು ಮತ್ತು ಕಾರ್ಮಿಕ ಪದ್ಧತಿ ಮತ್ತು ಹಿಂಸಾಚಾರದ ವಿರುದ್ಧ ಜಾಗೃತಿ ಮೂಡಿಸಲು ನಿರ್ದಿಷ್ಟವಾಗಿ ಒತ್ತು ನೀಡಲಾಗುತ್ತದೆ.
- ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು, ಅವರ ಕನಸುಗಳನ್ನು ನನಸಾಗಿಸುವುದು, ಭವಿಷ್ಯವನ್ನು ಖಚಿತಪಡಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕ ಮತ್ತು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಈ ದಿನವು ನಮಗೆ ನೆನಪಿಸುತ್ತದೆ.
- ಸಾರ್ವತ್ರಿಕ ಮಕ್ಕಳ ದಿನ ಕೇವಲ ಸಾಂಸ್ಕೃತಿಕ ದಿನವಲ್ಲ, ಬದಲಾಗಿ ಮಕ್ಕಳ ಹಕ್ಕುಗಳು ಮತ್ತು ಅವರ ಭವಿಷ್ಯವನ್ನು ರೂಪಿಸುವ ಜಾಗತಿಕ ಬದ್ಧತೆಯ ಸಂಕೇತವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ