ಬೆಂಗಳೂರು, ನವೆಂಬರ್ 25: ಮಾನವನ ಜೀವನದಲ್ಲಿ ದಾನಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ಅನ್ನದಾನ, ವಿದ್ಯಾದಾನ, ವಸ್ತ್ರದಾನದಂತಹ ದಾನಗಳ ಜೊತೆಗೆ, ಸ್ವಯಂಪಾಕ ದಾನವು ವಿಶಿಷ್ಟವಾದ ಮಹತ್ವವನ್ನು ಹೊಂದಿದೆ. ಈ ದಾನವು ಶನಿ ಕಾಟ, ಕುಟುಂಬದಲ್ಲಿನ ಕಲಹಗಳು, ಗಲಾಟೆಗಳು, ಮತ್ತು ಪದೇ ಪದೇ ಬರುವ ಕಾಯಿಲೆಗಳಂತಹ ಸಮಸ್ಯೆಗಳನ್ನು ನಿವಾರಿಸಲು ಅತ್ಯಂತ ಪರಿಣಾಮಕಾರಿ ಎಂದು ನಂಬಲಾಗಿದೆ. ಪೂಜೆ, ಹೋಮಗಳು ಕಡಿಮೆ ವೆಚ್ಚದಲ್ಲಿ ಮಾಡುವ ಈ ದಾನವು ಹೆಚ್ಚಿನ ಪುಣ್ಯವನ್ನು ತರುತ್ತದೆ.
ಸ್ವಯಂಪಾಕ ದಾನವನ್ನು ವರ್ಷಕ್ಕೆ ಕನಿಷ್ಠ ಒಮ್ಮೆ, ಇಲ್ಲವೇ ಉತ್ತರಾಯಣ ಮತ್ತು ದಕ್ಷಿಣಾಯಣ ಕಾಲದಲ್ಲಿ ಒಮ್ಮೆ, ಕಾರ್ತಿಕ ಅಥವಾ ಮಾಘ ಮಾಸಗಳಲ್ಲಿ ಮಾಡುವುದು ಉತ್ತಮ. ಬ್ರಾಹ್ಮಣರು, ಬಡವರು, ಪುರೋಹಿತರು ಅಥವಾ ದೇವಸ್ಥಾನದ ಅರ್ಚಕರಂತಹವರಿಗೆ ಒಂದು ಹೊತ್ತಿನ ಊಟಕ್ಕೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು (ಅಕ್ಕಿ, ಬೇಳೆ, ಎಣ್ಣೆ, ತರಕಾರಿಗಳು, ಹಣ್ಣುಗಳು, ಇತ್ಯಾದಿ) ನೀಡುವುದು ದಾನದ ವಿಧಾನವಾಗಿದೆ. ಈ ದಾನವು ಸಕಲ ಕರ್ಮಗಳನ್ನು ಕಳೆದು, ದೈವದ ಸಂಪೂರ್ಣ ಸಂತೃಪ್ತಿ ನೀಡುತ್ತದೆ ಎಂದು ಡಾ. ಬಸವರಾಜ್ ಗುರೂಜಿ ಹೇಳಿದ್ದಾರೆ.