ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು, ನವೆಂಬರ್ 26: ಸಿಎಂ ಸ್ಥಾನದ ವಿಚಾರವಾಗಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ತಿಕ್ಕಾಟ ತಾರಕಕ್ಕೇರಿದೆ. ಈ ನಡುವೆ ಒಕ್ಕಲಿಗ ಸ್ವಾಮೀಜಿಗಳು ಡಿಕೆಶಿ ಪರ ಅಖಾಡಕ್ಕಿಳಿದಿದ್ದರೆ, ಇತ್ತ ಸಿದ್ದರಾಮಯ್ಯ ಪರ ಕುರುಬ ಮಠದ ಸ್ವಾಮೀಜಿಗಳು ಬೆಂಬಲಕ್ಕೆ ನಿಂತಿದ್ದಾರೆ. ಅದರ ಜೊತೆಗೆ ಸಿದ್ದರಾಮಯ್ಯ ಪರ ಇರುವ ಅಹಿಂದ ಸಮುದಾಯ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರೋದು ಸದ್ಯದ ಬೆಳವಣಿಗೆಗೆ ಹೊಸ ಟ್ವಿಸ್ಟ್ ಕೊಡುವ ಸಾಧ್ಯತೆ ಇದೆ.
ಶೋಷಿತ ವರ್ಗಗಳು, ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಹೀಗೆ ಅಹಿಂದ ಅನ್ನೋ ಈ ಶಕ್ತಿಯೇ ಸಿದ್ದರಾಮಯ್ಯ ಸಂಕಷ್ಟದಲ್ಲಿ ಸಿಲುಕಿದಾಗಲೆಲ್ಲಾ ಬೆನ್ನಿಗೆ ನಿಂತಿದೆ. ಅಹಿಂದ ನಾಯಕರಿಂದ ಕ್ಷೇತ್ರವಾರು ಅಹಿಂದ ಮತಗಳನ್ನು ತಯಾರಿಸಿದರೆ, ಒಂದು ವೇಳೆ ಸಿದ್ದರಾಮಯ್ಯರ ಸ್ಥಾನಕ್ಕೆ ಚ್ಯುತಿ ತಂದರೆ ಅಹಿಂದ ವರ್ಗಗಳು ಕೈಕೊಡಬಹುದು ಎಂಬ ಸಂದೇಶ ರವಾನಿಸಲು ಸಿದ್ಧತೆ ನಡೆದಿದೆ. 224 ಕ್ಷೇತ್ರಗಳ ಮೇಲಿನ 19 ಕ್ಷೇತ್ರಗಳಲ್ಲಿ ಶೇ.80ರಷ್ಟು ಅಹಿಂದ ಮತಗಳಿವೆ. 42 ಕ್ಷೇತ್ರಗಳಲ್ಲಿ ಶೇ. 80ರಷ್ಟು ಅಹಿಂದ ಮತಗಳು ನಿರ್ಣಾಯಕ ಪಾತ್ರವಹಿಸಲಿವೆ, 83ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಶೇ. 70ರಷ್ಟು ಅಹಿಂದ ಮತದಾರರಿದ್ದಾರೆ. ಜೊತೆಗೆ 49 ಕ್ಷೇತ್ರಗಳಲ್ಲಿ ಶೇ.60ಕ್ಕಿಂತ ಹೆಚ್ಚು, 22 ಕ್ಷೇತ್ರಗಳಲ್ಲಿ ಶೇ.50ಕ್ಕಿಂತ ಹೆಚ್ಚು ದಲಿತರು, ಅಲ್ಪಸಂಖ್ಯಾತ ಮತಗಳಿವೆ ಎಂದು ವರದಿ ಹೇಳಿದೆ. 5 ಕ್ಷೇತ್ರಗಳಲ್ಲಿ ಶೇ.90ಕ್ಕೂ ಹೆಚ್ಚು ಇವರೇ ವೋಟರ್ಸ್ ಇದ್ದಾರೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿನ ದೆಹಲಿಗೆ ಕರೆಸಿ ಚರ್ಚೆ, ಮಹತ್ವದ ಅಪ್‌ಡೇಟ್ ಕೊಟ್ಟ ಮಲ್ಲಿಕಾರ್ಜುನ ಖರ್ಗೆ
2023 ರ ಚುನಾವಣೆಗೂ ಮುನ್ನ ಸಿದ್ದರಾಮಯ್ಯರ ಶಕ್ತಿ ಎಂತಹದ್ದು ಎಂದು ಹೈಕಮಾಂಡ್ ಗಮನಕ್ಕೆ ಬಂದಿತ್ತು. ಸಿದ್ದರಾಮಯ್ಯ ಅವರ 75 ನೇ ಹುಟ್ಟುಹಬ್ಬದ ನೆಪ ಮಾಡಿ ದಾವಣಗೆರೆಯಲ್ಲಿ ಬೃಹತ್ ಶಕ್ತಿ ಪ್ರದರ್ಶನ ನಡೆಯಿತು. ಎಂದು ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದ ಅಹಿಂದ ನಾಯಕರನ್ನು ಕಂಡು ರಾಹುಲ್ ಗಾಂಧಿಯೇ ಆಶ್ಚರ್ಯ ಪಟ್ಟಿದ್ದರು. ಜೊತೆಗೆ ಚುನಾವಣೆ ಗೆಲುವಿನಲ್ಲಿಯೂ ಅಹಿಂದ ವರ್ಗದ ಕೊಡುಗೆ ಇದೆ ಎಂದು ಮನಗಂಡೇ ಸಿದ್ದರಾಮಯ್ಯ ಅವರನ್ನೇ ಸಿಎಂ ಆಗಿ ಹೈಕಮಾಂಡ್ ಆಯ್ಕೆ ಮಾಡಿತ್ತು. ಅಂದಿನಿಂದ ಇಂದಿನವರೆಗೂ ಅಹಿಂದ ಸಮುದಾಯ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದೆ. ಇದಕ್ಕೆ ಇಂಬು ಕೊಡುವಂತೆ ಸಿದ್ದರಾಮಯ್ಯ ಪರ ಒಗ್ಗಟ್ಟು ಪ್ರದರ್ಶನವನ್ನೂ ಅಹಿಂದ ಸಚಿವರು ಮಾಡಿದ್ದಾರೆ. ಇಂದು ಸಿಎಂ ಕಾವೇರಿ ನಿವಾಸದಲ್ಲಿ ಸತೀಶ್ ಜಾರಕಿಹೊಳಿ, ಪರಮೇಶ್ವರ್, ಮಹದೇವಪ್ಪ, ವೆಂಕಟೇಶ್, ರಾಜಣ್ಣ ಮತ್ತು ಕೆ.ಜೆ.ಜಾರ್ಜ್ ಸೇರಿದಂತೆ ಸಿಎಂ ಆಪ್ತ ಅಧಿಕಾರಿಗಳ ಸಭೆ ನಡೆಸಿದರು. ಈ ಸಭೆಯಲ್ಲಿ ಯಾವುದೇ ಕಾರಣಕ್ಕೂ ಅಧಿಕಾರ ಬಿಟ್ಟು ಕೊಡಬೇಡಿ, ಅಹಿಂದ ಅಸ್ತ್ರದ ಮೂಲಕವೇ ಹೈಕಮಾಂಡ್ ಮೇಲೆ ಒತ್ತಡ ಹೇರೋಣ. ಅಹಿಂದರ ಬಿಟ್ಟರೆ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ ಎಂದು ವರಿಷ್ಠರಿಗೆ ಮನವರಿಕೆ ಮಾಡೋಣ ಎಂದು ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.