ಚಿತ್ರದುರ್ಗ, (ಜೂನ್ 23): ವಸತಿ ಯೋಜನೆಯಲ್ಲಿ ಗೋಲ್ಮಾಲ್. ಹಣ ಕೊಟ್ಟವರಿಗಷ್ಟೇ ಮನೆ ಹಂಚಿಕೆ ಎಂದು ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಸಿಡಿಸಿದ ಆಡಿಯೋ ಬಾಂಬ್ ರಾಜ್ಯ ಕಾಂಗ್ರೆಸ್ ನಲ್ಲಿ ಸಂಚಲನ ಸೃಷ್ಟಿಸಿದೆ. ಇದರ ಮುಂದುವರಿದ ಭಾಗವಾಗಿ ಮತ್ತೊಬ್ಬ ಕಾಂಗ್ರೆಸ್ ಶಾಸಕ ರಾಜು ಕಾಗೆ ಸರ್ಕಾರದ ವಿರುದ್ಧವೇ ಅಸಮಾಧಾನ ಹೊರಹಾಕಿ, ರಾಜೀನಾಮೆ ನೀಡೋ ಬೆದರಿಕೆ ಹಾಕಿದ್ದಾರೆ. ಈ ಬೆಳವಣಿಗೆಗಳ ನಡುವೆ ಮತ್ತೋರ್ವ ಕಾಂಗ್ರೆಸ್ ಶಾಸಕ ಎನ್ ವೈ ಗೋಪಾಲಕೃಷ್ಣ ಅವರು ತಮ್ಮ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ಸರ್ಕಾರದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಬಳಿ ಹಣ ಇಲ್ಲ ಎಂದು ವಿಪಕ್ಷಗಳು ಆರೋಪಿಸುತ್ತಲೇ ಇವೆ. ಇದಕ್ಕೆ ಪುಷ್ಠಿ ನೀಡುವಂತೆ ಸ್ವತಃ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಒಂದು ಚರಂಡಿ, ರಸ್ತೆ, ಶಾಲೆ ನಿರ್ಮಿಸಲಾಗುತ್ತಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಕಣಕುಪ್ಪೆ ಗ್ರಾಮದ ಕಾರ್ಯಕ್ರಮವೊಮದರಲ್ಲಿ ಮಾತನಾಡಿದ ಗೋಪಾಲಕೃಷ್ಣ , ಸರ್ಕಾರದಲ್ಲಿ ಕೆಲಸ ಆಗುತ್ತಿಲ್ಲ. ನಾನು ಶಾಸಕನಾಗಿ ಒಂದು ಚರಂಡಿ, ರಸ್ತೆ, ಶಾಲೆ ಮಾಡಲಾಗುತ್ತಿಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ. ಈ ಹೇಳಿಕೆ ಸಿದ್ದರಾಮಯ್ಯ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದು, ಟೀಕೆ ಮಾಡಲು ವಿಪಕ್ಷಗಳಿಗೆ ಮತ್ತಷ್ಟು ಆಹಾರ ಸಿಕ್ಕಂತಾಗಿದೆ.