ದೇವನಹಳ್ಳಿ, ಡಿಸೆಂಬರ್ 04: ಕಳೆದ ಎರಡು ದಿನಗಳಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಬೇಕಿದ್ದ ಇಂಡಿಗೋ ವಿಮಾನಗಳಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಹಲವು ವಿಮಾನಗಳ ಸಂಚಾರ ರದ್ದಾಗಿದೆ. ಹೀಗಾಗಿ ಜನರ ಏರ್ಪೋರ್ಟ್ನಲ್ಲಿ ಪರದಾಟ ನಡೆಸುತ್ತಿರುವ ದೃಶ್ಯಗಳು ಕಂಡುಬಂದಿದ್ದು, ಸಂಸ್ಥೆಯ ವಿರುದ್ಧ ಪ್ರಯಾಣಿಕರು ಕಿಡಿ ಕಾರಿದ್ದಾರೆ. ಈ ನಡುವೆ ಹಾರಾಟದಲ್ಲಿನ ವಿಮಾನದಿಂದ ಮದುವೆಯೊಂದಕ್ಕೂ ವಿಘ್ನದ ಆತಂಕ ಎದುರಾಗಿದೆ.
ಭುವನೇಶ್ವರದಲ್ಲಿ ಮಗನ ಮದುವೆ ಹಿನ್ನಲೆ ನಾಳೆ ಬೆಳಿಗ್ಗೆ 07.30 ವಿಮಾನಕ್ಕೆ ತಂದೆ ಮಹೇಂದ್ರ ಕುಮಾರ್ 110 ಟಿಕೆಟ್ ಬುಕ್ ಮಾಡಲಾಗಿತ್ತು. ಒಂದು ಟಿಕೆಟ್ಗೆ ತಲಾ 7 ಸಾವಿರ ರೂಪಾಯಿ ಇತ್ತು. ಇಂಡಿಗೋ ವಿಮಾನಗಳ ಹಾರಾಟದಲ್ಲಿನ ವ್ಯತ್ಯಯದ ಕಾರಣ ಅವರು ಆತಂಕಗೊಂಡಿದ್ದಾರೆ, ನಾಳಿನ ವಿಮಾನದ ಬಗ್ಗೆ ವಿಚಾರಿಸಿದ್ದಾರೆ. ಆದರೆ ವಿಮಾನ ಹಾರಾಟದ ಬಗ್ಗೆ ಏರ್ಲೈನ್ಸ್ ಸಿಬ್ಬಂದಿಯಿಂದ ಸ್ಪಷ್ಟ ಉತ್ತರ ಇವರಿಗೆ ಸಿಕ್ಕಿಲ್ಲ. ಮನೆಯಲ್ಲಿ ಮದುವೆ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಆತಂಕ ಮನೆ ಮಾಡಿದೆ. ವರ ಬೆಂಗಳೂರಿನಲ್ಲಿದ್ದರೆ ಭುವನೇಶ್ವರದಲ್ಲಿರುವ ವಧು ಇದ್ದಾಳೆ. ರಸ್ತೆ ಮೂಲಕ ಹೋದರೂ ಸಮಯಕ್ಕೆ ಸರಿಯಾಗಿ ತಲುಪಲು ಆಗಲ್ಲ ಅಂತ ಕುಟುಂಬಸ್ಥರು ಅಲವತ್ತುಕೊಂಡಿದ್ದಾರೆ. ನಮಗೆ ಮದುವೆಗೆ ಹೋಗಲು ಅವಕಾಶ ಮಾಡಿಕೊಡಿ ಎಂದು ಟಿವಿ9 ಮುಂದೆ ಅಳಲು ತೋಡಿದೆ.
ಇದನ್ನೂ ಓದಿ: ವಿಮಾನಗಳ ಹಾರಾಟದಲ್ಲಿ ವ್ಯತ್ಯಯ, ಪ್ರಯಾಣಿಕರ ಕ್ಷಮೆಯಾಚಿಸಿದ ಇಂಡಿಗೋ
ನಾಳೆ ಸಂಜೆ ಭುವನೇಶ್ವರದಲ್ಲಿ ಮದುವೆ ನಡೆಯಲಿದೆ, ವರ, ಆತನ ತಂದೆ ತಾಯಿ ಹಾಗೂ ಕುಟುಂಬಸ್ಥರಿಗೆ ಟಿಕೆಟ್ ಬುಕ್ ಮಾಡಲಾಗಿದೆ. ಬೆಂಗಳೂರಿನಿಂದ ಚೆನ್ನೈ, ಹೈದರಾಬಾದ್ ನಿಂದ ಇಂಡಿಗೋ ವಿಮಾನದಲ್ಲಿ ಮೂರು ತಿಂಗಳ ಹಿಂದೆಯೇ ಟಿಕೆಟ್ ಬುಕ್ ಮಾಡಲಾಗಿದೆ. ಹೀಗಿದ್ದರೂ ವರನ ತಂದೆಗೆ ವಿಮಾನ ಹಾರಾಟದ ಬಗ್ಗೆ ಏರ್ಲೈನ್ಸ್ ಸಿಬ್ಬಂದಿ ಸರಿಯಾದ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ.
205 ಇಂಡಿಗೋ ವಿಮಾನಗಳ ಹಾರಾಟ ರದ್ದು
ಕಳೆದ 3 ದಿನಗಳಿಂದ ಕೆಐಎಬಿಗೆ ಆಗಮಿಸುವ ಮತ್ತು ನಿರ್ಗಮಿಸಬೇಕಿದ್ದ ಒಟ್ಟು 205 ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದೆ. ಮಂಗಳವಾರ 70, ಬುಧವಾರ 62, ಇಂದು 73 ವಿಮಾನಗಳು ಹಾರಾಟ ನಡೆಸಿಲ್ಲ. ದೇಶದ ವಿವಿಧೆಡೆಗೆ ತೆರಳಬೇಕಿದ್ದ ವಿಮಾನಗಳು ಕೊನೆ ಕ್ಷಣದಲ್ಲಿ ರದ್ದಾದ ಪರಿಣಾಮ, ಸಾವಿರಾರು ಪ್ರಯಾಣಿಕರ ಪರದಾಟ ಸ್ಥಳ. ತಿಂಗಳ ಹಿಂದೆಯೇ ಟಿಕೆಟ್ ಬುಕ್ ಮಾಡಿಕೊಂಡರೂ ಕೊನೆ ಕ್ಷಣದಲ್ಲಿ ವಿಮಾನ ಹಾರಾಟ ರದ್ದಾಗಿ ಪ್ರಯಾಣಿಕರು ಗರಂ ಆಗಿದ್ದಾರೆ. ಇಂಡಿಗೋ ಕೌಂಟರ್ಗಳ ಮುಂದೆ ಪ್ರಯಾಣಿಕರು ಜಮಾವಣೆ, ಟಿಕೆಟ್ ಕ್ಯಾನ್ಸಲ್ ಮಾಡಲು ಕಾದು ಕುಳಿತಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 4:23 pm, ಗುರು, 4 ಡಿಸೆಂಬರ್ 25