2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪದಲ್ಲಿ ರೋಹಿತ್ ಶರ್ಮಾ (ರೋಹಿತ್ ಶರ್ಮಾ) ಹಾಗೂ ವಿರಾಟ್ ಕೊಹ್ಲಿ (ವಿರಾಟ್ ಕೊಹ್ಲಿ) ಕಣಕ್ಕಿಳಿಯಲಿದ್ದಾರಾ? ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ನೀಡಿರುವ ಹೇಳಿಕೆ. ಅದು ಕೂಡ ಇಬ್ಬರು ದಿಗ್ಗಜರ ಅದ್ಭುತ ಪ್ರದರ್ಶನ ಬಳಿಕ ಎಂಬುದೇ ಅಚ್ಚರಿ.
ರೋಹಿತ್ ಶರ್ಮಾ ಕಳೆದ 5 ಇನಿಂಗ್ಸ್ಗಳಲ್ಲಿ ಕಲೆಹಾಕಿದ ಸ್ಕೋರ್ 73, 121*, 57, 14, 75. ಅಂದರೆ ಐದು ಇನಿಂಗ್ಸ್ಗಳಲ್ಲಿ ಒಂದು ಶತಕ ಹಾಗೂ 3 ಅರ್ಧಶತಕಗಳು ಮೂಡಿಬಂದಿವೆ. ಹೀಗಾಗಿ ಹಿಟ್ ಮ್ಯಾನ್ ಅವರನ್ನು ಏಕದಿನ ತಂಡದಿಂದ ಸದ್ಯಕ್ಕೆ ಹೊರಗಿಡಲು ಸಾಧ್ಯವಿಲ್ಲ.
ವಿರಾಟ್ ಕೊಹ್ಲಿ ಕೊನೆಯ 5 ಏಕದಿನ ಇನಿಂಗ್ಸ್ಗಳಿಂದ ಕಲೆಹಾಕಿದ ಸ್ಕೋರ್ 0, 74, 135, 102, 65. ಅಂದರೆ ಕಳೆದ ಐದು ಇನಿಂಗ್ಸ್ಗಳಲ್ಲಿ ಕೊಹ್ಲಿ 2 ಶತಕ ಮತ್ತು 2 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅಷ್ಟೇ ಅಲ್ಲದೆ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 302 ರನ್ ಗಳಿಸಿ ಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಹೀಗಾಗಿ ಕೊಹ್ಲಿಯನ್ನು ಸಹ ಏಕದಿನ ತಂಡದಿಂದ ಹೊರಗಿಡಲು ಸಾಧ್ಯವೇ ಇಲ್ಲ ಎನ್ನಬಹುದು.
ಇದಾಗ್ಯೂ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಏಕದಿನದಿಂದ ಆಡುವ ಬಗ್ಗೆ ಯಾವುದೇ ಸಕರಾತ್ಮಕ ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ. ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ನಂತರ ಮಾತನಾಡಿದ ಗಂಭೀರ್ ಗೆ ಕೊಹ್ಲಿ-ರೋಹಿತ್ ಅವರ ಏಕದಿನ ಭವಿಷ್ಯದ ಬಗ್ಗೆ ಪ್ರಶ್ನೆ ಮುಂದಿಡಲಾಗಿದೆ.
ಈ ಪ್ರಶ್ನೆಗೆ ಉತ್ತರಿಸಿದ ಗಂಭೀರ್, 2027ರ ಏಕದಿನದಿಂದ ಇನ್ನೂ ಸುಮಾರು 2 ವರ್ಷ ಇದೆ. ನಾವು ವರ್ತಮಾನದಲ್ಲಿ ಇರುವುದನ್ನು ಕಲಿಯಬೇಕು. ಟೀಮ್ ಇಂಡಿಯಾಗೆ ಬರುತ್ತಿರುವ ಹೊಸ ಹುಡುಗರು ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಶುಭ್ಮನ್ ಗಿಲ್ ಬದಲಿಗೆ ಆಯ್ಕೆಯಾದ ಯಶಸ್ವಿ ಜೈಸ್ವಾಲ್ ಶತಕ ಸಿಡಿಸಿದ್ದಾರೆ. ಶ್ರೇಯಸ್ ಅಯ್ಯರ್ ಬದಲಾಗಿ ಬಂದ ರುತುರಾಜ್ ಗಾಯಕ್ವಾಡ್ ಕೂಡ ಸೆಂಚುರಿ ಬಾರಿಸಿದ್ದಾರೆ. ಹೀಗೆ ಯುವ ಆಟಗಾರರು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಿದ್ದಾರೆ.
ಯುವ ಆಟಗಾರರು ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಹೀಗಾಗಿ ಭವಿಷ್ಯದ ಅವಕಾಶಗಳಿಗಾಗಿ ಈ ಆಟಗಾರರು ಕೂಡ ಸಿದ್ಧರಾಗಿ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. ಇದಾಗ್ಯೂ ಗಂಭೀರ್ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಏಕದಿನ ಭವಿಷ್ಯದ ಬಗ್ಗೆ ಉತ್ತರವಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಹೀಗಾಗಿಯೇ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಏಕದಿನ ಆಡಲ್ವಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.





