ಟೀಮ್ ಇಂಡಿಯಾದ ಯಂಗ್ ಸೆನ್ಸೇಷನ್ ಅಭಿಷೇಕ್ ಶರ್ಮಾ (ಅಭಿಷೇಕ್ ಶರ್ಮಾ) ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಗಾಗಿ ಸಜ್ಜಾಗುತ್ತಿದ್ದಾರೆ. ಈ ಸರಣಿಯ ಮೊದಲ ಪಂದ್ಯವು ನಾಳೆ (ಡಿ.9) ಕಟಕದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನವೇ ಅಭಿಷೇಕ್ ಶರ್ಮಾಗೆ ಗೂಗಲ್ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ.
ಗೂಗಲ್ 2025 ರ ಅತ್ಯಂತ ಟ್ರೆಂಡಿಂಗ್ ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅಂದರೆ ಯಾವ ದೇಶದ ಆಟಗಾರನನ್ನು ಗೂಗಲ್ ನಲ್ಲಿ ಹೆಚ್ಚು ಸರ್ಚ್ ಮಾಡಿದೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಹೀಗೆ ಬಿಡುಗಡೆ ಮಾಡಿದ ಪಾಕಿಸ್ತಾನದ ಗೂಗಲ್ ಟ್ರೆಂಡಿಂಗ್ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿರುವುದು ಟೀಮ್ ಇಂಡಿಯಾ ಆಟಗಾರ ಅಭಿಷೇಕ್ ಶರ್ಮಾ ಎಂಬುದು ವಿಶೇಷ.
ಈ ವರ್ಷ ಪಾಕಿಸ್ತಾನದಲ್ಲಿ ಗೂಗಲ್ನಲ್ಲಿ ಹೆಚ್ಚು ಟ್ರೆಂಡಿಂಗ್ ಆದ ಆಟಗಾರ ಭಾರತೀಯ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ ನಂಬರ್-1 ಸ್ಥಾನವನ್ನು ಪಡೆದಿದ್ದಾರೆ. ಪಾಕ್ ಆಟಗಾರರಾದ ಬಾಬರ್ ಆಝಂ, ಶಾಹೀನ್ ಶಾ ಅಫ್ರಿದಿ, ಮೊಹಮ್ಮದ್ ರಿಜ್ವಾನ್ ಮುಂತಾದ ಆಟಗಾರರನ್ನೇ ಹಿಂದಿಕ್ಕಿ ಅಭಿಷೇಕ್ ಶರ್ಮಾ ಪಾಕಿಸ್ತಾನದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಕುತೂಹಲಕಾರಿ ವಿಷಯವೆಂದರೆ ಪಾಕಿಸ್ತಾನದ ಗೂಗಲ್ ಸರ್ಚ್ ಟ್ರೆಂಡಿಂಗ್ ಪಟ್ಟಿಯ ಟಾಪ್-10 ನಲ್ಲಿ ಅಲ್ಲಿನ ಸ್ಟಾರ್ ಆಟಗಾರರಾದ ಬಾಬರ್ ಆಝಂ, ಶಾಹೀನ್ ಶಾ ಅಫ್ರಿದಿ ಕಾಣಿಸಿಕೊಂಡಿಲ್ಲ. ಜೊತೆಗೆ ಹೊಸ ಸೆನ್ಸೇಷನ್ ಸೃಷ್ಟಿಸಿದ್ದ ಯುವ ದಾಂಡಿಗ ಸೈಮ್ ಅಯ್ಯೂಬ್ ಆರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಪಾಕಿಸ್ತಾನ್ ಆಟಗಾರರ ಬದಲಾಗಿ ಈ ವರ್ಷ ಪಾಕಿಗಳು ಅಭಿಷೇಕ್ ಶರ್ಮಾ ಬಗ್ಗೆ ಹೆಚ್ಚು ಹುಡುಕಾಡಿದ್ದಾರೆ.
ಇನ್ನು ಈ ವರ್ಷ ಭಾರತದಲ್ಲಿ ಹೆಚ್ಚು ಹುಡುಕಲ್ಪಟ್ಟ ಆಟಗಾರ 14 ವರ್ಷದ ವೈಭವ್ ಸೂರ್ಯವಂಶಿ. ಬ್ಯಾಟಿಂಗ್ನೊಂದಿಗೆ ಅಬ್ಬರಿಸುತ್ತಿರುವ ವೈಭವ್ ಬಗ್ಗೆ ಭಾರತೀಯರು ಗೂಗಲ್ನಲ್ಲಿ ಹೆಚ್ಚು ಹುಡುಕಿದ್ದಾರೆ. ಅಂದರೆ ಭಾರತ ಮತ್ತು ಪಾಕಿಸ್ತಾನದಲ್ಲಿ ಟೀಮ್ ಇಂಡಿಯಾದ ಇಬ್ಬರು ಎಡಗೈ ದಾಂಡಿಗರ ಬಗ್ಗೆ ಗೂಗಲ್ನಲ್ಲಿ ಹೆಚ್ಚು ಹುಡುಕಾಟ ನಡೆಸಿರುವುದು ವಿಶೇಷ.




