2026ನೇ ಇಸವಿಯಲ್ಲಿ ಇಡೀ ವರ್ಷ ಶನಿ ಗ್ರಹ 9ನೇ ಮನೆಯಲ್ಲಿ ಸಂಚಾರ ಮಾಡುವುದು. ಇನ್ನು ಗುರು ಗ್ರಹವು ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ ವ್ಯಯ ಸ್ಥಾನದಲ್ಲಿ, ಅಂದರೆ 12ನೇ ಸ್ಥಾನದಲ್ಲಿ ಇರುತ್ತದೆ. ಆ ನಂತರ ಅಕ್ಟೋಬರ್ 31 ನೇ ತಾರೀಕಿನವರೆಗೆ ಜನ್ಮ ಸ್ಥಾನದಲ್ಲಿ, ಅಂದರೆ ನಿಮ್ಮದೇ ರಾಶಿಯಲ್ಲಿ ಸಂಚರಿಸುತ್ತದೆ. ನವೆಂಬರ್ ಮತ್ತು ಈ ಡಿಸೆಂಬರ್ ತಿಂಗಳ ಸಿಂಹ ರಾಶಿಯಲ್ಲಿ, ಅಂದರೆ 2ನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗುತ್ತದೆ. ಇನ್ನು ಇಡೀ ವರ್ಷ ರಾಹು ಗ್ರಹವು ನಿಮ್ಮ ರಾಶಿಗೆ 8ನೇ ಮನೆಯಲ್ಲಿ ಆಗುವಂಥ ಕುಂಭದಲ್ಲಿ ಹಾಗೂ ಕೇತು ಗ್ರಹವು 2ನೇ ಸ್ಥಾನ ಆದಂಥ ಸಿಂಹ ರಾಶಿಯಲ್ಲಿ ಸಂಚರಿಸುತ್ತದೆ. 2026ನೇ ಇಸವಿಯ ಡಿಸೆಂಬರ್ 5ನೇ ತಾರೀಕಿಗೆ ರಾಹು ಗ್ರಹವು ಏಳನೇ ಮನೆಯಲ್ಲಿ ಮಕರ ರಾಶಿ ಹಾಗೂ ಕೇತು ಗ್ರಹ ನಿಮ್ಮದೇ ಜನ್ಮ ರಾಶಿಗೂ ಬಂದಿದೆ.
ಪುನರ್ವಸು ನಕ್ಷತ್ರದ ನಾಲ್ಕನೇ ಪಾದ, ಆಶ್ಲೇಷ ಹಾಗೂ ಪುಷ್ಯ ನಕ್ಷತ್ರದ ನಾಲ್ಕೂ ಪಾದ ಸೇರಿ ಕರ್ಕಾಟಕ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಚಂದ್ರ.
ಕರ್ಕಾಟಕ ರಾಶಿಯವರಿಗೆ 2026ರ ವರ್ಷ ಭವಿಷ್ಯ ಹೀಗಿದೆ:
ಶನಿ ಗೋಚಾರ:
ಒಂದು ಕೆಲಸವನ್ನು ಶುರು ಮಾಡಿ ಅದನ್ನು ಪೂರ್ಣಗೊಳಿಸುವುದರಲ್ಲಿ ಹೈರಾಣಾಗುವಂತೆ ಮಾಡುತ್ತಾನೆ. ಆಗಬೇಕಾದ ಕೆಲಸ- ಕಾರ್ಯಗಳು ಮುಗಿಯುವುದಿಲ್ಲ. ಅದರಲ್ಲೂ ಮದುವೆಯ ಪ್ರಯತ್ನದಲ್ಲಿ ಒಂದಲ್ಲ ಒಂದು ಪ್ರತಿಗಳು- ಗೊಂದಲಗಳು ಎದುರಾಗುತ್ತವೆ. ತಂದೆ ಅಥವಾ ತಂದೆ ಸಮಾನರಾದವರ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸುವುದು ಮುಖ್ಯ. ಉನ್ನತ ಹುದ್ದೆಯಲ್ಲಿ ಇರುವಂತಹವರಿಗೆ ನಿಮ್ಮ ಕೈ ಕೆಳಗೆ ಕೆಲಸ ಮಾಡುವ ವ್ಯಕ್ತಿಗಳಿಂದ ಸಮಸ್ಯೆಗಳು ಎದುರಾಗುತ್ತವೆ. ಸರಿ- ತಪ್ಪುಗಳ ಬಗ್ಗೆ ಎಚ್ಚರಿಕೆ ಮತ್ತು ವಿವೇಚನೆ ಎರಡೂ ಇರಬೇಕು. ಆರೋಗ್ಯಕ್ಕೆ ಏನಾದರೂ ವ್ಯತ್ಯಾಸ ಕಂಡುಬಂದಲ್ಲಿ ಆಮೇಲೆ ಹೋದರಾಯಿತು ಎಂದು ವೈದ್ಯರ ಬಳಿ ತೆರಳದೆ, ಮುಂದಕ್ಕೆ ಹಾಕುತ್ತಾ ಹೋಗಬೇಡಿ. ಈ ಹಿಂದೆ ಚಿಕಿತ್ಸೆ ಅಥವಾ ಮಾಡಿಸಿಕೊಂಡ ಶಸ್ತ್ರಚಿಕಿತ್ಸೆಯ ಫಾಲೋಅಪ್ ಚೆಪ್ ಇದ್ದಲ್ಲಿ ಅದನ್ನು ತಪ್ಪಿಸಬೇಡಿ. ಪಿತ್ರಾರ್ಜಿತವಾಗಿ ಬರಬೇಕಾದ ಆಸ್ತಿ, ಹಣ, ಒಡವೆ ಇತ್ಯಾದಿಗಳು ಇದ್ದಲ್ಲಿ ಆ ಪ್ರಕ್ರಿಯೆ ಬಹಳ ಎಳೆದುಕೊಂಡು ಹೋಗುತ್ತದೆ. ದಂಪತಿಗಳು ಹಾಗೂ ಪ್ರೇಮಿಗಳ ಮಧ್ಯೆ ಮೂರನೇ ವ್ಯಕ್ತಿ ಪ್ರವೇಶ ಆಗಿ, ಅವರು ಹೇಳುವ ಚಾಡಿ ಮಾತು, ಸಲಹೆಗಳಿಂದ ಮಧುರ ಭಾವನೆ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇಂಥ ವ್ಯಕ್ತಿಗಳಿಂದ ದೂರ ಇರುವುದು ಮುಖ್ಯ.
ಗುರು ಗ್ರಹ ಗೋಚಾರ:
ಜನವರಿಯಿಂದ ಮೇ ತಿಂಗಳು ಮುಗಿಯುವವರೆಗೆ ನಿಮಗೆ ವಿಪರೀತ ಖರ್ಚು ಇರುತ್ತದೆ. ಅಲ್ಲಿ ನಿಮ್ಮ ಮೇಲೆ ಯಾರಾದರೂ- ಕಚೇರಿ ಎಂದು ಪ್ರಕರಣಗಳನ್ನು ದಾಖಲಿಸಿದರೆ ಅದನ್ನು ಬಗೆಹರಿಸಿಕೊಳ್ಳಲು ಸಿಕ್ಕಾಪಟ್ಟೆ ಹಣ ಖರ್ಚಾಗುತ್ತದೆ. ದೇಹದ ತೂಕ ನಿಯಂತ್ರಣಕ್ಕೆ, ಮಧುಮೇಹ, ಕೊಲೆಸ್ಟ್ರಾಲ್ ಈ ರೀತಿ ತೊಂದರೆಯಿಂದ ಹೊರಬರಲು ತೆಗೆದುಕೊಳ್ಳುವ ಚಿಕಿತ್ಸೆಗೆ ಹೆಚ್ಚಿನ ಖರ್ಚು ಆಗಲಿದೆ. ಸಾಲಗಾರರಿಂದ ಮಾನಸಿಕ ಒತ್ತಡ ಸಿಕ್ಕಾಪಟ್ಟೆ ಬೀಳುತ್ತದೆ. ಸಮಯಕ್ಕೆ ಹಣ ಹಿಂತಿರುಗಿಸುವ ಮಾತು ನೀಡುವುದಕ್ಕೂ ಮೊದಲು ಅದನ್ನು ಉಳಿಸಿಕೊಳ್ಳಲು ಸಾಧ್ಯ ಎಂಬ ಬಗ್ಗೆ ಆಲೋಚನೆ ಮಾಡಿ, ಮುಂದಕ್ಕೆ ಹೆಜ್ಜೆ ಇಡಿ. ಈ ಅವಧಿಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಬೇಡಿ. ಹಿರಿಯರ ಸಲಹೆಗಳನ್ನು ಕೇಳಿಸಿಕೊಳ್ಳಿ. ಅನುಸರಿಸಿ. ಜೂನ್ ನಿಂದ ಅಕ್ಟೋಬರ್ ತನಕ ನಿಮ್ಮ ಸಮಸ್ಯೆಗಳು ವಿಪರೀತಕ್ಕೆ ಹೋಗುತ್ತವೆ. ನಿಮ್ಮ ನಿರ್ಧಾರಗಳು ಸಮಸ್ಯೆಗಳನ್ನೇ ತಂದೊಡ್ಡುತ್ತವೆ. ಮನಸೋ ಇಚ್ಛೆ ತೀರ್ಮಾನಗಳನ್ನು ಮಾಡುವುದರಿಂದ ನಿಮ್ಮ ಬಗ್ಗೆ ಇರುವ ವಿಶ್ವಾಸಾರ್ಹತೆ ಕಳೆದುಕೊಳ್ಳುವಂತೆ ಆಗಲಿದೆ. ನವೆಂಬರ್- ತಿಂಗಳು ಡಿಸೆಂಬರ್ ಉತ್ತಮ ಸಮಯ ಆಗಿರುತ್ತದೆ. ಮದುವೆಗೆ ಪ್ರಯತ್ನ ಮಾಡುತ್ತಿರುವವರಿಗೆ ಉತ್ತಮ ಬೆಳವಣಿಗೆ ಆಗಲಿವೆ. ಹಣಕಾಸಿನ ಹರಿವು ಸರಾಗವಾಗಿ ಆಗಲಿವೆ. ದಂಪತಿಗಳು ಮತ್ತು ಪ್ರೇಮಿಗಳ ಮಧ್ಯೆ ಇರುವಂತಹ ಮನಸ್ತಾಪ ದೂರವಾಗಿ ಉತ್ತಮವಾದ ಸಮಯವನ್ನು ಕಳೆಯಲು ಇದೆ. ಅದೃಷ್ಟ ನಿಮ್ಮ ಪರವಾಗಿ ಕೆಲಸ ಮಾಡುತ್ತದೆ.
ಇದನ್ನೂ ಓದಿ: 2026ನೇ ಹೊಸ ವರ್ಷ ಮಿಥುನ ರಾಶಿಯವರಿಗೆ ಹೇಗಿರಲಿದೆ? ವರ್ಷ ಭವಿಷ್ಯ ಇಲ್ಲಿದೆ
ರಾಹು-ಕೇತು ಗೋಚಾರ:
ಎಂಟನೇ ಮನೆಯಲ್ಲಿ ರಾಹು ಸಂಚಾರ ಇರುತ್ತದೆ. ಚರ್ಮಕ್ಕೆ ಸಂಬಂಧಿಸಿದ ವ್ಯಾಧಿಗಳು ಕಾಣಿಸಿಕೊಳ್ಳಬಹುದು. ಅಂತಹ ಸಮಸ್ಯೆ ಇದೆ ಎಂದಾದಲ್ಲಿ ಅದು ಉಲ್ಬಣಗೊಳ್ಳಬಹುದು. ಹಣಕಾಸಿನ ವಿಚಾರದಲ್ಲಿ ಬೇರೆಯವರು ಒಡ್ಡುವ ಆಮಿಷಕ್ಕೆ ಪಿಗ್ಗಿ ಬೀಳಬೇಡಿ. ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಮಾಡಿಕೊಡುವುದಾಗಿ ಹೇಳುವ ಬಣ್ಣದ ಮಾತಿಗೆ ಮರುಳಾಗಿ ಹಣ ಕಳೆದುಕೊಳ್ಳುವಂತೆ ಆಗಲಿದೆ. ಷೇರುಮಾರುಕಟ್ಟೆ, ಕಮಾಡಿಟಿ ಎಕ್ಸ್ ಚೇಂಜ್ ಇಂಥ ಕಡೆಗಳಲ್ಲಿ ಟ್ರೇಡಿಂಗ್ ಮಾಡುತ್ತಿರುವವರು ಮನಸ್ಸನ್ನು ಹತೋಟಿಯಲ್ಲಿ ಇಡುವುದು ಬಹಳ ಮುಖ್ಯ. ಹೆಚ್ಚಿನ ಆಸೆಗೆ ಬಿದ್ದು, ಹಣ ಕಳೆದುಕೊಳ್ಳುವಂತೆ ಆಗಲಿದೆ. ಸುಸ್ತು, ತ್ರಾಣ ಇಲ್ಲದಿರುವುದು ಈ ರೀತಿಯ ಆರೋಗ್ಯ ಸಮಸ್ಯೆಗಳು ಸಹ ಕಂಡುಬರುತ್ತವೆ. ಉದ್ಯೋಗ- ವೃತ್ತಿ- ವ್ಯಾಪಾರ- ಭೂಮಿ ವ್ಯವಹಾರ ಹೀಗೆ ಯಾವುದರಲ್ಲೂ ಆತುರದ ತೀರ್ಮಾನ ತೆಗೆದುಕೊಳ್ಳಬೇಡಿ. ಇನ್ನು ಸಾಂಸಾರಿಕವಾಗಿ ಅನುಮಾನಗಳು ಹೆಚ್ಚು ಕಾಡುತ್ತವೆ. ನಿಮ್ಮಿಂದ ದೈವದಿಂದ, ದೇವತಾ ಕಾರ್ಯಗಳಲ್ಲಿ ನಿರ್ಲಕ್ಷ್ಯ, ಹಿರಿಯರ ಬಗ್ಗೆ ಕೆಟ್ಟ ಮಾತುಗಳನ್ನು ಆಡುವುದು ಇಂಥದ್ದು ಆಗುತ್ತದೆ. ಇದರಿಂದ ನಿಮ್ಮದೇ ಮಾನಸಿಕ ನೆಮ್ಮದಿ ಕಳೆದುಹೋಗುತ್ತದೆ. ಭ್ರಮೆ ಹಾಗೂ ಹಗಲುಗನಸಿನಲ್ಲಿ ಮುಳುಗಿ ನಷ್ಟ ಅನುಭವಿಸುವ ಸಾಧ್ಯತೆ ಇರುತ್ತದೆ.
ಪರಿಹಾರ:
ಶನಿವಾರದಂದು ದುರ್ಗಾದೇವಿ ಹಾಗೂ ಮಂಗಳವಾರದಂದು ಗಣಪತಿ ಆರಾಧನೆಯನ್ನು ಮಾಡಿಕೊಳ್ಳಬೇಕು. ಗುರುವಾರದಂದು ರಾಘವೇಂದ್ರ ಸ್ವಾಮಿ ಮಠ ಅಥವಾ ಸಾಯಿಬಾಬ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದುಕೊಳ್ಳಿ.
ಲೇಖನ- ಸ್ವಾತಿ ಎನ್.ಕೆ.