2026ನೇ ಇಸವಿಯಲ್ಲಿ ಇಡೀ ವರ್ಷ ಶನಿ ಗ್ರಹ 8ನೇ ಮನೆಯಲ್ಲಿ ಸಂಚಾರ ಮಾಡುತ್ತಿದೆ. ಇನ್ನು ಗುರು ಗ್ರಹವು ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ 11ನೇ ಮನೆ, ಅಂದರೆ ಲಾಭ ಸ್ಥಾನದಲ್ಲಿ ಇರುತ್ತದೆ. ಆ ನಂತರ ಅಕ್ಟೋಬರ್ 31 ನೇ ತಾರೀಕಿನವರೆಗೆ ವ್ಯಯ ಸ್ಥಾನ, ಅಂದರೆ ಹನ್ನೆರಡನೇ ಮನೆಯಲ್ಲಿ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತದೆ. ನವೆಂಬರ್ ಮತ್ತು ಈ ಡಿಸೆಂಬರ್ ಎರಡೂ ತಿಂಗಳಿನ ಜನ್ಮ ರಾಶಿಯಲ್ಲಿ, ಅಂದರೆ 1ನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗುತ್ತದೆ. ಇನ್ನು ಇಡೀ ವರ್ಷ ರಾಹು ಗ್ರಹವು ನಿಮ್ಮ ರಾಶಿಗೆ 7ನೇ ಮನೆಯಲ್ಲಿ ಆಗುವಂಥ ಕುಂಭದಲ್ಲಿ ಹಾಗೂ ಕೇತು ಗ್ರಹವು ಜನ್ಮ ಸ್ಥಾನವಾದ 1ನೇ ಮನೆಯಲ್ಲಿ ಅಂದರೆ ನಿಮ್ಮ ರಾಶಿಯಲ್ಲಿ ಸಂಚರಿಸುತ್ತದೆ. 2026ನೇ ಇಸವಿಯ ಡಿಸೆಂಬರ್ 5ನೇ ತಾರೀಕಿಗೆ ರಾಹು ಗ್ರಹವು ಆರನೇ ಮನೆಯಾದ ಮಕರ ರಾಶಿ ಹಾಗೂ ಕೇತು ಗ್ರಹ ನಿಮ್ಮ ರಾಶಿಗೆ ಹನ್ನೆರಡನೇ ಮನೆಗೂ ಪ್ರವೇಶಿಸುತ್ತದೆ.
ಮಖಾ ನಕ್ಷತ್ರದ ನಾಲ್ಕೂ ಪಾದ, ಪುಬ್ಬ ಅಥವಾ ಪೂರ್ವಫಲ್ಗುಣಿ ನಕ್ಷತ್ರದ ನಾಲ್ಕೂ ಪಾದ ಹಾಗೂ ಉತ್ತರ ಫಲ್ಗುಣಿ ನಕ್ಷತ್ರದ ಒಂದನೇ ಪಾದ ಸೇರಿ ಸಿಂಹ ರಾಶಿಯಾಗುತ್ತದೆ. ಈ ರಾಶಿಯ ಅಧಿಪತಿ ರವಿ.
ಸಿಂಹ ರಾಶಿಯವರಿಗೆ 2026ರ ವರ್ಷ ಭವಿಷ್ಯ ಹೀಗಿದೆ:
ಶನಿ ಗೋಚಾರ:
ನಿಮ್ಮ ರಾಶಿಗೆ ಎಂಟನೇ ಮನೆಯಲ್ಲಿ ಶನಿ ಗ್ರಹದ ಸಂಚಾರ ಆಗುತ್ತದೆ. ಆಯುಷ್ಯದ ಸ್ಥಾನವಾದ ಇಲ್ಲಿ ಶನೈಶ್ಚರ ಗ್ರಹದ ಸಂಚಾರ ಶುಭ ಫಲ ನೀಡುವುದಿಲ್ಲ. ಇನ್ನು ಸಿಂಹ ರಾಶಿಗೆ ಆರು ಮತ್ತು ಏಳನೇ ಮನೆಯ ಅಧಿಪತಿಯಾದ ಶನಿಯು ಈ ಸ್ಥಾನದಲ್ಲಿ ಸಂಚರಿಸುವ ದಂಪತಿ ಮಧ್ಯೆ, ಪ್ರೇಮಿಗಳ ನಡುವೆ ಹೆಚ್ಚು ನಕಾರಾತ್ಮಕ ಪ್ರಭಾವ ಬೀರಲಿದೆ. ಸಣ್ಣ- ಪುಟ್ಟ ಕಲಹಗಳು ಸಹ ವಿಕೋಪಕ್ಕೆ ಹೋಗಿ, ಡೈವೋರ್ಸ್ ತನಕ ಎಳೆದುಕೊಂಡು ಹೋಗಬಹುದು. ಇನ್ನು ಪ್ರೀತಿಯಲ್ಲಿ ಇರುವವರು ದೂರ ಆಗಿಬಿಡಬಹುದು. ಇನ್ನು ವಿವಾಹ ನಿಶ್ಚಯ ಆಗಿದೆ ಎಂದಾದಲ್ಲಿ ಮಾತುಕತೆ ಆಡುವಾಗ ಎಚ್ಚರಿಕೆ ವಹಿಸಿ ಹಾಗೂ ಮೂರನೇ ವ್ಯಕ್ತಿಗಳ ಹೇಳಿಕೆಯ ಮಾತುಗಳನ್ನು ಕೇಳಬೇಡಿ. ಯಾವುದೇ ಕಾರಣಕ್ಕೂ ಈವರೆಗೆ ಉದ್ಯೋಗ ಬಿಡುವ ನಿರ್ಧಾರಕ್ಕೆ ಬರುವುದಿಲ್ಲ. ಇನ್ನೊಂದು ಕೆಲಸ ಸಿಗುವ ತನಕ ಇರುವ ಕೆಲಸ ಬಿಡದಿರುವುದು ಕ್ಷೇಮ ಹಾಗೂ ಉತ್ತಮ. ಹಣಕಾಸಿನ ಹರಿವಿನಲ್ಲಿ ಭಾರೀ ಪ್ರಮಾಣದ ಇಳಿಕೆಯಾಗುವುದು, ಸಾಲಕ್ಕಾಗಿ ಒತ್ತಡದ ಸನ್ನಿವೇಶ ಎದುರಿಸಬೇಕಾಗುತ್ತದೆ. ಹೊಸದಾಗಿ ಯಾವುದೇ ಸಾಲ ಪಡೆಯಬೇಡಿ. ಇನ್ನು ನಿಮ್ಮ ಸಂಬಂಧಿಗಳಿಂದ- ಸ್ನೇಹಿತರಿಂದ ಅವಮಾನ ಎದುರಿಸುವಂತೆ ಆಗುತ್ತದೆ. ಅಷ್ಟಮ ಶನಿಯ ಪ್ರಭಾವ ಕ್ರೂರವಾಗಿ ಇರುತ್ತದೆ. ಈ ಸಮಯದಲ್ಲಿ ವಾಹನ ಚಾಲನೆಯಲ್ಲಿ ಆರೋಗ್ಯ ವಿಚಾರದಲ್ಲಿ ಹಾಗೂ ಆರ್ಥಿಕ- ಸಾಂಸಾರಿಕ ವಿಷಯಗಳಲ್ಲಿ ಎಷ್ಟು ಎಚ್ಚರಿಕೆ ವಹಿಸುತ್ತದೆ.
ಗುರು ಗ್ರಹ ಗೋಚಾರ:
ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ ಗುರು ಗ್ರಹವು ಹನ್ನೊಂದನೇ ಮನೆಯಲ್ಲಿ ಸಂಚರಿಸುತ್ತದೆ. ಇದು ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ನೀಡುವ ಅವಧಿ ಇರುತ್ತದೆ. ಸಂತಾನಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಯಶಸ್ಸು ದೊರೆಯಲಿದೆ. ವ್ಯವಹಾರ-ವ್ಯಾಪಾರ ಮಾಡುತ್ತಿರುವವರಿಗೆ ಸಹ ಲಾಭದ ಪ್ರಮಾಣದಲ್ಲಿ ಏರಿಕೆ ಆಗಲಿದೆ. ಕಾರು- ಸ್ಕೂಟರ್, ಸೈಟು, ಫ್ಲ್ಯಾಟ್, ಕಟ್ಟಿರುವ ಮನೆ ಖರೀದಿ, ಅಲ್ಲಿ ಮನೆ ನಿರ್ಮಾಣ ಹೀಗೆ ಹಲವು ಶುಭ ಫಲಗಳು ಅನುಭವಕ್ಕೆ ಬರಲಿವೆ. ಇನ್ನು ಪಿತ್ರಾರ್ಜಿತ ಆಸ್ತಿ ವಿಚಾರಗಳು ಇದ್ದಲ್ಲಿ ಈ ಸಮಯದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದು ಸಾಧಕ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶಾವಕಾಶ ದೊರೆಯಲಿದೆ. ವ್ಯಾಸಂಗ- ಮದುವೆ, ಉನ್ನತ ವಿದ್ಯಾಭ್ಯಾಸ ಇವುಗಳಲ್ಲಿ ಅದೃಷ್ಟ ಕೈ ಹಿಡಿಯಲಿದೆ. ಜೂನ್ ನಿಂದ ಅಕ್ಟೋಬರ್ ಕೊನೆ ತನಕ ಹನ್ನೆರಡನೇ ಮನೆಯಾದ ವ್ಯಯ ಸ್ಥಾನದಲ್ಲಿ ಸಂಚರಿಸುವಾಗ ಅತಿ ಬುದ್ಧಿವಂತಿಕೆಯಿಂದ ಹಣ ಕಳೆದುಕೊಳ್ಳುವಂತೆ ಆಗಲಿದೆ, ನಷ್ಟವನ್ನು ಕಾಣುತ್ತೀರಿ. ಮಾನಸಿಕ ಸಮತೋಲನ ಕಾಯ್ದುಕೊಳ್ಳುವುದು ಬಹಳ ಮುಖ್ಯ. ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಿ. ಮಕ್ಕಳ ಬಗ್ಗೆ ಚಿಂತೆ, ಕೌಟುಂಬಿಕ ಜೀವನದಲ್ಲಿ ಕಿರಿಕಿರಿ, ಹೂಡಿಕೆಯಲ್ಲಿ ನಷ್ಟ ಮೊದಲಾದ ಫಲಗಳನ್ನು ಕಾಣುತ್ತೀರಿ.
ಇದನ್ನೂ ಓದಿ: 2026ನೇ ಹೊಸ ವರ್ಷ ಮಿಥುನ ರಾಶಿಯವರಿಗೆ ಹೇಗಿರಲಿದೆ? ವರ್ಷ ಭವಿಷ್ಯ ಇಲ್ಲಿದೆ
ರಾಹು-ಕೇತು ಗೋಚಾರ:
ಏಳನೇ ಮನೆಯಲ್ಲಿ ರಾಹು ಸಂಚಾರದಿಂದ ದಂಪತಿ- ಪ್ರೇಮಿಗಳ ಮಧ್ಯೆ ಜಗಳ- ಮನಸ್ತಾಪ, ಒಂದಲ್ಲ ಒಂದು ಕಾರಣಕ್ಕೆ ಅನುಮಾನಗಳು ಉದ್ಭವಿಸುವುದು ಈ ಎಲ್ಲ ಫಲಗಳನ್ನು ಕಾಣುವಂತೆ ಆಗಲಿದೆ. ಪಾರ್ಟನರ್ ಶಿಪ್ ವ್ಯವಹಾರ ಮಾಡುತ್ತಿರುವವರು ಕಾಗದ- ಪತ್ರ, ಲೆಕ್ಕಾಚಾರಗಳನ್ನು ಸರಿಯಾಗಿ ನೋಡಿಕೊಳ್ಳಿ. ನೀವು ಹುಟ್ಟಿದ ಸ್ಥಳದಿಂದ ಪರವೂರಿನಲ್ಲಿ, ಪರ ದೇಶದ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ನಾನಾ ರೀತಿಯ ಕಿರಿಕಿರಿ ಆಗಲಿದೆ. ನಿಮ್ಮಲ್ಲಿ ಕೆಲವರು ವಾಪಸ್ ಬಂದುಬಿಡುವ ಸಾಧ್ಯತೆಯೂ ಇದೆ. ವಿವಾಹಿತರು ಮದುವೆ ಆಚೆಗಿನ ಸಂಬಂಧಗಳ ಕಡೆಗೆ ನೋಡಬೇಡಿ. ಇದರಿಂದ ಸಿಕ್ಕಾಪಟ್ಟೆ ಹಿಂಸೆ ಅನುಭವಿಸುತ್ತೀರಿ. ಮದುವೆಯ ಪ್ರಯತ್ನಕ್ಕೆ ಜೂನ್ ತಿಂಗಳ ನಂತರ ಒಂದಲ್ಲ ಒಂದು ಬಗೆಯಲ್ಲಿ ಅಡೆತಡೆ ಕಾಡಲಿದೆ. ಅತ್ಯುತ್ಸಾಹವೂ ಒಳ್ಳೆಯದಲ್ಲ, ಅದೇ ರೀತಿ ವೈರಾಗ್ಯವೂ ಸೂಕ್ತವಲ್ಲ. ಈ ಎರಡೂ ನಿಮ್ಮ ಪಾಲಿಗೆ ಬಹುವಾಗಿ ಕಾಡಲಿವೆ. ಜನ್ಮ ರಾಶಿಯಲ್ಲಿಯೇ ಸಂಚರಿಸುವ ಕೇತುವಿನಿಂದ ಮಾನಸಿಕ ಖಿನ್ನತೆ ಬಹಳ ಕಾಡುತ್ತದೆ. ದೇವತಾ ಆರಾಧನೆಯಲ್ಲಿ ಮನಸ್ಸು ಲಗತ್ತಾಗಿ ನೆಡುವುದಕ್ಕೆ ಸಾಧ್ಯವಾಗಲಿಲ್ಲ. ಮರೆವಿನ ಸಮಸ್ಯೆ ವಿಪರೀತ ಕಾಡಲಿದೆ. ಪಾಪ ಕರ್ಮಾಸಕ್ತಿ ಹಾಗೂ ಪಾಪ ಭೀತಿ ಎರಡೂ ಕಾಡುತ್ತದೆ.
ಪರಿಹಾರ:
ಶನಿ ಹಾಗೂ ಗುರು ಆರಾಧನೆ, ದುರ್ಗಾ ಮತ್ತು ಗಣಪತಿ ಆರಾಧನೆಯನ್ನು ಮಾಡಿಕೊಳ್ಳಿ. ಅನುಕೂಲವಿದ್ದಲ್ಲಿ ಒಮ್ಮೆ ನವಗ್ರಹ ಶಾಂತಿಯನ್ನು ಮಾಡಿಕೊಳ್ಳುವುದು ಕ್ಷೇಮ.
ಲೇಖನ- ಸ್ವಾತಿ ಎನ್.ಕೆ.