ಇಸ್ಲಮಾಬಾದ್, ಜೂನ್ 23: ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ-ಜರ್ದಾರಿ ಇಂದು (ಸೋಮವಾರ) ಭಾರತಕ್ಕೆ ಮತ್ತೊಂದು ಬೆದರಿಕೆಯನ್ನು ಹಾಕಿದ್ದಾರೆ. ಭಾರತ ಸಿಂಧೂ ಜಲ ಒಪ್ಪಂದದ (IWT) ಅಡಿಯಲ್ಲಿ ಭಾರತವೇನಾದರೂ ಪಾಕಿಸ್ತಾನಕ್ಕೆ ತನ್ನ ನ್ಯಾಯಯುತವಾದ ನೀರಿನ ಪಾಲನ್ನು ನಿರಾಕರಿಸಿದರೆ ನಮ್ಮ ದೇಶ ಯುದ್ಧಕ್ಕೆ ಸಿದ್ಧವಾಗಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ಹಿಂದೆ ಭಾರತದ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಿಂಧೂ ಜಲ ಒಪ್ಪಂದವನ್ನು ಪುನಃಸ್ಥಾಪಿಸುವುದಿಲ್ಲ ಎಂದು ಘೋಷಿಸಿದ್ದರು.
ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತ 1960ರ ಒಪ್ಪಂದವನ್ನು ಸ್ಥಗಿತಗೊಳಿಸಿದೆ. ಕಳೆದ ವಾರ ಗೃಹ ಸಚಿವ ಅಮಿತ್ ಶಾ ಐತಿಹಾಸಿಕ ಒಪ್ಪಂದವನ್ನು ಎಂದಿಗೂ ಪುನಃಸ್ಥಾಪಿಸುವುದಿಲ್ಲ ಎಂದು ಘೋಷಿಸಿದ್ದರು. ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಅಮಿತ್ ಶಾ ಅವರ ಅಂತಾರಾಷ್ಟ್ರೀಯ ಒಪ್ಪಂದಗಳ ನಿರ್ಲಕ್ಷ್ಯವನ್ನು ಟೀಕಿಸಿದ ಎರಡು ದಿನಗಳ ನಂತರ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಖ್ಯಸ್ಥ ಬಿಲಾವಲ್ ಭುಟ್ಟೋ ಅವರ ಹೇಳಿಕೆಗಳು ಬಂದಿವೆ.
ಇದನ್ನೂ ಓದಿ: ಮೊನ್ನೆ ಮೊನ್ನೆ ಟ್ರಂಪ್ಗೆ ಶಾಂತಿ ಪುರಸ್ಕಾರ ಘೋಷಿಸಿ, ಈಗ ಶಾಂತಿ ಕದಡಿದಾಕ್ಷಣ ವರಸೆ ಬದಲಿಸಿದ ಪಾಕಿಸ್ತಾನ
ಇದನ್ನೂ ಓದಿ
ಇಂದು ಪಾಕಿಸ್ತಾನದ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಬಿಲಾವಲ್ ಭುಟ್ಟೋ, ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಭಾರತದ ನಿರ್ಧಾರವನ್ನು ತಿರಸ್ಕರಿಸಿದ್ದು, ಪಾಕಿಸ್ತಾನದ ನೀರಿನ ಪಾಲನ್ನು ಪಡೆಯುವುದಾಗಿ ಬೆದರಿಕೆ ಹಾಕಿದ್ದಾರೆ. “ಭಾರತಕ್ಕೆ ಎರಡು ಆಯ್ಕೆಗಳಿವೆ: ನೀರನ್ನು ನ್ಯಾಯಯುತವಾಗಿ ಹಂಚಿಕೊಳ್ಳಿ ಅಥವಾ ನಾವು 6 ನದಿಗಳಿಂದ ನಮಗೆ ಬೇಕಾದ ನೀರನ್ನು ಪಡೆಯುತ್ತೇವೆ” ಎಂದು ಅವರು ಸಿಂಧೂ ಜಲಾನಯನ ಪ್ರದೇಶದ 6 ನದಿಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ ಅತ್ಯಂತ ಬಡತನದಲ್ಲಿದೆ; ವಿಶ್ವ ಬ್ಯಾಂಕ್ ಬಹಿರಂಗಪಡಿಸಿದ ಆಘಾತಕಾರಿ ಮಾಹಿತಿ ಇಲ್ಲಿದೆ
ಹಾಗೇ, ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಖ್ಯಸ್ಥ ಬಿಲಾವಲ್ ಭುಟ್ಟೋ, ಭಾರತವೇನಾದರೂ ಸಿಂಧೂ ಜಲ ಒಪ್ಪಂದದ ರದ್ದತಿಯನ್ನು ತೆಗೆದುಹಾಕದಿದ್ದರೆ, “ನಾವು ಮತ್ತೆ ಯುದ್ಧ ಮಾಡಬೇಕಾಗುತ್ತದೆ” ಎಂದು ಬೆದರಿಕೆ ಹಾಕಿದ್ದಾರೆ. ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ “ಭಾರತ ಮತ್ತು ಪಾಕಿಸ್ತಾನ ಮಾತನಾಡಲು ನಿರಾಕರಿಸಿದರೆ ಮತ್ತು ಭಯೋತ್ಪಾದನೆಯ ಬಗ್ಗೆ ಯಾವುದೇ ಸಮನ್ವಯವಿಲ್ಲದಿದ್ದರೆ ಎರಡೂ ದೇಶಗಳಲ್ಲಿ ಹಿಂಸಾಚಾರ ತೀವ್ರಗೊಳ್ಳುತ್ತದೆ. ಭಾರತ ರಾಜಕೀಯ ಉದ್ದೇಶಗಳಿಗಾಗಿ ಭಯೋತ್ಪಾದನೆಯನ್ನು ಅಸ್ತ್ರವಾಗಿ ಬಳಸುತ್ತಿದೆ. ಪಾಕಿಸ್ತಾನವು ವಿಶ್ವ ವೇದಿಕೆಯಲ್ಲಿ ಕಾಶ್ಮೀರ ವಿಷಯವನ್ನು ಎತ್ತುವಲ್ಲಿ ಯಶಸ್ವಿಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾಶ್ಮೀರದ ಬಗ್ಗೆ ಮಧ್ಯಸ್ಥಿಕೆ ವಹಿಸುವ ಮಾತನಾಡಿದ್ದಾರೆ” ಎಂದು ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ