ನೆಲಮಂಗಲ, ಡಿಸೆಂಬರ್ 16: ರಾಜ್ಯಕ್ಕೆ ವಿನಾಯಿತಿ ಮೇಲೆ ಕೇಂದ್ರ ಸರ್ಕಾರ ಕೊಡ್ತಿದೆ ಯೂರಿಯಾದ ಅಭಾವದಿಂದಾಗಿ ರೈತರು ಪರದಾಟ ನಡೆಸಿದ ಸಾಕಷ್ಟು ಘಟನೆಗಳು ನಡೆದಿವೆ. ಕಿಲೋ ಮೀಟರ್ ಗಟ್ಟಲೆ ಉದ್ದದ ಸರತಿ ಸಾಲಲ್ಲಿ ನಿಂತರೂ ಯೂರಿಯಾ ಸಿಗದೆ ಅದೆಷ್ಟೋ ಮಂದಿ ಹಿಂದಿರುಗಿದ್ದಾರೆ. ಈ ನಡುವೆ ರೈತರಿಗೆ ಹಂಚಿಕೆಯಾಗಬೇಕಿದ್ದ ಯೂರಿಯಾ ಕಾಳಸಂತೆಯಲ್ಲಿ ಮಾರಾಟವಾಗ್ತಿರೋ ಆತಂಕಕಾರಿ ವಿಷಯ ಬಹಿರಂಗವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಗೆಜ್ಜಗದಹಳ್ಳಿ ಬಳಿ ಅಕ್ರಮವಾಗಿ ಸಂಗ್ರಹಿಸಿದ್ದ ಯೂರಿಯಾವನ್ನು ಡಿಆರ್‌ಐ ಜಪ್ತಿ ಮಾಡಿದೆ.
ದಾಳಿಯ ವೇಳೆ ಗೆಜ್ಜಗದಹಳ್ಳಿಯಲ್ಲಿ 2 ಸಾವಿರ ಕೆಜಿ ಯೂರಿಯಾವನ್ನು ಡಿಆರ್‌ಐ ವಶಕ್ಕೆ ಪಡೆದಿದೆ. 6 ತಿಂಗಳ ಹಿಂದೆ ತಜೀರ್ ಖಾನ್ ಯೂಸುಫ್ ಎಂಬವರು ತಿಂಗಳಿಗೆ 40 ಸಾವಿರಕ್ಕೆ ಶೆಡ್ ಬಾಡಿಗೆಗೆ ಪಡೆದಿದ್ದರು.ಇಲ್ಲಿಂದ ಯೂರಿಯಾ ಪ್ಯಾಕ್ ಮಾಡಿ ತಮಿಳುನಾಡಿಗೆ ಕಳುಹಿಸಲಾಗುತಿತ್ತು. ತಮಿಳುನಾಡಿನಲ್ಲಿ ದಾಳಿ ವೇಳೆ DRI ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಸಿಕ್ಕಿತ್ತು. ರಾಜ್ಯಕ್ಕೆ ಕೇಂದ್ರ ಸರ್ಕಾರ ಕೊಡ್ತಿದ್ದ 45 ಕೆಜಿ ತೂಕದ ಯೂರಿಯಾವನ್ನು ಶೆಡ್‌ಗಳಿಗೆ ತಂದು ದಾಸ್ತಾನು ಮಾಡಲಾಗ್ತಿತ್ತು. ಬಳಿಕ ಅದನ್ನು ಬೇರೆ ಚೀಲಗಳಿಗೆ ತುಂಬಿ 50 ಕೆಜಿ ಚೀಲವನ್ನಾಗಿ ಮಾಡಿ ಮಾರಾಟ ಮಾಡಬಹುದಾಗಿದೆ. ಕೇವಲ 266 ರೂ.ಗೆ ರೈತರಿಗೆ ನೀಡಬೇಕಿದ್ದ ಯೂರಿಯಾ ಗೊಬ್ಬರವನ್ನು ಅಕ್ರಮವಾಗಿ 2000 ರೂ.ಗೆ ದಂಧೆಕೋರರು ಮಾರಾಟ ಮಾಡುತ್ತಿದ್ದರು.
ಇದನ್ನೂ ಓದಿ: ರಾಯಚೂರಿನಲ್ಲಿ 79 ಟನ್ ಯೂರಿಯಾ ಕಾಳಸಂತೆಯಲ್ಲಿ ಮಾರಾಟ
ಕೇಂದ್ರವು 45 ಕೆಜಿ ತೂಕದ 2321 ರೂ. ಬೆಲೆಯ ಯೂರಿಯಾಗೆ 2054 ರೂ. ಸಬ್ಸಿಡಿ ನೀಡಿ 266 ರೂಪಾಯಿಗೆ ರಾಜ್ಯಕ್ಕೆ ನೀಡಲಾಗಿದೆ. ಅದನ್ನೇ ಇವರು ಕಾಳಸಂತೆಯಲ್ಲಿ 2500 ರೂ. ವರೆಗೆ ಮಾರಾಟ ಮಾಡುತ್ತಿರುವುದೀಗ ಬಯಲಾಗಿದೆ. ಕೇಂದ್ರ ಸರ್ಕಾರದಿಂದ ಯೂರಿಯಾ ರಾಜ್ಯದ ಕೃಷಿ ಇಲಾಖೆಗೆ ವರ್ಗಾವಣೆ ಆಗುತ್ತದೆ. ಆ ಬಳಿಕ ಇಲಾಖೆಯೇ ರೈತರಿಗೆ ಇವನ್ನು ವಿತರಣೆ ಮಾಡಬೇಕು. ಹೀಗಿರುವಾಗ ಅವು ದಂಧೆಕೋರರ ಕೈಸೇರುತ್ತಿರೋದಾದ್ರೂ ಹೇಗೆ ಎಂಬ ಪ್ರಶ್ನೆಯೂ ಈಗ ಎದುರಾಗಿದೆ.
ವಿಪಕ್ಷ ನಾಯಕ ಆರ್. ಅಶೋಕ್ ಕಿಡಿ
ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿರೋ ವಿಪಕ್ಷ ನಾಯಕ ಅಶೋಕ್, ರಾಜ್ಯದಲ್ಲಿ ದೊಡ್ಡ ಯೂರಿಯಾ ಹಗರಣವೇ ನಡೆದಿದೆ. DRI ಕಾಳಸಂತೆಯಲ್ಲಿ ಗೊಬ್ಬರ ವಶಪಡಿಸಿಕೊಂಡಿದ್ದು, ಕೇಂದ್ರ ಸರ್ಕಾರ ಯೂರಿಯಾ ಕೊಡ್ತಿಲ್ಲ ಎಂದಿದ್ದ ರಾಜ್ಯದ ಸಚಿವರು ಈಗ ಏನು ಹೇಳುತ್ತಾರೆ? ಕಾಳಸಂತೆಗೆ ಯೂರಿಯಾ ಹೋಗಿದ್ದೇಗೆ? ನಿದ್ದೆ ಮಾಡುತ್ತಿರುವ ರಾಜ್ಯ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ. ಈ ಬಗ್ಗೆ ವಿಧಾನ ಸಭೆಯಲ್ಲೂ ಚರ್ಚೆ ನಡೆಯಲಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.