ಜುಲೈ, ಡಿಸೆಂಬರ್ 17: ಆಯಪಲ್ ಕಂಪನಿ (Apple) ಭಾರತದೊಂದಿಗೆ ಹೆಚ್ಚೆಚ್ಚು ಬೆಸೆದುಕೊಳ್ಳುತ್ತಿದೆ. ಐಫೋನ್‌ಗಳ ಬಿಡಿಭಾಗಗಳಿಗೆ ಬಳಕೆಯಾಗುವ ಚಿಪ್ ಅಸೆಂಬ್ಲಿಂಗ್ ಮತ್ತು ಭಾರತದಲ್ಲಿ ನಿರ್ಮಿಸಲು ಆಲೋಚನೆಯಲ್ಲಿದೆ. ಈ ಯೋಜನೆ ಸಾಕಾರಗೊಂಡರೆ ಭಾರತದ ಸೆಮಿಕಂಡಕ್ಟರ್ ಮಿಷನ್‌ಗೆ ಒಂದು ದೊಡ್ಡ ಶಕ್ತಿ ಮತ್ತು ಯಶಸ್ಸು ಸಿಕ್ಕಂತಾಗುತ್ತದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಐಫೋನ್ ಕಾಂಪೊನೆಂಟ್ ಅಸೆಂಬ್ಲಿ ಮತ್ತು ಪ್ಯಾಕೇಜಿಂಗ್ ಕಾರ್ಯಕ್ಕಾಗಿ ಆಯಪಲ್ ಕಂಪನಿಯು ಭಾರತದ ಕೆಲ ಸೆಮಿಕಂಡಕ್ಟರ್ ಕಂಪನಿಗಳೊಂದಿಗೆ ಮಾತುಕತೆ ಶುರುವಿಟ್ಟಿದೆಯಂತೆ.
ಐಫೋನ್‌ಗಳಲ್ಲಿ ಬಹಳ ಮುಖ್ಯವಾದ ಭಾಗವೆನಿಸುವುದು ಅದರ ಚಿಪ್‌ಗಳು. ಹೀಗಾಗಿ, ಇವುಗಳ ಅಸೆಂಬ್ಲಿಂಗ್ ಮತ್ತು ಪರೀಕ್ಷೆಯ ಕಾರ್ಯವು ಭಾರತದಲ್ಲಿ ನಡೆದರೆ ಅದು ಭಾರತದ ಪಾಲಿಗೆ ಒಂದು ಮಹತ್ವದ ಬೆಳವಣಿಗೆಯಾಗುತ್ತದೆ. ಜಾಗತಿಕ ಮಟ್ಟದಲ್ಲಿ ಸರಬರಾಜು ಸರಪಳಿಯಲ್ಲಿ ಭಾರತವು ಹೆಚ್ಚಿನ ಮೌಲ್ಯವನ್ನು ಗಳಿಸಬಹುದು.
ಇದನ್ನೂ ಓದಿ: ಅಮೆರಿಕದಿಂದ ಪಾಕಿಸ್ತಾನಕ್ಕೆ ಮಿಲಿಟರಿ ಪ್ಯಾಕೇಜ್; ಪಾಕ್ ಅಂದ್ರೆ ಅಮೆರಿಕ, ಚೀನಾಗೆ ಯಾಕೆ ಪ್ರೀತಿ?
ಮುರುಗಪ್ಪ ಗ್ರೂಪ್ ನ ಸಿಜಿ ಸೆಮಿ ಜೊತೆ ಆಯಪಲ್ ಮಾತುಕತೆ?
ವರದಿ ಪ್ರಕಾರ ಚಿಪ್ ಅಸೆಂಬ್ಲಿಂಗ್ ಗಾಗಿ ಆಯಪಲ್ ಕಂಪನಿಯು ಕೆಲ ಭಾರತೀಯ ಸೆಮಿಕಂಡಕ್ಟರ್ ಕಂಪನಿಯೊಂದಿಗೆ ಮಾತನಾಡುತ್ತಿದೆ. ಇವುಗಳಲ್ಲಿ ಮುರುಗಪ್ಪ ಗ್ರೂಪ್ನ ಸಿಜಿ ಸೆಮಿ (ಮುರುಗಪ್ಪ ಗ್ರೂಪ್ನ ಸಿಜಿ ಸೆಮಿ) ಕಂಪನಿಯೂ ಒಂದು. ಈ ಸಂಸ್ಥೆ ಗುಜರಾತ್ನ ಸಾನಂದ್ನಲ್ಲಿ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ (ಓಸಾಟ್) ಘಟಕವನ್ನು ಸ್ಥಾಪಿಸಲಾಗಿದೆ. ಇಲ್ಲಿ ಡಿಸ್ಪ್ಲೇ ಸಂಬಂಧಿತ ಚಿಪ್ಗಳ ಅಸೆಂಬ್ಲಿಂಗ್ ಮತ್ತು ಪರೀಕ್ಷೆ ನಡೆಯುವ ಉದ್ದೇಶವಿದೆ.
ಆದರೆ, ಮಾತುಕತೆಗಳು ಇನ್ನೂ ಆರಂಭಿಕ ಹಂತದಲ್ಲಿವೆ. ಆಯಪಲ್ ಕಂಪನಿಯು ತೂಗಿ ಗುತ್ತಿಗೆಗಳನ್ನು ನೀಡಿದೆ. ತನಗೆ ಸಮಾಧಾನವಾಗುವಂತಹ ಗುಣಮಟ್ಟದಲ್ಲಿ ಕೆಲಸ ಮಾಡಬಲ್ಲ ಕಂಪನಿಗಳಿಗೆ ಅದು ಕಾಂಟ್ರಾಕ್ಟ್ ನೀಡಿದೆ. ಒಂದು ವೇಳೆ, ಸಿಜಿ ಸೆಮಿಗೆ ಈ ಆಯಪಲ್ ಕಾಂಟ್ರಾಕ್ಟ್ ಸಿಕ್ಕರೆ ಮಹತ್ವದ ಮೈಲಿಗಲ್ಲೆನಿಸಬಹುದು.
ಇದನ್ನೂ ಓದಿ: ಸತ್ತ ಆರ್ಥಿಕತೆ ಎಂದಿದ್ದ ಟ್ರಂಪ್‌ಗೆ ತಕ್ಕ ಉತ್ತರ; ನವೆಂಬರ್‌ನಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಭರ್ಜರಿ ಏರಿಕೆ
ಸದ್ಯ ಆಯಪಲ್ ಕಂಪನಿ ತನ್ನ ಐಫೋನ್ ಡಿಸ್ಪ್ಲೇ ಪ್ಯಾನಲ್‌ಗಳನ್ನು ಸ್ಯಾಮ್‌ಸಂಗ್ ಡಿಸ್ಪ್ಲೇ, ಎಲ್ಜಿ ಡಿಸ್ಪ್ಲೇ ಮತ್ತು ಬಿಒಐ ಕಂಪನಿಗಳಿಂದ ತರಿಸಿಕೊಳ್ಳುತ್ತದೆ. ಈ ಡಿಸ್ಪ್ಲೇ ಪ್ಯಾನಲ್ಗಳಿಗೆ ಬೇಕಾದ ಡಿಸ್ಪ್ಲೇ ಡ್ರೈವರ್ ಐಸಿಗಳನ್ನು ಸ್ಯಾಮ್ಸಂಗ್, ನೊವಾಟೆಕ್, ಹಿಮಾಕ್ಸ್, ಎಲ್ಎಕ್ಸ್ ಸೆಮಿಕಾನ್ ಕಂಪನಿಗಳು ಸರಬರಾಜು ಮಾಡುತ್ತವೆ. ಎಲ್ಲಾ ಘಟಕಗಳು ಸೌತ್ ಕೊರಿಯಾ, ತೈವಾನ್ ಮತ್ತು ಚೀನಾದಲ್ಲಿಯೇ ಇರುವುದು.
ಅಲ್ಲಿ ಒತ್ತೊತ್ತಾಗಿರುವ ಸರಬರಾಜು ಸರಪಳಿಯನ್ನು ವಿಸ್ತರಿಸಬೇಕೆಂದಿರುವ ಆಯಪಲ್ ಕಂಪನಿ ಈಗ ಭಾರತದಲ್ಲಿ ಅಂಥ ಕಂಪನಿಗಳನ್ನು ನೆಲೆಗೊಳಿಸಲು ಯೋಜಿಸುತ್ತಿದೆ. ಐಫೋನ್ ಅಸೆಂಬ್ಲಿಂಗ್‌ಗಾಗಿ ಫಾಕ್ಸ್‌ಕಾನ್, ಟಾಟಾ ಹೆಚ್‌ಡಿಎಸ್, ಪೆಗಾಟ್ರಾನ್ ಕಂಪನಿಗಳಿಗೆ ಗುತ್ತಿಗೆ ಕೊಟ್ಟಂತೆ, ಚಿಪ್ ಅಸೆಂಬ್ಲಿಂಗ್ ಮತ್ತು ಟೆಸ್ಟಿಂಗ್ ಕೂಡ ಭಾರತದಲ್ಲಿ ಆಗಬೇಕೆಂಬುದು ಆಯಪಲ್ ಪ್ಲಾನ್.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ