ಮಜಾಭಾರತ ಕಾಮಿಡಿ ಶೋ ಮೂಲಕ ಫೇಮಸ್ ಆಗಿರೋ ನಟಿ ಸುಶ್ಮಿತಾ ಗೌಡ ತಮ್ಮ ಬದುಕಿನ ಕಹಿ ಘಟನೆಗಳನ್ನು ತೆರೆದಿಟ್ಟಿದ್ದಾರೆ. ಏನದು ನೋಡಿ!
‘ಮಜಾ ಭಾರತ’ ಕಾಮಿಡಿ ಶೋ ಮೂಲಕ ಫೇಮಸ್ ಆದವರು ಜಗಪ್ಪ ಮತ್ತು ಸುಶ್ಮಿತಾ ಗೌಡ ಇಬ್ಬರೂ ಈಗ ದಂಪತಿ. ಸುಷ್ಮಿತಾ ಹಾಗೂ ಜಗಪ್ಪ ಅವರ ಸ್ನೇಹ ನೋಡಿದ ಕೆಲವರು ಇವರಿಬ್ಬರು ಮದುವೆ ಆಗ್ತಾರೆ ಎಂದು ಊಹಿಸಿದ್ದರು. ಆರಂಭದಲ್ಲಿ “ನಾವು ಸ್ನೇಹಿತರು” ಎಂದು ಹೇಳಿದ್ದ ಈ ಜೋಡಿ ಕೊನೆಗೂ ಎಲ್ಲರ ಮುಂದೆ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಈ ಜೋಡಿ ‘ಆನ್‌ಲೈನ್ ಮದುವೆ ಆಫ್‌ಲೈನ್ ಶೋಭನ’ ಸಿನಿಮಾದಲ್ಲಿ ನಾಯಕ-ನಾಯಕಿಯಾಗಿದ್ದಾರೆ. ಸುಶ್ಮಿತಾ ಜೊತೆಗೆ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ‘ಸೀರುಂಡೆ’ ರಘು ಒಟ್ಟಿಗೆ ಅಭಿನಯಿಸಿದ್ದು, ಕಳೆದ ವರ್ಷ ತೆರೆ ಕಂಡ ಚಿತ್ರ ಸಕತ್ ಎಲ್ಲರನ್ನೂ ರಂಜಿಸಿದೆ. ಸದ್ಯ ಜಗಪ್ಪ ಹಾಗೂ ಸುಷ್ಮಿತಾ ಪರಸ್ಪರ ಬೆಂಬಲ ಕೊಟ್ಟುಕೊಂಡು ಬೆಳೆದರು. ಇಂದು ಇವರಿಬ್ಬರು ಧಾರಾವಾಹಿ, ಸಿನಿಮಾ, ರಿಯಾಲಿಟಿ ಶೋ ಎಂದು ಕನ್ನಡ ಚಿತ್ರರಂಗದಲ್ಲಿ ಫುಲ್ ಬ್ಯುಸಿ ಇದ್ದಾರೆ.
ಇದೀಗ ನಟಿ ತಮ್ಮ ಜೀವನದ ಕೆಲವೊಂದು ವಿಷಯಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಸುಶ್ಮಿತಾ ಅವರು ಪ್ರೇಕ್ಷಕರು ಕೊಡುವ ನೆಗೆಟಿವ್ ಕಮೆಂಟ್ಸ್ಗೆ ತಾವು ಹೇಗೆ ನೊಂದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ಮಜಾ ಭಾರತದಲ್ಲಿ ಹಾಸ್ಯ ಮಾಡುವುದಕ್ಕಾಗಿಯೇ ನಾನು ಭಿಕ್ಷುಕಿ ಥರ ರೋಲ್ ಮಾಡಿದ್ದೆ. ಅಲ್ಲಿ ನನ್ನ ಗೆಟಪ್ ಕೂಡ ಹಾಗೆಯೇ ಇತ್ತು. ಆದರೆ ಜನ ನನ್ನನ್ನು ಹಾಗೆಯೇ ನೋಡಲು ಇಚ್ಛೆಪಡುವಂತಿದೆ. ನಾನು ಸ್ವಲ್ಪ ಒಳ್ಳೆಯ ರೀತಿಯಲ್ಲಿ ಡ್ರೆಸ್ ಮಾಡಿಕೊಂಡರೆ ಅದಕ್ಕೂ ನೆಗೆಟಿವ್ ಕಮೆಂಟ್ ಹಾಕುತ್ತಾರೆ. ಸಂದರ್ಶನದಲ್ಲಿ ಇಂಗ್ಲಿಷ್ ಹೆಚ್ಚು ಬಳಕೆ ಮಾಡಿದ್ರೆ ಇಂಗ್ಲಿಷ್ಗೆ ಹುಟ್ಟಿದವಳ ರೀತಿ ಆಡ್ತಾಳೆ ಅಂತಾರೆ. ಹೊಸ ಕಾರನ್ನೂ ನಾನು ತೆಗೆದುಕೊಳ್ಳುವಂತಿಲ್ಲ, ಹೊಸ ಮನೆ ಪರ್ಚೇಸ್ ಮಾಡುವಂತಿಲ್ಲ. ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿದ್ರೆ, ಇವಳ ಬಳಿ ಇಷ್ಟು ದುಡ್ಡು ಎಲ್ಲಿಂದ ಬಂತು? ಭಿಕ್ಷುಕಿ ಥರ ಇದ್ದೋಳಿಗೆ ಹೇಗೆ ದುಡ್ಡು ಬಂತು ಅಂತೆಲ್ಲಾ ಕೇಳ್ತಾರೆ. ಇದರಿಂದ ನನಗೆ ತುಂಬಾ ನೋವಾಗುತ್ತದೆ ಎಂದಿದ್ದಾರೆ.
ನಾನು ಆ್ಯಕ್ಟಿಂಗ್ಗೆ ಸುಲಭದಲ್ಲಿ ಬಂದೆ. ಆದರೆ ಈ ನೆಗೆಟಿವ್ ಕಮೆಂಟ್ ತಡೆದುಕೊಳ್ಳಲು ಆಗುವುದಿಲ್ಲ. ಮನೆಯಲ್ಲಿ ಕಷ್ಟ ಇದ್ದರೂ, ನನ್ನ ಅಪ್ಪ-ಅಮ್ಮ ನನ್ನನ್ನು ಚೆನ್ನಾಗಿಯೇ ಬೆಳೆಸಿದ್ದಾರೆ. ತೀರಾ ಬಡವರಂತೆ ಬೆಳೆಸಿಲ್ಲ. ನಾನು ಇದಾಗಲೇ ಹಲವು ಸೀರಿಯಲ್, ರಿಯಾಲಿಟಿ ಷೋಗಳಲ್ಲಿ ಕೆಲಸ ಮಾಡಿದ್ದೇನೆ. ಕೈತುಂಬಾ ಕೆಲಸವೂ ಇದೆ. ನನ್ನ ದುಡಿಮೆಯಿಂದ ಏನಾದರೂ ವಸ್ತು ತೆಗೆದುಕೊಂಡರೆ ಅದಕ್ಕೂ ಕೆಟ್ಟದ್ದಾಗಿ ಹೇಳಿದ್ರೆ ಮನಸ್ಸಿಗೆ ನೋವಾಗುತ್ತದೆ ಎಂದು ದುಃಖ ತೋಡಿಕೊಂಡಿದ್ದಾರೆ ಸುಶ್ಮಿತಾ. ಇನ್ನು ನಟಿಯ ಕುರಿತು ಹೇಳುವುದಾದರೆ, ಕನ್ನಡ ಜನಪ್ರಿಯ ಹಾಸ್ಯ ರಿಯಾಲಿಟಿ ಶೋ ಮಜಾ ಭಾರತ ಮತ್ತು ಗಿಚ್ಚಿ ಗಿಲಿಗಿಲಿ ಸೀಸನ್ 1 ಮತ್ತು 2 ರಲ್ಲಿ ಸ್ಪರ್ಧಿಸಿರುವ ಸುಶ್ಮಿತಾ ಈ ಹಿಂದೆ ಸಿನಿಮಾ ರಂಗಕ್ಕೆ ಕಾಲಿಡಬೇಕು ಎಂದು ಸಾಕಷ್ಟು ಆಡಿಷನ್‌ಗಳನ್ನು ನೀಡಿದ್ದರಂತೆ. ಅದೆಷ್ಟೋ ಮಂದಿ ಆಡಿಷನ್‌ಗೆ ಕರೆ ಮಾಡುತ್ತಿದ್ದರು ಆಗ ಒಂದೂ ಮಿಸ್ ಮಾಡದೇ ಪ್ರಯತ್ನ ಪಡುತ್ತಿದ್ದರಂತೆ. ಆದರೆ ಒಂದು ದಿನ ಹೋಟೆಲ್‌ನಲ್ಲಿ ಹೋಗಿ ಹಿಂತಿರುಗಿ ಬಂದು ತೆಗೆದುಕೊಂಡ ನಿರ್ಧಾರ ಜೀವನ ಬದಲಾಯಿಸಿತ್ತು ಎಂದು ಹೇಳಿದ್ದರು.
ಒಂದು ಸಲ ನಾನು ಆಡಿಷನ್ ಕೊಟ್ಟಿದ್ದೆ..ನಿಜ ಹೇಳಬೇಕು ಅಂದ್ರೆ ನಾನು ಆಡಿಷನ್ ಕೊಟ್ಟ ಸ್ಥಳವೇ ಆ ತರ ಇತ್ತು. ಆ ಘಟನೆ ನೆನಪಿಸಿಕೊಂಡೆ ಆಗುವುದಿಲ್ಲ. ಸಾಮಾನ್ಯವಾಗಿ ನಾನು ಆಡಿಷನ್ ಕೊಡುವ ದಿನ ಒಟ್ಟಿಗೆ ಯಾರನ್ನಾದರೂ ಕರೆದುಕೊಂಡು ಹೋಗುವೆ ಆದರೆ ಅಂದು ನಾನು ಹೋಗಿದ್ದು ಹೋಟೆಲ್ ರೂಮ್ (ಲಾಡ್ಜ್) ಆದರೆ ಅವತ್ತು ನನ್ನ ಪರಿಸ್ಥಿತಿ ಸರಿಯಾಗಿರಲಿಲ್ಲ ಹೀಗಾಗಿ ನನ್ನ ಜೊತೆ ಯಾರೂ ಬರಲಿಲ್ಲ. ಅವತ್ತು ಹೋಟೆಲ್ ಮುಂದೆ ನಿಂತುಕೊಂಡಿದ್ದಾಗ ಆ ಹೋಟೆಲ್ ಹೆಸರಿನ ಪಕ್ಕ ಲಾಡ್ಜ್ ಅನ್ನೋ ಪದ ಬರೆದಿದ್ದರು…ಯಾರು ಲಾಡ್ಜ್‌ನಲ್ಲಿ ಆಡಿಷನ್ ಮಾಡುತ್ತಾರೆ ಅಂತ ಅವತ್ತು ಅಂದುಕೊಂಡೆ. ಧೈರ್ಯ ಮಾಡಿಕೊಂಡು ವಾಚ್‌ಮೆಸ್ ಸಹಾಯದಿಂದ ನಾನು ಮೆಟ್ಟಿಲು ಹತ್ತಿ ಮೂರನೇ ಮಹಡಿ ಕಡೆ ನಡೆದುಕೊಂಡು ಹೋದೆ ಆದರೆ ನನ್ನ ಮನಸ್ಸು ಬೇಡ ಈ ಕೆಲಸ ಒಪ್ಪಿಕೊಳ್ಳಬೇಡ ಆಡಿಷನ್ ಕೊಡಬೇಡ ಎನ್ನುತ್ತಿತ್ತು ತಕ್ಷಣವೇ ನಾನು ಕೆಳಗೆ ಇಳಿದು ಬಂದೆ. ಅವತ್ತೇ ನಿರ್ಧಾರ ಮಾಡಿಕೊಂಡೆ ಆಡಿಷನ್‌ಗೆ ಜೊತೆಯಲ್ಲಿ ಒಬ್ಬರನ್ನು ಕರೆದುಕೊಂಡು ಹೋಗಬೇಕು ಇಲ್ಲ ಅಂದ್ರೆ ಯಾವುದಾದರೂ ದಾರಿ ಹುಡುಕಿ ಕೆಲಸ ಮಾಡೋಣ ಅಂತ ಮನಸ್ಸು ಮಾಡಿದೆ’ ಎಂದು ಸುಶ್ಮಿತಾ ಮಾತನಾಡಿದ್ದರು.