ಬೆಂಗಳೂರು, ಡಿಸೆಂಬರ್ 18: ಬೆಂಗಳೂರು (ಬೆಂಗಳೂರು) ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸತೀಶ್ ಅವರನ್ನು ಪ್ರೀತಿಸುವಂತೆ ಪೀಡಿಸಿ, ಬ್ಲಾಕ್ಮೇಲ್ನಲ್ಲಿ ಆರೋಪಿ ವನಜಾ ಅಲಿಯಾಸ್ ಸಂಜನಾ ಕುರಿತು ಆತಂಕಕಾರಿ ಮಾಹಿತಿ ಲಭ್ಯವಾಗಿದೆ. ಇನ್ಸ್ ಪೆಕ್ಟರ್ ಸತೀಶ್ ದಾಖಲಿಸಿದ್ದ ಎಫ್ ಐಆರ್ ಆಧಾರದಲ್ಲಿ ಸಂಜನಾಳನ್ನು ಬುಧವಾರ ಸಂಜೆ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಇದರ ಬೆನ್ನಲ್ಲೇ, ಆಕೆಯ ವಿರುದ್ಧದ ಹಲವು ಆರೋಪಗಳು ಬೆಳಕಿಗೆ ಬಂದಿವೆ.
ಹಣವರ ಜತೆ ಸ್ನೇಹ, ಮನೆಗೆ ಊಟಕ್ಕೆ ಆಹ್ವಾನಿಸಿ ಚಕ್ಕಂಡ!
ಸಂಜನಾ ಹಣವಿರುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಬೆಳೆಸಿ, ಮನೆಗೆ ಊಟಕ್ಕೆ ಆಹ್ವಾನಿಸುತ್ತಿದ್ದಳು. ಅವರ ಸಂಪರ್ಕವನ್ನೂ ಹೊಂದುತ್ತಿದ್ದಳು. ಬಳಿಕ ಅವರ ಫೋಟೋ ಹಾಗೂ ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿ ಹಣ, ಚಿನ್ನಾಭರಣ ಕಸಿದುಕೊಳ್ಳುತ್ತಿದ್ದಳು ಎಂಬ ಆರೋಪವಿದೆ.
ಇದೇ ರೀತಿಯಲ್ಲಿ ಸತೀಶ್ ರೆಡ್ಡಿ ಎಂಬ ಗುತ್ತಿಗೆದಾರನನ್ನು ಹನಿಟ್ರ್ಯಾಪ್ಗೆ ಬೀಳಿಸಿ, ಮೊದಲ ಹಂತದಲ್ಲಿ ಮೂರು ಲಕ್ಷ ರೂಪಾಯಿ, ಚಿನ್ನದ ಸರ, ಬ್ರೆಸ್ಲೆಟ್ ಹಾಗೂ ಉಂಗುರವನ್ನು ಪಡೆದುಕೊಂಡಿದ್ದಾಳೆ. ಈ ಸಂಬಂಧ 2022ರಲ್ಲಿ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಷ್ಟೇ ಅಲ್ಲದೆ, ಗುತ್ತಿಗೆದಾರ ಸತೀಶ್ ರೆಡ್ಡಿ ಅವರ ಎರಡು ಅಂತಸ್ತಿನ ಕಟ್ಟಡವನ್ನು ಲಪಟಾಯಿಸಲು ಯತ್ನಿಸಿದ ಆರೋಪದ ಮೇಲೆ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಇದೇ ರೀತಿಯಲ್ಲಿ ಹಲವರನ್ನು ಹನಿಟ್ರ್ಯಾಪ್ಗೆ ಸೆಳೆಯಲು ಯತ್ನಿಸಿದ್ದಾಳೆ ಎಂಬ ಆರೋಪ ಸಂಜನಾ ಮೇಲಿದೆ.
ಪೊಲೀಸ್ ಅಧಿಕಾರಿಗಳನ್ನು ಬಿಡದ ಚಾಲಾಕಿ
ಸಂಜನಾ ವಿರುದ್ಧ ಪೊಲೀಸ್ ಅಧಿಕಾರಿಗಳಿಗೂ ಬ್ಲ್ಯಾಕ್ಮೇಲ್ ಆರೋಪಗಳಿವೆ. 2018ರಲ್ಲಿ ದಾವಣಗೆರೆ ಮೂಲದ ಹೆಡ್ ಕಾನ್ಟೇಬಲ್ ಜಗದೀಶ್ ವಿರುದ್ಧ ಮದುವೆ ನೆಪದಲ್ಲಿ ವಂಚನೆ ಮಾಡಿದ್ದಾರೆ ಎಂದು ವೈಟ್ಫೀಲ್ಡ್ ಠಾಣೆಯಲ್ಲಿ ದೂರು ನೀಡಿದ್ದಳು. ಆದರೆ ತನಿಖೆಯಲ್ಲಿ ಅದು ಸುಳ್ಳು ದೂರು ಎಂದು ನ್ಯಾಯಾಲಯ ಬಿ-ರಿಪೋರ್ಟ್ ಸಲ್ಲಿಸಿದ್ದರು.
ಇತ್ತೀಚೆಗೆ ರಾಮಮೂರ್ತಿ ನಗರ ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ ಅವರ ಪ್ರೀತಿಯ ಹೆಸರಲ್ಲಿ ಗಾಳ ಹಾಕಿ, ನಿರಂತರ ಕಾಟ ನೀಡಿದ ಪ್ರಕರಣದಲ್ಲಿ ಸಂಜನಾ ಬಂಧನಕ್ಕೊಳಗಾಗಿದ್ದಾಳೆ. ನಾನು ಪೊಲೀಸ್ ಅಧಿಕಾರಿ ಪತ್ನಿ ಎಂದು ಹೇಳಿಕೊಂಡು ಹಲವರನ್ನು ಬೆದರಿಸಿದ್ದಾಳೆ ಎಂಬ ಆರೋಪವೂ ದಾಖಲಾಗಿದೆ.
ಇದನ್ನೂ ಓದಿ: Love U ಚಿನ್ನಿ: ಲವ್ ಮಾಡುವಂತೆ ಇನ್ಸ್ ಪೆಕ್ಟರ್ ಹಿಂದೆ ಬಿದ್ದ ಕಾಂಗ್ರೆಸ್ ಕಾರ್ಯಕರ್ತೆ, ಆಮೇಲೇನಾಯ್ತು?
ಸದ್ಯ ಪೊಲೀಸರು ಸಂಜನಾ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಒಟ್ಟುಗೂಡಿಸಿ ತನಿಖೆ ನಡೆಸುತ್ತಿದ್ದಾರೆ, ಆಕೆಯಿಂದ ವಂಚನೆಗೆ ಒಳಗಾದ ಇತರ ಸಂತ್ರಸ್ತರು ಇದ್ದಾರೆ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ.
ವಂಚನೆಗೆ ಸಿಎಂ, ಡಿಸಿಎಂ ಹೆಸರನ್ನೂ ಬಳಸಿದ್ದ ಆರೋಪಿ
ಆರೋಪಿ ಸಂಜನಾ ಕಾಂಗ್ರೆಸ್ ಕಾರ್ಯಕರ್ತೆ ಎನ್ನುತ್ತಿದ್ದಾರೆ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ತನಗೆ ಪರಿಚಯ ಎಂದು ಹೇಳಿಕೊಂಡು ಇನ್ ಸ್ಪೆಕ್ಟರ್ ಅವರನ್ನು ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ ವಿಚಾರ ಬುಧವಾರ ಬಯಲಾಗಿತ್ತು. ಅಷ್ಟೇ ಅಲ್ಲದೆ, ಮೋಟಮ್ಮ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೊಂದಿಗೆ ಇರುವ ಫೋಟೋಗಳನ್ನೂ ಕಳುಹಿಸಿದ್ದಳು.
ವರದಿ: ವಿಕಾಸ್, ಟಿವಿ9 ಬೆಂಗಳೂರು
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ