ಬಂಧಿಸುವಂತೆ ಪ್ರತಿಭಟನೆ
ಆನೇಕಲ್, ಡಿಸೆಂಬರ್ 19: 150 ಕೋಟಿ ರೂ. ಮೌಲ್ಯದ ಸರ್ಕಾರಿ ಗೋಮಾಳ ಜಮೀನು (ಭೂಮಿ) ದಾಖಲೆಗಳನ್ನು ತಿದ್ದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಅಧಿಕಾರಿ ಮತ್ತು ಅವರ ಜೊತೆ ಶಾಮೀಲಾದ ಭೂಗಳ್ಳರನ್ನು ತಿಂಗಳಾದರೂ ಬಂಧಿಸಿಲ್ಲ ಎಂದು ವಕೀಲರು ಸೇರಿದಂತೆ ಸಾರ್ವಜನಿಕರ ಕಚೇರಿ ಎದುರು ಪ್ರತಿಭಟನೆ (ಪ್ರತಿಭಟನೆ) ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕು ಕಚೇರಿ ಮುಂಭಾಗ ಸಂವಿಧಾನ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಆನೇಕಲ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ ಮತ್ತು ಆನೇಕಲ್ ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕನಸಿನ ಮನೆ ಕನಸು ಕಂಡವರಿಗೆ ಶಾಕ್: ಉಳ್ಳವರಿಗಾಗಿ ಬಡವರ ಹೊಟ್ಟೆ ಮೇಲೆ ಹೊಡೆದ ಸರ್ಕಾರ
ಆನೇಕಲ್ ತಾಲ್ಲೂಕು ಕಛೇರಿ ಅಭಿಲೇಖಾಲಯದಲ್ಲಿ ಸರ್ಕಾರಿ ಗೋಮಾಳದ ದಾಖಲೆಗಳನ್ನು ತಿದ್ದಿದ್ದ ಆನೇಕಲ್ ತಾಲ್ಲೂಕು ಕಚೇರಿಯ 16 ಮಂದಿ ಅಧಿಕಾರಿಗಳ ವಿರುದ್ಧ ನವೆಂಬರ್ 28 ರಂದು ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇಲ್ಲಿಯವರೆಗೆ ಆನೇಕಲ್ ಆರೋಪಿಗಳನ್ನು ಬಂಧಿಸಿಲ್ಲ.
ಎಚ್ಚರಿಕೆ ನೀಡಿದ ಹೋರಾಟಗಾರರು
ಜಿಲ್ಲಾಧಿಕಾರಿಗಳ ಸೂಚನೆಯಂತೆ ಕೇವಲ ಅಧಿಕಾರ ವಿರುದ್ಧ ಮಾತ್ರ ತಹಶೀಲ್ದಾರ್ ಪ್ರಕರಣ ದಾಖಲಿಸಿದ್ದಾರೆ. ಆದರೆ ಕೋಟ್ಯಂತರ ರೂ ಮೌಲ್ಯದ ಸರ್ಕಾರಿ ಜಮೀನು ಕಬಳಿಸಿದ ಭೂಗಳ್ಳರ ವಿರುದ್ಧ ಎಫ್ ಐಆರ್ ದಾಖಲಿಸಿಲ್ಲ. ಆದ್ದರಿಂದ ಕೂಡಲೇ ಭೂಗಳ್ಳರು ಸಹಿತ ಆರೋಪಿತ ಅಧಿಕಾರಿಗಳನ್ನು ಬಂಧಿಸಬೇಕು. ಇಲ್ಲವಾದರೆ ಆನೇಕಲ್ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಹೋರಾಟಗಾರ, ವಕೀಲ ಪುರುಷೋತ್ತಮ್ ಅವರು ಎಚ್ಚರಿಕೆ ನೀಡಿದ್ದಾರೆ.
ತಾಲ್ಲೂಕು ಕಚೇರಿ ಖಾಲಿ ಖಾಲಿ
ಇನ್ನು ಎಫ್ ಐಆರ್ ದಾಖಲಾದ ಬಳಿಕ ತಾಲ್ಲೂಕು ಕಚೇರಿ ಖಾಲಿಯಾಗಿದೆ. ಹೆಚ್ಚಿನ ಅಧಿಕಾರಿಗಳು ಬಂಧನ ಭೀತಿ ಹಿನ್ನಲೆಯಲ್ಲಿ ಪರಾರಿಯಾಗಿದ್ದಾರೆ. ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ಸಾಮಾನ್ಯ ಜನರಿಗೆ ಕಚೇರಿ ಸಮಯದಲ್ಲಿ ಸಿಗುತ್ತಿಲ್ಲ. ಸಂಜೆ ವೇಳೆ ಬಂದು ತಡರಾತ್ರಿಯವರೆಗೆ ದಾಖಲೆಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದು, ತಹಶಿಲ್ದಾರ್ ಕಚೇರಿಯಲ್ಲಿ ಹಣವಂತರ ಕೆಲಸ ಮಾತ್ರ ನಡೆಯುತ್ತಿದೆ. ಜನಸಾಮಾನ್ಯರು ಕಚೇರಿಗೆ ಅಲೆದಾಡುತ್ತಿದ್ದಾರೆ ಎಂದು ಆನೇಕಲ್ ತಹಶಿಲ್ದಾರ್ ವಿರುದ್ಧ ವಕೀಲ ಆನಂದ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮುಡಾ ಕೇಸ್ ವಿಚಾರಣೆ ಮುಂದೂಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ: ಪ್ರತಿವಾದ ಹೇಗಿತ್ತು?
ಒಟ್ಟಿನಲ್ಲಿ ಸರ್ಕಾರಿ ಸ್ವತ್ತುಗಳನ್ನು ರಕ್ಷಣೆ ಮಾಡಬೇಕಿದ್ದ ಸರ್ಕಾರಿ ಅಧಿಕಾರಿಗಳು ಪ್ರಭಾವಿಗಳ ಜೊತೆ ಶಾಮೀಲಾಗಿ ನೂರಾರು ಕೋಟಿ ರೂ ಮೌಲ್ಯದ ಆಸ್ತಿ ಭೂಗಳ್ಳರ ಪಾಲಾಗುತ್ತಿದೆ. ಇನ್ನಾದರೂ ಭೂಗಳ್ಳರ ವಿರುದ್ಧ ಕ್ರಮ ಜರುಗಿಸುತ್ತಾರಾ ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.