ಬೆಂಗಳೂರು : ನಗರದಲ್ಲೆಡೆ ಸಂಚರಿಸಿ ಸಾರ್ವಜನಿಕರಿಗೆ ಉಚಿತ ಕಾನೂನು ನೆರವು ನೀಡುವ ಮತ್ತು ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಎಂ.ಎಸ್. ರಾಮಯ್ಯ ಕಾನೂನು ಕಾಲೇಜು (ಆರ್‌ಇಎಲ್) ಸಹಯೋಗದಲ್ಲಿ ಆರಂಭಿಸಿರುವ ‘ನ್ಯಾಯರಥ-ಸಂಚಾರಿ ಕಾನೂನು ಸೇವಾ ಕ್ಲಿನಿಕ್‌ಗೆ (ವಾಹನ) ಶುಕ್ರವಾರ ಚಾಲನೆ ನೀಡಲಾಯಿತು.

ವಿಭು ಬಖ್ರು ಅವರು ಚಾಲನೆ

ಹೈಕೋರ್ಟ್‌ಆವರಣದಲ್ಲಿ ಆಯೋಜಿಸಲಾಗಿದ್ದ ನ್ಯಾಯರಥ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರು ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.

ನಗರದೆಲ್ಲೆಡೆ ಸಂಚರಿಸಿ ಉಚಿತ ಕಾನೂನು

ನ್ಯಾಯರಥ ವಾಹನವು ನಗರದೆಲ್ಲೆಡೆ ಸಂಚರಿಸಿ ಮಹಿಳೆಯರು, ಮಕ್ಕಳಿಗೆ, ಹಿರಿಯ ನಾಗರಿಕರಿಗೆ, ಬಡ-ದುರ್ಬಲ ವರ್ಗದವರಿಗೆ, ಕಾರ್ಮಿಕರಿಗೆ ಆಸಿಡ್ ದಾಳಿಗೆ ತುತ್ತಾದವರಿಗೆ, ಪ್ರಕೃತಿ ವಿಕೋಪದಿಂದ ಹಾನಿ ಅನುಭವಿಸಿದವರಿಗೆ, ಗುಂಪು-ಗಲಭೆಯ ಸಂತ್ರಸ್ತರಿಗೆ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಉಚಿತ ಕಾನೂನು ಸೇವೆ, ಕಾನೂನು ನೆರವು ಒದಗಿಸುವ ಬಗ್ಗೆ ಅರಿವು ಮೂಡಿಸಲಿದೆ. ಅಲ್ಲದೆ, ವಾಹನದಲ್ಲೇ ವಿಚಾರಣೆ ನಡೆಸಿ ಪ್ರಕರಣವನ್ನು ಇತ್ಯರ್ಥಪಡಿಸಲಾಗುತ್ತದೆ.

ವಿಚಾರಣೆ ಪ್ರಕ್ರಿಯೆ ನಡೆಸಲು ಅನುವಾಗುವಂತೆ ನ್ಯಾಯಾಧೀಶರ, ಕಕ್ಷಿದಾರರ ಮತ್ತು ವಕೀಲರ ಸೀಟಿನ ವ್ಯವಸ್ಥೆ ವಾಹನದಲ್ಲಿದೆ. ಇನ್ನೂ ದೂರ ಪ್ರದೇಶದಲ್ಲಿರುವ ಕಕ್ಷಿದಾರರ ವಾದ-ಅಹವಾಲು ಆಲಿಸಲು ವಿಡಿಯೋ ಕಾನ್ಫರೆನ್ಸ್ ಸೌಲಭ್ಯವಿದೆ.

ನ್ಯಾಯರಥವು ಬೆಂಗಳೂರು ನಗರದಲ್ಲಿ ಕರ್ನಾಟಕ ಕಾನೂನು ಸೇವೆಗಳಿಂದ ಆಯೋಜನೆಯಾಗುವ ಕಾರ್ಯಕ್ರಮದ ಸ್ಥಳಕ್ಕೆ ತೆರಳಿ, ನ್ಯಾಯದಾನ ಪ್ರಕ್ರಿಯೆ ಮಾಹಿತಿ ಪ್ರಸಾರ ಮಾಡಲಿದೆ. ಇತರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಮನವಿ ಮಾಡಿದರೆ, ಆಯಾ ಜಿಲ್ಲೆಗಳಿಗೆ ವಾಹನವನ್ನು ಕಳುಹಿಸಿಕೊಡಲಾಗುತ್ತದೆ. ಈ ಹಿಂದೆ ‘ಕರ್ನಾಟಕ ಸಾಕ್ಷರತಾ ರಥ’ ಎಂಬ ಹೆಸರಿನಲ್ಲಿ ವಾಹನವಿತ್ತು. ಅದನ್ನು ಸ್ಥಗಿತಗೊಳಿಸಲಾಗಿತ್ತು. ಅದರ ಬದಲಿಗೆ ಈಗ ನ್ಯಾಯರಥವನ್ನು ಆರಂಭಿಸಲಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಅನುಶಿವರಾಮನ್, ಗೋಕುಲ ಎಜುಕೇಷನ್ ಫೌಂಡೇಷನ್ ಕಾರ್ಯದರ್ಶಿ ಎಂ.ಆರ್. ಆನಂದ ರಾಮ್, ರಾಮಯ್ಯ ಕಾನೂನು ಕಾಲೇಜು ಪ್ರಾಂಶುಪಾಲ ಪ್ರೊ.ಡಾ. ಉಮಾ ಮಹೇಶ್ ಸತ್ಯನಾರಾಯಣ್, ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Source link
ಬೆಂಗಳೂರು : ನಗರದಲ್ಲಿ ನ್ಯಾಯರಥ-ಸಂಚಾರಿ ಕಾನೂನು ಸೇವಾ ಕ್ಲಿನಿಕ್