ಹುಬ್ಬಳ್ಳಿ, ಡಿಸೆಂಬರ್ 22: ಧಾರವಾಡ (ಧಾರವಾಡ) ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ಅಂತರ್ಜಾತಿ ವಿವಾಹಕ್ಕೆ ಹೆತ್ತ ತಂದೆಯೇ ಮಗಳನ್ನು ಭೀಕರವಾಗಿ ಕೊಲೆ ಮಾಡಿ ಪೈಶಾಚಿಕ ಕೃತ್ಯ ಮೆರೆದಿದ್ದಾನೆ. ಇನಾಂ ವೀರಾಪುರ ಗ್ರಾಮದ ವಿವೇಕಾನಂದ ಮತ್ತು ಅದೇ ಗ್ರಾಮದ ಮಾನ್ಯ ಅನೇಕ ವರ್ಷಗಳ ಕಾಲ ಪ್ರೀತಿಸುತ್ತಿದ್ದರು. ವರೂರು ಖಾಸಗಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದ ಸಮಯದಲ್ಲಿ ವಿವೇಕಾನಂದ ಹುಬ್ಬಳ್ಳಿ ಖಾಸಗಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದರು. ಇಬ್ಬರಿಗೂ ಮೊದಲು ಪರಿಚಯವಿತ್ತು. ಆದರೆ, ಡಿಗ್ರಿ ಓದುವಾಗ ಇನ್ಸ್ಟಾಗ್ರಾಂನಲ್ಲಿ ಮೆಸೆಜ್ ಮಾಡುತ್ತಾ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಇಬ್ಬರು ಪ್ರೀತಿಸುತ್ತಿದ್ದ ವಿಚಾರ ಎರಡು ಮನೆಯವರಿಗೆ ಗೊತ್ತಾಗಿತ್ತು. ಯುವತಿ ಲಿಂಗಾಯತ ಸಮಾಜದವಳಾಗಿದ್ದರೆ ವಿವೇಕಾನಂದ ದಲಿತ ಸಮುದಾಯಕ್ಕೆ ಸೇರಿದ್ದ. ಹೀಗಾಗಿ ಯುವತಿ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಯುವತಿ ಯಾವುದೇ ಕಾರಣಕ್ಕೂ ವಿವೇಕಾನಂದ ಬಿಟ್ಟು ಬಡಕೋದಿಲ್ಲಾ ಎಂದು ಹಠ ಹಿಡಿದಿದ್ದಳು.
ಧಾರವಾಡದಲ್ಲಿ ಕೋಚಿಂಗ್‌ಗೆ ಹೋಗಿದ್ದ ವಿವೇಕಾನಂದ ಹೋಗಿ, ಮದುವೆಯಾಗದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಹೀಗಾಗಿ ವಿವೇಕಾನಂದ ಆಕೆ ಜೊತೆ ಕಳೆದ ಜೂನ್ 19 ರಂದು ಹುಬ್ಬಳ್ಳಿಯಲ್ಲಿ ರಿಜಿಸ್ಟರ್ ವಿವಾಹವಾಗಿದ್ದರು.
ಎರಡು ಕುಟುಂಬಗಳ ನಡುವೆ ರಾಜಿ ಸಂಧಾನ ಮಾಡಿದ್ದಾರೆ
ರಿಜಿಸ್ಟರ್ ವಿವಾಹದ ನಂತರ ಎರಡೂ ಕುಟುಂಬಗಳನ್ನು ಕರೆದು ರಾಜಿ ಪಂಚಾಯತಿ ಮಾಡಿದ್ದರು. ಆ ಬಳಿಕ ಮಾನ್ಯಾ ಮತ್ತು ವಿವೇಕಾನಂದರು ಬಿಟ್ಟು ಹೋಗಿ ಹಾವೇರಿಯಲ್ಲಿ ವಾಸವಾಗಿದ್ದರು. ಈ ನಡುವೆ ಮಾನ್ಯಾ ಗರ್ಭಿಣಿಯಾಗಿದ್ದಾಳೆ. 7 ತಿಂಗಳ ಬಳಿಕ ಎಲ್ಲ ಸರಿಹೋಗಬಹುದೆಂದು ಡಿಸೆಂಬರ್ 8 ರಂದು ಇಬ್ಬರೂ ಸ್ವಗ್ರಾಮಕ್ಕೆ ವಾಪಸ್ ಆಗಿದ್ದಾರೆ. ಆದರೆ, ಮತ್ತೆ ಕಿರಿಕ್ ಶುರುವಾಗಿ ಗ್ರಾಮೀಣ ಠಾಣೆ ಪೊಲೀಸರು ಎರಡು ಕಡೆಯವರನ್ನೂ ಕರೆಸಿ ರಾಜಿ ಸಂದಾನ ಮಾಡಿದ್ದಾರೆ. ಆದರೆ ಇದೇ ಎರಡೇ ವಾರಕ್ಕೆ ನಡೆಯಬಾರದೆ ನಡೆದುಹೋಗಿದೆ.
ಮನೆಗೆ ನುಗ್ಗಿ ಹಲ್ಲೆ ಮಾಡಿದ ತಂದೆ, ಕುಟುಂಬದವರು
ಭಾನುವಾರ ಸಂಜೆ ಮತ್ತೆ ವಿವೇಕಾನಂದ ಮನೆ ಮೇಲೆ ದಾಳಿ ಮಾಡಿದ ಮಾನ್ಯ ತಂದೆ ಪ್ರಕಾಶಗೌಡ ಪಾಟೀಲ್ ಮತ್ತು ಸಂಬಂಧಿಗಳು ಮಾನ್ಯ ಮತ್ತು ಮನೆಯಲ್ಲಿದ್ದ ಆಕೆಯ ಜೊತೆಗೆ ಮೂವರ ಮೇಲೆ ಹಲ್ಲೆ ಮಾಡಿದ್ದಾರೆ. ಮಾನ್ಯಳಿಗೆ ಪೈಪ್ ಮತ್ತು ಗುದ್ದಲಿಯಿಂದ ಪ್ರಕಾಶಗೌಡ ಹಲ್ಲೆ ಮಾಡಿದ್ದಾನೆ. ನಂತರ ಮಾನ್ಯಾಳನ್ನು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಾನ್ಯಾ ಇಹಲೋಕ ತ್ಯಜಿಸಿದ್ದಾಳೆ. ಇತ್ತ ಮಾನ್ಯಾಳ ಅತ್ತೆ, ಮಾವ ಸೇರಿ ಮೂವರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮಾಹಿತಿ ತಿಳಿಯಿರಿ ಧಾರವಾಡ ಎಸ್ ಪಿ ಗುಂಜನ್ ಆರ್ಯ, ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ.
ಇದನ್ನೂ ಓದಿ: ಸಹಾಯ ಮಾಡೋ ನೆಪದಲ್ಲಿ ಮಂಚಕ್ಕೆ ಕರೆದ, ಮಹಿಳೆಯ ಜೀವಕ್ಕೆ ಕುತ್ತು ತಂದ ಸೋಶಿಯಲ್ ಮೀಡಿಯಾ ಫ್ರೆಂಡ್
ಸದ್ಯ ಮಾನ್ಯ ಕೊಲೆಗೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಾನ್ಯ ತಂದೆ ಪ್ರಕಾಶಗೌಡ ಪಾಟೀಲ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಆದರೆ ಪ್ರೀತಿಸಿ ಮದುವೆಯಾಗಿ ತನ್ನ ಪಾಡಿಗೆ ತಾನು ಜೀವನ ಕಟ್ಟಿಕೊಂಡ ಮಗಳನ್ನು ತನ್ನ ತಂದೆಯೇ ಮರ್ಯಾದಾ ಹತ್ಯೆ ಮಾಡಿದ್ದು ಮಾತ್ರ ದುರ್ದೈವದ ಸಂಗತಿಯಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ