ಚಾಮರಾಜನಗರದಲ್ಲಿ 5 ಹುಲಿಗಳು ಪ್ರತ್ಯಕ್ಷ: ನಿಷೇಧಾಜ್ಞೆ ಜಾರಿ, ಹೊರಬರದಂತೆ ಸೂಚನೆ

ಚಾಮರಾಜನಗರದಲ್ಲಿ 5 ಹುಲಿಗಳು ಪ್ರತ್ಯಕ್ಷ: ನಿಷೇಧಾಜ್ಞೆ ಜಾರಿ, ಹೊರಬರದಂತೆ ಸೂಚನೆ


ಚಾಮರಾಜನಗರ, ಡಿಸೆಂಬರ್ 22: ಕಾಡಿನಲ್ಲಿರಬೇಕಿದ್ದ ಹುಲಿಗಳು (ಹುಲಿ) ನಾಡಿಗೆ ನುಗ್ಗಿವೆ. ಚಾಮರಾಜನಗರ (ಚಾಮರಾಜನಗರ) ತಾಲ್ಲೂಕಿನ ನಂಜೆದೇವಪುರ ಗ್ರಾಮದ ಬಳಿ ಬರೋಬ್ಬರಿ ಐದು ಹುಲಿಗಳು ಒಟ್ಟಾಗಿ ಪ್ರತ್ಯಕ್ಷವಾಗಿದ್ದು, ಸದ್ಯ ಜನರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ನಂಜೆದೇವಪುರ ಸೇರಿ ಮೂರು ಗ್ರಾಮಗಳಲ್ಲಿ ಇಂದಿನಿಂದ ನಾಳೆ ಸಂಜೆ 6ರವರೆಗೆ 144 ಸೆಕ್ಷನ್ ಜಾರಿ ಮಾಡಿ ಚಾಮರಾಜನಗರ ತಹಶೀಲ್ದಾರ್ ಗಿರಿಜಾ ಆದೇಶ ಹೊರಡಿಸಿದ್ದಾರೆ.

ನಿಷೇಧಾಜ್ಞೆ ಜಾರಿ

5 ಹುಲಿಗಳಿರುವ ಜಾಗದ ಲೊಕೇಷನ್ ಅನ್ನು ಅರಣ್ಯ ಸಿಬ್ಬಂದಿ ಟ್ರ್ಯಾಕ್ ಮಾಡಿದ್ದಾರೆ. ಆದರೆ ಚಾಮರಾಜನಗರ ಜಿಲ್ಲೆಯಲ್ಲಿ ಇರುವುದು ಕೇವಲ ಇಬ್ಬರೇ ಪಶು ವೈದ್ಯರು ಮಾತ್ರ. ಹೀಗಾಗಿ ಹುಲಿಗಳನ್ನು ಹಿಡಿಯಲು ಕಷ್ಟಸಾಧ್ಯ ಎನ್ನುತ್ತಿದ್ದಾರೆ ಅರಣ್ಯ ಸಿಬ್ಬಂದಿ. ಸದ್ಯ ಹುಲಿಗಳ ಸೆರೆ ಕಾರ್ಯಾಚರಣೆ ಹಿನ್ನೆಲೆ ನಂಜೆದೇವನಪುರ, ವೀರನಪುರ, ಉಡಿಗಾಲ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆ ಮೂಲಕ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದೆ, ಯಾರೂ ಗುಂಪು ಮಾಡಬಾರದು, ಮನೆಯಿಂದ ಹೊರಬರದಂತೆ ತಿಳಿಸಲಾಗಿದೆ, ಮೂರು ಗ್ರಾಮಗಳ ಜನರು ಸಹಕರಿಸುವಂತೆ ತಹಶೀಲ್ದಾರ್ ಗಿರಿಜಾ ಮನವಿ ಮಾಡಿದ್ದಾರೆ.

ಸ್ಥಳದಲ್ಲೇ ಬೀಡುಬಿಟ್ಟ ಶಾಸಕ ಪುಟ್ಟರಂಗಶೆಟ್ಟಿ

ಇನ್ನು ಸ್ಥಳೀಯ ಶಾಸಕ ಪುಟ್ಟರಂಗಶೆಟ್ಟಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯರಿಂದ ಶಾಸಕ ಪುಟ್ಟರಂಗಶೆಟ್ಟಿಗೆ ಅಭಯ ನೀಡಿದ್ದು, ಹೆಚ್ಚಿನ ಆನೆ ಹಾಗೂ ನುರಿತ ಪಶು ವೈದ್ಯರನ್ನು ಕಳಿಸುವ ಆಶ್ವಾಸನೆ ನೀಡಿದ್ದಾರೆ. ನುರಿತ ಪಶು ವೈದ್ಯರ ಕೊರತೆ ಇರುವುದನ್ನು ಶಾಸಕ ಪುಟ್ಟರಂಗಶೆಟ್ಟಿ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ಹುಲಿ ಕಾಟದಿಂದ ಸದ್ಯಕ್ಕಿಲ್ಲ ಮುಕ್ತಿ; ವ್ಯಾಘ್ರಗಳನ್ನು ಹಿಡಿಯಲಾಗದೆ ತಲೆ ಮೇಲೆ ಕೈ ಹೊತ್ತು ಕುಳಿತ ಅರಣ್ಯ ಇಲಾಖೆ

ಸದ್ಯ ಶಾಸಕ ಪುಟ್ಟರಂಗಶೆಟ್ಟಿ ಖುದ್ದು ಅರಣ್ಯ ಸಿಬ್ಬಂದಿ ಜೊತೆ ಪರಿಶೀಲನೆ ಕಾರ್ಯ. ಅರಣ್ಯ ಸಿಬ್ಬಂದಿಯ ಪರಿಶೀಲನೆ ವೇಳೆ ಡ್ರೋನ್ ಕ್ಯಾಮೆರಾದಲ್ಲಿ ಕಲ್ಲು ಕ್ವಾರಿಯ ಜಾಗದಲ್ಲಿ ತಾಯಿ ಹುಲಿ ಹಾಗೂ ಮರಿಹುಲಿಗಳ ಪಗ್ ಮಾರ್ಕ್ ಪತ್ತೆ ಆಗಿದೆ. ಇದೇ ಕಲ್ಲು ಕ್ವಾರಿಯಲ್ಲಿ 5 ಹುಲಿಗಳು ಬೀಡು ಬಿಟ್ಟಿವೆ.

ಕೂಂಬಿಂಗ್ ಚಾಲನೆ

ಇನ್ನು ದುಬಾರೆ ಆನೆ ಶಿಬಿರದಿಂದ ಈಶ್ವರ ಹಾಗೂ ಲಕ್ಷ್ಮಣ ಆನೆಗಳಿಗೆ ಆಗಮಿಸಿದ್ದು, ಕೂಂಬಿಂಗ್ ಕಾರ್ಯಚರಣೆಗೆ ಚಾಲನೆ ನೀಡಲಾಗಿದೆ. ನಂಜೆದೇವಪುರ ಗ್ರಾಮಸ್ಥರು ಗಜಪಡೆಗೆ ಪೂಜೆ ಸಲ್ಲಿಸಿ ಸ್ವಾಗತಿಸಿದರು. ಈಶ್ವರನ ಮಾವುತರಾಗಿ ವಿಶ್ವನಾಥ್ ಹಾಗೂ ಮಂಜುನಾಥ್, ಲಕ್ಷ್ಮಣನ ಮಾವುತರಾಗಿ ಸಂಜು ಹಾಗೂ ಸುರೇಶ ಆಗಮಿಸಿದ್ದಾರೆ. ಲಕ್ಷ್ಮಣನಿಗೆ 45 ವರ್ಷಗಳಾಗಿದ್ದು, 50ಕ್ಕೂ ಹೆಚ್ಚು ಕೂಂಬಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *