
ಆನ್ಲೈನ್ ಬೆಟ್ಟಿಂಗ್ ಆಪ್‌ನಲ್ಲಿ ಹಣ ಹೂಡಿಕೆ ಮಾಡಿ ಬರೋಬ್ಬರಿ ಒಂದು ಲಕ್ಷ ರೂಪಾಯಿಯನ್ನು ಕಳೆದುಕೊಂಡ ವಿದ್ಯಾರ್ಥಿಯೋರ್ವ ಸಾವಿಗೆ ಶರಣಾದ ದುರಂತ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಮೃತ ಯುವಕನನ್ನು 18 ವರ್ಷದ ವಿಕ್ರಮ್ ಎಂದು ಗುರುತಿಸಲಾಗಿದೆ.
ಹೈದರಾಬಾದ್: ಆನ್‌ಲೈನ್ ಬೆಟ್ಟಿಂಗ್ ಆಪ್‌ನಲ್ಲಿ ಹಣ ಹೂಡಿಕೆ ಮಾಡಿ ಬರೋಬ್ಬರಿ ಒಂದು ಲಕ್ಷ ರೂಪಾಯಿಯನ್ನು ಕಳೆದುಕೊಂಡ ವಿದ್ಯಾರ್ಥಿಯೋರ್ವ ಸಾವಿಗೆ ಶರಣಾದ ದುರಂತ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಮೃತ ಯುವಕನನ್ನು 18 ವರ್ಷದ ವಿಕ್ರಮ್ ಎಂದು ಗುರುತಿಸಲಾಗಿದೆ. ವಿಕ್ರಂ ಸಂಗಾರೆಡ್ಡಿ ಜಿಲ್ಲೆಯ ಕಂದುಕೂರ್ ಪ್ರದೇಶದ ನಿವಾಸಿಯಾಗಿದ್ದ. ಕೀಟನಾಶಕ ಸೇವಿಸಿ ವಿಕ್ರಂ ಆತ್ಮ*ಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಕೂಡಲೇ ಗಮನಿಸಿದ ವಿಕ್ರಂನ ಕುಟುಂಬದವರು ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹರೆಯದ ವಯಸ್ಸಿನ ಮಗಳ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಸಂಗಾರೆಡ್ಡಿ ಜಿಲ್ಲೆಯಲ್ಲಿ ಒಂದು ವಾರದಲ್ಲಿ ನಡೆದ 2ನೇ ಆನ್‌ಲೈನ್ ಬೆಟ್ಟಿಂಗ್ ಸಂಬಂಧಿ ಸಾವು ಪ್ರಕರಣ ಇದಾಗಿದೆ. ವಾರದ ಹಿಂದೆ ಟಾಕ್ಸಿ ಚಾಲಕನೋರ್ವ ಸಾವಿಗೆ ಶರಣಾಗಿದ್ದ. ಈತನೂ ಆನ್‌ಲೈನ್ ಬೆಟ್ಟಿಂಗ್ ಆಪ್‌ನಲ್ಲಿ ಸಾಕಷ್ಟು ಹಣ ಹೂಡಿಕೆ ಮಾಡಿದ್ದ, ಇದರಿಂದ ಈತ ಊರು ತುಂಬಾ ಸಾಲ ಮಾಡಿಕೊಂಡಿದ್ದ. ಯಾದಗಿರಿ-ಭುವನಗಿರಿ ಜಿಲ್ಲೆಯ ನಿವಾಸಿಯಾದ 24 ವರ್ಷದ ಪಾಲುಡುಗು ಸಾಯಿ ಸಾವಿಗೆ ಶರಣಾದ ಟಾಕ್ಸಿ ಚಾಲಕ. ಕಳೆದೆರಡು ವರ್ಷಗಳಿಂದ ಈತ ಆನ್‌ಲೈನ್ ಬೆಟ್ಟಿಂಗ್‌ಗೆ ದಾಸನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆನ್‌ಲೈನ್ ಬೆಟ್ಟಿಂಗ್ ಗೀಳು ಬೆಳೆಸಿಕೊಂಡಿದ್ದ ಸಾಯಿ ಬೆಟ್ಟಿಂಗ್ ಆಡುವುದನ್ನು ಮುಂದುವರಿಸುವುದಕ್ಕೆ ಸ್ನೇಹಿತರು ಹಾಗೂ ಸಂಬಂಧಿಕರ ಬಳಿ ಸಾಕಷ್ಟು ಸಾಲ ಮಾಡಿದ್ದ. ಇದರ ಜೊತೆಗೆ ಆತ ಹಲವು ಬ್ಯಾಂಕ್‌ಗಳಲ್ಲಿ ವೈಯಕ್ತಿಕ ಸಾಲವನ್ನು ಮಾಡಿದ್ದ ಆತನ ಸಾವಿನ ವೇಳೆ ಸಾಯಿ 15 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ಸಾಲ ನೀಡಿದವರು ಸಾಲ ವಾಪಸ್ ಮಾಡುವಂತೆ ಕೇಳುತ್ತಿದ್ದಿದ್ದರಿಂದ ಭಯ ಹಾಗೂ ಆತಂಕಗೊಂಡ ಸಾಯಿ ಕೀಟ ನಾಶಕ ಸೇವಿಸಿ ಸಾವಿಗೆ ಶರಣಾಗಿದ್ದಾನೆ. ಕೂಡಲೇ ಸಾಯಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು ಅವರು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಶಿಶು ಮಾರಾಟ ಜಾಲ ಬೇಧಿಸಿದ ಪೊಲೀಸರು: ಒಂದು ಮಗುವಿಗೆ 15 ಲಕ್ಷ: ಆಸ್ಪತ್ರೆಗಳ ಜೊತೆ ಖದೀಮರ ಸಂಪರ್ಕ
ಹಾಗೆಯೇ ಮಧ್ಯಪ್ರದೇಶದಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಸಿವಿಲ್ ಕಂಟ್ರಾಕ್ಟರ್‌ವೊಬ್ಬರು ಆನ್‌ಲೈನ್ ಗೇಮ್ ಆಡಿ 30 ಲಕ್ಷ ರೂಪಾಯಿ ಕಳೆದುಕೊಂಡ ನಂತರ ಸಾವಿಗೆ ಶರಣಾಗಿದ್ದಾರೆ. 32 ವರ್ಷ ಪ್ರಾಯದ ಅವರು ಇಷ್ಟೊಂದು ಹಣ ಆನ್‌ಲೈನ್ ಗೇಮ್ ಆಡಿ ಕಳೆದುಕೊಂಡ ನಂತರ ಭೋಪಾಲ್‌ನ ತಮ್ಮ ಮನೆಯಲ್ಲಿ ಸಾವಿಗೆ ಶರಣಾಗಿದ್ದಾರೆ. ಆನ್‌ಲೈನ್‌ನಲ್ಲಿ ಏವಿಯೇಟರ್ ಹೆಸರಿನ ಗೇಮ್ ಆಡುವುದಕ್ಕಾಗಿ ಅವರು ಅನೇಕರಿಂದ ಸಾಲ ಪಡೆದಿದ್ದಾಗಿ ಅವರು ಸಾವಿಗೂ ಮೊದಲು ಬರೆದ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ನಾಯಿ ಕಡಿತಕ್ಕೆ ಚಿಕಿತ್ಸೆ ಪಡೆದರೂ ಒಂದು ತಿಂಗಳ ನಂತರ ಬಾಲಕಿ ಸಾವು
ಎಲ್ಲದಕ್ಕೂ ಸಾವು ಪರಿಹಾರವಲ್ಲ, ಆದರೆ ಇಂತಹ ಆನ್‌ಲೈನ್ ಗೇಮ್‌ನಲ್ಲಿ ಸುಲಭವಾಗಿ ಹಣ ಮಾಡುವ ಹುಚ್ಚಿಗೆ ಬಿದ್ದು, ಯುವ ತರುಣರು ತಮ್ಮ ಪ್ರಾಣವನ್ನೇ ಬಲಿ ಕೊಡುತ್ತಿರುವುದು ಆಘಾತಕಾರಿಯಾಗಿದ್ದು, ಈ ಆನ್‌ಲೈನ್ ಗೇಮ್‌ಗಳ ಬಗ್ಗೆ ಯುವ ಸಮೂಹ ಜಾಗೃತರಾಗಬೇಕಿದೆ.