ಕನ್ನಡ ನಟ ಪದ್ಮಭೂಷಣ ಅನಂತ್ ನಾಗ್ ಅವರ ಮಗಳು, ಅಳಿಯ ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಳ್ಳೋದಿಲ್ಲ. ಈಗ ತಂದೆ ಬಗ್ಗೆ ಮಗಳು ಅದಿತಿ, ಮಾವನ ಬಗ್ಗೆ ವಿವೇಕ್ ಶೆಟ್ಟಿ ಮಾತನಾಡಿದ್ದಾರೆ.
ನಾಡು ಕಂಡಂತಹ ಅದ್ಭುತ ನಟ ಅನಂತ್ ನಾಗ್. ಇವರ ಪತ್ನಿ ಗಾಯಿತ್ರಿ ಕೂಡ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಅನಂತ್ ನಾಗ್ ಹಾಗೂ ಗಾಯಿತ್ರಿಯ ಮಗಳು ಅದಿತಿ ಮಾತ್ರ ಸಾರ್ವಜನಿಕವಾಗಿ ಅಷ್ಟು ಕಾಣಿಸಿಕೊಳ್ಳೋದಿಲ್ಲ, ಸಿನಿಮಾದಲ್ಲಿಯೂ ನಟಿಸಿಲ್ಲ. Asianet Suvarna News ಆಯೋಜಿಸಿದ್ದ ʼಅನಂತ ಪದ್ಮʼ ಎನ್ನುವ ವಿಶೇಷ ಕಾರ್ಯಕ್ರಮದಲ್ಲಿ ನಟ ಅನಂತ್ ನಾಗ್ ಅವರು ಪತ್ನಿ ಗಾಯಿತ್ರಿ ಜೊತೆಗೆ ಭಾಗಿಯಾಗಿದ್ದರು. ಆ ವೇಳೆ ಅವರ ಬಗ್ಗೆ ಮಗಳು ಅದಿತಿ, ಅಳಿಯ ವಿವೇಕ್ ಶೆಟ್ಟಿ ಮಾತನಾಡಿದ್ದಾರೆ.
ಮಗಳು ಅದಿತಿ ನಾಗ್ ಏನು ಹೇಳ್ತಾರೆ?
ನಾನು ಬೆಳೆಯೋ ಟೈಮ್‌ನಲ್ಲಿ ನನ್ನ ತಂದೆ ತುಂಬ ಬ್ಯುಸಿ ಇರುತ್ತಿದ್ದರು. ಸಿಕ್ಕಾಪಟ್ಟೆ ಟ್ರಾವೆಲ್ ಮಾಡುತ್ತಿದ್ದರು. ಆದರೆ ನನಗೆ ನಾರ್ಮಲ್ ಎನಿಸುವ ಥರ ಇರುತ್ತಿದ್ದರು. ಎಷ್ಟೇ ಖ್ಯಾತ ನಟರಾದರೂ ಕೂಡ ನನಗೆ ಅವರು ತಂದೆಯೇ. ನಾನು ಅವರಿಂದ ತುಂಬ ವಿಷಯಗಳನ್ನು ಕಲಿತಿದ್ದೆ. ಏನೇ ಮಾಡಿದರೂ ಕೂಡ ಅವರು 100% ಶ್ರಮ ಹಾಕುತ್ತಿದ್ದರು. ನನಗೆ ರಾಮಾಯಣ, ಮಹಾಭಾರತ ಎಂದು ಅಪ್ಪ ರಾತ್ರಿ ಕಥೆ ಹೇಳುತ್ತಿದ್ದರು. ಅಷ್ಟೇ ಅಲ್ಲದೆ ಕೊಂಕಣಿ ಸಂಸ್ಕೃತಿ ಬಗ್ಗೆ ಹೇಳುತ್ತಿದ್ದರು. ಸ್ವತಂತ್ರ ಮಹಿಳೆಯಾಗಿ ಬೆಳೆಯಲು ಅವರು ತುಂಬ ಬೆಂಬಲ ಕೊಟ್ಟಿದ್ದಾರೆ. ನನ್ನ ತಂದೆ ಅಷ್ಟಾಗಿ ಸಿನಿಮಾ ನೋಡುತ್ತಿರಲಿಲ್ಲ, ನಾನು ಇಲ್ಲೇ ಇದ್ದೀನಿ, ನೀನು ಯಾಕೆ ಥಿಯೇಟರ್‌ಗೆ ಹೋಗ್ತೀಯಾ ಅಂತ ಹೇಳಿ ನನಗೆ ನನ್ನ ಪ್ರಪಂಚವನ್ನು ತುಂಬ ನಾರ್ಮಲ್ ಆಗಿಡುತ್ತಿದ್ದರು. ಅಪ್ಪನ ಪಾತ್ರ ತೀರಿಹೋಗುವ ಸಿನಿಮಾ ನೋಡಿದರೆ ನಾನು ಬೇಸರ ಮಾಡಿಕೊಳ್ತೀನಿ ಅಂತ ನನ್ನನ್ನು ಕೇವಲ ಹ್ಯಾಪಿ ಸಿನಿಮಾ ನೋಡಲು ಮಾತ್ರ ಕರೆದುಕೊಂಡು ಹೋಗುತ್ತಿದ್ದರು.
ಅಳಿಯ ವಿವೇಕ್ ಶೆಟ್ಟಿ ಏನಂದ್ರು?
ನಾನು ಮೊದಲೇ ಅನಂತ್ ನಾಗ್ ಅವರ ಅಭಿಮಾನಿ. ನಾನು ಅನಂತ್ ನಾಗ್ ಮಗಳು ಅಂತ ಪ್ರೀತಿಸದೆ, ಅದಿತಿ ಎಂದು ಪ್ರೀತಿಸಿದೆ. ನಾವು ಪ್ರೀತಿ ಮಾಡಿ ಮದುವೆ ವಿಷಯ ಬಂದಾಗ ಅನಂತ್ ನಾಗ್ ಅವರನ್ನು ಭೇಟಿ ಮಾಡಬೇಕಿತ್ತು. ಸೆಲೆಬ್ರಿಟಿಯನ್ನು ಹೇಗೆ ಮಾತನಾಡಿಸೋದು ಅಂತ ಭಯ ಇತ್ತು. ಆದರೆ ಅನಂತ್ ನಾಗ್ ಅವರು ತುಂಬ ಸರಳವಾಗಿ, ಆರಾಮಾಗಿ ಮಾತನಾಡಿ ನಮ್ಮ ಪ್ರೀತಿ ಬಗ್ಗೆ ತಿಳಿದುಕೊಂಡರು. ಅನಂತ್ ನಾಗ್ ನಿಜಕ್ಕೂ ನಡೆದುಕೊಡುವ ಜ್ಞಾನಕೋಶ. ನಾನು ಅವರ ಜೊತೆ ಎಲ್ಲ ವಿಷಯಗಳನ್ನು ಕೂಡ ಮಾತನಾಡಬಲ್ಲೆ. ನಾನು ಹಾಗೂ ಅದಿತಿ ಮದುವೆಯಾಗಿ ಹದಿಮೂರು ವರ್ಷವಾಗಿದೆ. ಮನೆಯಲ್ಲಿ ಏನೇ ಕಾರ್ಯಕ್ರಮಗಳೇ ಇದ್ದರೂ ಕೂಡ ಅವರು ಭಾಗಿಯಾಗುತ್ತಾರೆ, ಅವರು ಬಂದಾಗ ತುಂಬ ಜನ ಸೇರುತ್ತಾರೆ ಅಂತ ನಾವೇ ಅವರನ್ನು ಅವಾಯ್ಡ್ ಮಾಡ್ತೀವಿ. ಕಂಪೆನಿಯೊಂದರಲ್ಲಿ ಕೆಲಸ ಮಾಡುವಾಗ ಅದಿತಿ ಪರಿಚಯ ಆಯ್ತು. ಅನಂತ್ ನಾಗ್ ಮಗಳು ಹೇಗಿರಬಹುದು ಎಂಬ ಕುತೂಹಲ ಇತ್ತು. ಅಪ್ಪನ ಥರ ಮಗಳು ಕೂಡ ಸಿಂಪಲ್. ಅದಿತಿ, ನನ್ನ ಸ್ನೇಹ, ಪ್ರೀತಿಯಾಗಿ ಈಗ ವೈವಾಹಿಕ ಜೀವನ ನಡೆಸುತ್ತಿದ್ದೇವೆ.
ನಟ, ರಾಜಕಾರಣಿ ಅನಂತ್ ನಾಗ್!
2025ರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ್ ಅನಂತ್ ನಾಗ್ ಅವರು ದೇಶದ ಅತ್ಯುನ್ನತ ಗೌರವವಾದ ʼಪದ್ಮಭೂಷಣʼ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ. ಇವರ ನಟನೆಗೆ ಈಗಾಗಲೇ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಬಂದಿವೆ. 300 ಕ್ಕೂ ಅಧಿಕ ಸಿನಿಮಾಳಲ್ಲಿ ನಟಿಸಿರುವ ಅನಂತ್ ನಾಗ್ ಅವರು ನಟ, ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ.