ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂಬುದಷ್ಟೇ ಅಭಿಲಾಷೆ ಅಲ್ಲ. ಪಕ್ಷ ಉಳಿಯುವುದರ ಜೊತೆಗೆ 2028ರಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ದೂರದೃಷ್ಟಿ ಇಟ್ಟುಕೊಂಡು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದೇವೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ರಾಮನಗರ (ಜು.04): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂಬುದಷ್ಟೇ ಅಭಿಲಾಷೆ ಅಲ್ಲ. ಪಕ್ಷ ಉಳಿಯುವುದರ ಜೊತೆಗೆ 2028ರಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ದೂರದೃಷ್ಟಿ ಇಟ್ಟುಕೊಂಡು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದೇವೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ನಾವು ನಮಗೆ ಬೇಕಾದ ಅಭಿಪ್ರಾಯ, ವಸ್ತುಸ್ಥಿತಿ, ಮುಂದೆ ಏನಾಗಬೇಕು, ನಾವು ಏತಕ್ಕಾಗಿ ಹೋರಾಟ ಮಾಡುತ್ತಿದ್ದೇವೆ ಎಂಬುದನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ.
ಬೇರೆಯವರ ಅಭಿಪ್ರಾಯಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. ಡಿ.ಕೆ.ಶಿವಕುಮಾರ್ ತೊಟ್ಟಿಲು ತೂಗಿ ಮಗು ಚಿವುಟುವ ಕೆಲಸ ಮಾಡುತ್ತಿದ್ದಾರೆಂದು ಬಿಜೆಪಿ ನಾಯಕರು ಟೀಕಿಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಇಕ್ಬಾಲ್ ಪ್ರತಿಕ್ರಿಯಿಸಿ, ಅವರು ಏನು ಬೇಕಾದರೂ ಹೇಳಿಕೊಳ್ಳಬಹುದು. ನಮಗೆ ಇದು ರೈಟ್ ಟೈಮ್ ಅಂತ ಹೇಳಿದ್ದೇವೆ, ಕಾಲ ಕೂಡಿ ಬಂದಿದೆ ಹೇಳುತ್ತಿದ್ದೇವೆ ಎಂದು ಉತ್ತರಿಸಿದರು.
140 ಶಾಸಕರ ಬೆಂಬಲ: ಕಾಂಗ್ರೆಸ್ಸಿನ 140 ಶಾಸಕರ ಪೈಕಿ ಸಾಕಷ್ಟು ಶಾಸಕರ ಬೆಂಬಲ ಡಿ.ಕೆ.ಶಿವಕುಮಾರ್ ಅವರಿಗೆ ಇದೆ. ಹೀಗಾಗಿ ಅವರಿಗೆ ಮುಂದಿನ ಎರಡೂವರೆ ವರ್ಷ ಮುಖ್ಯಮಂತ್ರಿ ಹುದ್ದೆಯನ್ನು ಸಿದ್ದರಾಮಯ್ಯ ಅವರು ಬಿಟ್ಟು ಕೊಡಬೇಕು ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ. ನಾಯಕತ್ವ ಬದಲಾವಣೆ ಬಗ್ಗೆ ಕೆಪಿಸಿಸಿ ಬಹಿರಂಗ ಹೇಳಿಕೆ ನೀಡಬಾರದು ಎಂದು ಸತತ ಎಚ್ಚರಿಕೆ ನೀಡಿದ ನಂತರವೂ ಇಕ್ಬಾಲ್ ಹುಸೇನ್ ಮಂಗಳವಾರ ಮತ್ತೊಮ್ಮೆ ಡಿಸಿಎಂ ಪರ ಬ್ಯಾಟ್ ಬೀಸಿದ್ದಾರೆ.
ಸಿದ್ದರಾಮಯ್ಯ ಅವರು ಈ ಹಿಂದೆ 5 ವರ್ಷ ಮುಖ್ಯಮಂತ್ರಿಗಳಾಗಿದ್ದರು. ಈಗ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ಮುಂದಿನ ಎರಡೂವರೆ ವರ್ಷ ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟುಕೊಡಲಿ. ಡಿ.ಕೆ.ಶಿವಕುಮಾರ್ ಅವರಿಗೆ ಸಾಕಷ್ಟು ಶಾಸಕರು, ಹೈಕಮಾಂಡ್ ಬೆಂಬಲವಿದೆ ಎಂದು ಹೇಳಿದರು. ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ನಾನು ಈ ಹಿಂದೆ ನೀಡಿದ್ದ ಹೇಳಿಕೆಗೆ ಬದ್ಧನಾಗಿದ್ದೇನೆ. ನಮಗೆಲ್ಲ ಬದಲಾವಣೆ ಬೇಕಿದೆ. 2028ರಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಸುಲಭವಾಗಿ ಅಧಿಕಾರಕ್ಕೆ ಬರಬೇಕಾದರೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು. ಪಕ್ಷ ಸಂಘಟನೆಯಲ್ಲಿ ಅವರ ಪಾತ್ರ ದೊಡ್ಡದಿದೆ. 140 ಶಾಸಕರು ಗೆಲ್ಲಲು ಅವರ ಶ್ರಮವಿದೆ ಎಂದರು.
ರಾಜ್ಯ ನಾಯಕತ್ವ ಮಾಧ್ಯಮಗಳ ಎದುರು ಮಾತನಾಡಬಾರದು ಎಂದು ಹೇಳಿದೆ. ಆದರೆ, ಡಿ.ಕೆ.ಶಿವಕುಮಾರ್ ಅವರು ನಮ್ಮ ಜಿಲ್ಲೆಯವರು. ಮೇಕೆದಾಟು ಪಾದಯಾತ್ರೆ, ಭಾರತ್ ಜೋಡೋ ಯಾತ್ರೆಯ ಮುಂಚೂಣಿಯಲ್ಲಿದ್ದರು. ಕೊರೋನಾ ಸಮಯದಲ್ಲಿ ಜನರನ್ನು ರಕ್ಷಿಸಲು ಸಾಕಷ್ಟು ಹೋರಾಟ ಮಾಡಿದರು. ಹೀಗಾಗಿ ಅವರು ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದರು.