ಬೆಂಗಳೂರಿನಲ್ಲಿ ಜೆಪ್ಟೋ ಡೆಲಿವರಿ ಏಜೆಂಟ್ ಒಬ್ಬ ಗ್ರಾಹಕನ ಮೇಲೆ ಹಲ್ಲೆ ನಡೆಸಿದ್ದಾನೆ. ತಪ್ಪಾದ ವಿಳಾಸ ನೀಡಿದ್ದಕ್ಕೆ ಗ್ರಾಹಕ ಮತ್ತು ಏಜೆಂಟ್ ನಡುವೆ ಜಗಳ ನಡೆದಿದೆ. ಬಳಿಕ ಏಜೆಂಟ್ ಗ್ರಾಹಕನ ಮೇಲೆ ಹಲ್ಲೆ ನಡೆಸಿದ್ದಾನೆ.
ಬೆಂಗಳೂರು (ಜು.03): ಬೆಂಗಳೂರಿನಲ್ಲಿ ಜೆಪ್ಟೋದಲ್ಲಿ ಆನ್‌ಲೈನ್ ಆರ್ಡರ್ ಮಾಡಿದ್ದ ವೇಳೆ ತಪ್ಪಾಗಿ ವಿಳಾಸವನ್ನು ಕೊಟ್ಟಿದ್ದಕ್ಕೆ ಗ್ರಾಹಕರ ಮೇಲೆ ಜೆಪ್ಟೋ ಡೆಲಿವರಿ ಏಜೆಂಟ್ ಹಲ್ಲೆ ಮಾಡಿದ ಘಟನೆ ನಡೆದಿದೆ. ಈ ಸಂಬಂಧ ಬಸವೇಶ್ವರನಗರ ಪೊಲೀಸರು ಜೆಪ್ಟೋ ಡೆಲಿವರಿ ಏಜೆಂಟ್‌ನನ್ನು ಬಂಧಿಸಿದ್ದಾರೆ.
ಜೆಪ್ಟೋ ಡೆಲಿವರಿ ಏಜೆಂಟ್ ಗ್ರಾಹಕರ ಮೇಲೆ ಹಲ್ಲೆ ನಡೆಸುತ್ತಿರುವ ಎಂಬ ವಿಡಿಯೋ ವೈರಲ್ ಆದ ನಂತರ, ಪೊಲೀಸರು ವಿಜಯನಗರ ನಿವಾಸಿ ವಿಷ್ಣುವರ್ಧನ್ ಅವರನ್ನು ಪತ್ತೆಹಚ್ಚಿ, ಬಂಧಿಸಿ ನಂತರ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು. ವಿಷ್ಣುವರ್ಧನ್ II ಪಿಯು ವಿದ್ಯಾರ್ಥಿಯಾಗಿದ್ದು, ತಮ್ಮ ಬಿಡುವಿನ ವೇಳೆಯಲ್ಲಿ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ. ಬಸವೇಶ್ವರ ನಗರದ ನಿವಾಸಿ ಶಶಾಂಕ್ ಎನ್ನುವವರು ಘಟನೆ ನಡೆದ ಕೆಲವು ಗಂಟೆಗಳ ನಂತರ ದೂರು ದಾಖಲಿಸಿದ್ದರು.
ಪೊಲೀಸರ ಎಫ್‌ಐಆರ್ ಪ್ರಕಾರ, ಶಶಾಂಕ್ ಅವರ ಅತ್ತಿಗೆ ಮೇ 21, 2025 ರ ಮಧ್ಯಾಹ್ನ ಕ್ವಿಕ್ ಕಾಮರ್ಸ್ ವೇದಿಕೆಯಲ್ಲಿ ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದ್ದರು. ಜೆಪ್ಟೋ ಡೆಲಿವರಿ ಏಜೆಂಟ್ ವಿಷ್ಣುವರ್ಧನ್ ಅಕ್ಕಿಯನ್ನು ಡೆಲಿವರಿ ಮಾಡಲು ಹೋಗಬೇಕಿತ್ತು. ಹೀಗೆ ಡೆಲಿವರಿ ನೀಡುವುದಕ್ಕೆ ತೆರಳಿದಾಗ ಮಹಿಳೆ ಆರ್ಡರ್ ಪಡೆಯಲು ಹೋದರು. ಆಗ ಡೆಲಿವರಿ ಏಜೆಂಟ್ ಸರಿಯಾಗಿ ವಿಳಾಸವನ್ನು ಕೊಡಬೇಕಲ್ಲವೇ ಎಂದು ಹೇಳಿದ್ದಾರೆ. ಇದಕ್ಕೆ ಹೊರಗೆ ಬಂದ ಶಶಾಂಕ್ ತನ್ನ ಅತ್ತಿಗೆಗೆ ಏಕೆ ಜೋರಾಗಿ ಮಾತನಾಡುತ್ತೀಯ ಎಂದು ಇವರೂ ಜೋರು ಮಾತಿನಲ್ಲಿ ಮಾತನಾಡಿದ್ದಾರೆ.
ಆಗ ಡೆಲಿವರಿ ಏಜೆಂಟ್‌ಗೆ ಹೊಡೆಯುವನ ರೀತಿಯಲ್ಲಿ ಮೈಮೇಲೆ ಏರಿ ಹೋದ ಶಶಾಂಕ್ ಏನೋ ಕೆಟ್ಟದಾಗಿ ಮಾತನಾಡಿದ್ದಾರೆ. ಬೈಕ್‌ನಿಂದ ಇಳಿದುಬಂದ ಡೆಲಿವರಿ ಏಜೆಂಟ್ ವಿಷ್ಣುವರ್ಧನ್ ಗ್ರಾಹಕನ ಮುಖಕ್ಕೆ, ತಲೆಗೆ ಹಾಗೂ ಕಣ್ಣಿಗೆ ಗುದ್ದಿ ಗಾಯಗೊಳಿಸಿದ್ದಾನೆ. ಈ ಬಗ್ಗೆ ಗ್ರಾಹಕ ಶಶಾಂಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಾನು ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಆರೋಪಿ ಹೊಡೆಯುವುದನ್ನು ನಿಲ್ಲಿಸಲಿಲ್ಲ ಎಂದು ಗ್ರಾಹಕ ಪೊಲೀಸರಿಗೆ ತಿಳಿಸಿದ್ದಾನೆ. ದಾಳಿಯ ನಂತರ ಕಣ್ಣಿನ ಆಸ್ಪತ್ರೆಗೆ ಹೋಗಿ ಗಾಯಕ್ಕೆ ಚಿಕಿತ್ಸೆ ಪಡೆದಿದ್ದೇನೆ ಎಂದು ಶಶಾಂಕ್ ಹೇಳಿಕೊಂಡಿದ್ದಾನೆ.
ಹೆಚ್ಚಿನ ತನಿಖೆಗಾಗಿ ಪೊಲೀಸರು ವಿಷ್ಣವರ್ಧನ್ ವಿರುದ್ಧ ಬಿಎನ್ಎಸ್ ಸೆಕ್ಷನ್ 115(2) (ನೋವುಂಟುಮಾಡುವುದು), 126(2) (ತಪ್ಪಾದ ಸಂಯಮ), 351 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಕರೆಸಿದ್ದಾರೆ.
ಬೆಂಗಳೂರು ನಗರದ ಬಸವೇಶ್ವರ ನಗರ ಪೊಲೀಸರು ಜೆಪ್ಟೋ ಡೆಲಿವರಿ ಏಜೆಂಟ್‌ನನ್ನು ಬಂಧಿಸಿದ್ದಾರೆ. ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಗ್ರಾಹಕರು ವಿಳಾಸವನ್ನು ತಪ್ಪಾಗಿ ಕೊಟ್ಟಿದ್ದರಿಂದ ಉಂಟಾದ ಜಗಳ ಗ್ರಾಹಕರ ಮೇಲೆ ಹಲ್ಲೆ ಮಾಡುವ ಹಂತಕ್ಕೆ ತಲುಪಿದೆ. ಹಲ್ಲೆ ಬಳಿಕ ಗ್ರಾಹಕರು ದೂರು ಕೊಟ್ಟಿದ್ದು, ಡೆಲಿವರಿ ಏಜೆಂಟ್‌ನನ್ನು ಬಂಧಿಸಲಾಗಿದೆ.