ಚೀನಾ ಮೂಲದ ಎಂಜಿನಿಯರ್‌ಗಳು ಮತ್ತು ತಂತ್ರಜ್ಞರನ್ನು ವಾಪಸ್‌ ಕರೆಸಿಕೊಂಡ ಚೀನಾ ಕುತಂತ್ರ ಸಮರ – ಉತ್ಪಾದನಾ ಹಬ್‌ ಆಗುವ ಭಾರತದ ಯತ್ನಕ್ಕೆ ಅಡ್ಡಗಾಲು | China Starts Trade War Against India Foxconn Recalls Over 300 Engineers

ಚೀನಾ ಮೂಲದ ಎಂಜಿನಿಯರ್‌ಗಳು ಮತ್ತು ತಂತ್ರಜ್ಞರನ್ನು ವಾಪಸ್‌ ಕರೆಸಿಕೊಂಡ ಚೀನಾ ಕುತಂತ್ರ ಸಮರ – ಉತ್ಪಾದನಾ ಹಬ್‌ ಆಗುವ ಭಾರತದ ಯತ್ನಕ್ಕೆ ಅಡ್ಡಗಾಲು | China Starts Trade War Against India Foxconn Recalls Over 300 Engineers



ಭಾರತದ ವಿರುದ್ಧ ಈ ಹಿಂದೆ ಗಡಿಯಲ್ಲಿ ಕಿರಿಕಿರಿ ಮಾಡಿದ್ದ ಚೀನಾ ಈಗ ವ್ಯಾಪಾರ ಸಮರ ಆರಂಭಿಸಿದೆ ಫಾಕ್ಸ್‌ಕಾನ್‌ ಚೀನಾದ ಒತ್ತಡಕ್ಕೆ ಮಣಿದು ಭಾರತದಲ್ಲಿರುವ ತನ್ನ ಘಟಕಗಳಿಂದ ಸುಮಾರು 300ಕ್ಕೂ ಹೆಚ್ಚು ಚೀನಾ ಮೂಲದ ಎಂಜಿನಿಯರ್‌ಗಳು ಮತ್ತು ತಂತ್ರಜ್ಞರನ್ನು ವಾಪಸ್‌ ಕರೆಸಿಕೊಂಡಿದೆ.

ನವದೆಹಲಿ: ಭಾರತದ ವಿರುದ್ಧ ಈ ಹಿಂದೆ ಗಡಿಯಲ್ಲಿ ಕಿರಿಕಿರಿ ಮಾಡಿದ್ದ ಚೀನಾ ಈಗ ವ್ಯಾಪಾರ ಸಮರ ಆರಂಭಿಸಿದೆ. ಆ್ಯಪಲ್‌ ಸಂಸ್ಥೆಯ ಐಫೋನ್‌ಗಳ ಅತಿದೊಡ್ಡ ಉತ್ಪಾದಕ ಕಂಪನಿಯಾದ ತೈವಾನ್‌ ಮೂಲದ ಫಾಕ್ಸ್‌ಕಾನ್‌ ಚೀನಾದ ಒತ್ತಡಕ್ಕೆ ಮಣಿದು ಕರ್ನಾಟಕ ಹಾಗೂ ತಮಿಳುನಾಡು ಸೇರಿದಂತೆ ಭಾರತದಲ್ಲಿರುವ ತನ್ನ ಘಟಕಗಳಿಂದ ಸುಮಾರು 300ಕ್ಕೂ ಹೆಚ್ಚು ಚೀನಾ ಮೂಲದ ಎಂಜಿನಿಯರ್‌ಗಳು ಮತ್ತು ತಂತ್ರಜ್ಞರನ್ನು ವಾಪಸ್‌ ಕರೆಸಿಕೊಂಡಿದೆ.

ಇದಲ್ಲದೆ, ಆಟೋಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸುವ ಆಯಸ್ಕಾಂತಗಳ (ರೇರ್‌ ಅರ್ತ್‌ ಮ್ಯಾಗ್ನೆಟ್‌) ರಫ್ತಿಗೂ ಚೀನಾ ನಿರ್ಬಂಧ ಹೇರಿದೆ.

ಮುಂದಿನ ಸೆಪ್ಟೆಂಬರ್‌ನಲ್ಲಿ ಆ್ಯಪಲ್‌ ಕಂಪನಿಯು ಐಫೋನ್ 17ರ ಬಿಡುಗಡೆಗೆ ಸಿದ್ಧವಾಗಿರುವ ಹೊತ್ತಿನಲ್ಲೇ ಫಾಕ್ಸ್‌ಕಾನ್‌ ಇಂಥ ನಿರ್ಧಾರ ತೆಗೆದುಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ‘ಚೀನಾದ ಹೊರಗೆ ಐಫೋನ್‌ 17ರ ಉತ್ಪಾದನೆಗೆ ಅಡ್ಡಿ ಮಾಡಲೆಂದೇ ಈ ರೀತಿ ಮಾಡಲಾಗುತ್ತಿದೆ. ಚೀನಾ ಚಿತಾವಣೆಯಿಂದ ಫಾಕ್ಸ್‌ಕಾನ್‌ ಈ ನಡೆ ಅನುಸರಿಸಿದೆ’ ಎಂದು ವಿಶ್ಲೇಷಿಸಲಾಗುತ್ತಿದೆ.

ಸಂಖ್ಯೆ ಕಮ್ಮಿ ಇದ್ದರೂ ನುರಿತ ತಂತ್ರಜ್ಞರು:

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಫಾಕ್ಸ್‌ಕಾನ್‌ ಕಂಪನಿಯ ಐಫೋನ್‌ ಉತ್ಪಾದನಾ ಘಟಕಗಳಿದ್ದು, ಇಲ್ಲಿ ಚೀನಾ ಮೂಲದ ನೌಕರರ ಸಂಖ್ಯೆ ಶೇ.1ಕ್ಕಿಂತ ಕಡಿಮೆ ಇದೆ. ಆದರೆ ಚೀನಿ ಮ್ಯಾನೇಜರ್‌ಗಳು, ತಜ್ಞರು ಮತ್ತು ಎಂಜಿನಿಯರ್‌ಗಳ ಪಾತ್ರ ಮಹತ್ವದ್ದಾಗಿದೆ. ಈ ಎಲ್ಲರೂ ನುರಿತ ತಂತ್ರಜ್ಞರಾಗಿದ್ದಾರೆ. ಕಳೆದೆರಡು ತಿಂಗಳಿಂದ ಫಾಕ್ಸ್‌ಕಾನ್‌ ಕಂಪನಿ ಭಾರತದ ಉತ್ಪಾದನಾ ಘಟಕಗಳಿಂದ ಅವರನ್ನು ವಾಪಸ್‌ ಕರೆಸಿಕೊಳ್ಳುತ್ತಿದೆ. ದಕ್ಷಿಣ ಭಾರತದಲ್ಲಿರುವ ಫಾಕ್ಸ್‌ಕಾನ್‌ ಉತ್ಪಾದನಾ ಘಟಕಗಳಲ್ಲಿ ಇದೀಗ ತೈವಾನ್‌ ಮೂಲದ ಸಿಬ್ಬಂದಿಯಷ್ಟೇ ಉಳಿದುಕೊಂಡಿದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ಚೀನಾ ಚಿತಾವಣೆ ಕಾರಣ:

ಚೀನಾ ಸಿಬ್ಬಂದಿಯ ದಿಢೀರ್ ವಾಪಸಾತಿಗೆ ಈವರೆಗೆ ಕಾರಣ ಸ್ಪಷ್ಟವಾಗಿಲ್ಲ. ಆದರೆ, ಭಾರತ ಮತ್ತು ದಕ್ಷಿಣ ಏಷ್ಯಾದ ಇತರೆ ದೇಶಗಳಿಗೆ ತಂತ್ರಜ್ಞಾನ ವರ್ಗಾವಣೆ, ಪ್ರಮುಖ ಉಪಕರಣಗಳ ರಫ್ತು ತಡೆಯಲು ಚೀನಾ ಸರ್ಕಾರ ಮೌಖಿಕವಾಗಿ ಸಲಹೆ ನೀಡಿದೆ ಎಂದು ಈ ವರ್ಷದ ಆರಂಭದಲ್ಲೇ ಬ್ಲೂಮ್‌ಬರ್ಗ್‌ ಸುದ್ದಿಸಂಸ್ಥೆ ವರದಿ ಮಾಡಿತ್ತು.

ಈ ನಡುವೆ, ಚೀನಾದ ಮೇಲಿನ ಅವಲಂಬನೆ ಕಡಿತಗೊಳಿಸುವ ಆ್ಯಪಲ್‌ ಕಂಪನಿಯ ಪ್ರಯತ್ನದ ಭಾಗವಾಗಿ ಫಾಕ್ಸ್‌ಕಾನ್‌ ಕೂಡ ದಕ್ಷಿಣ ಭಾರತದಲ್ಲಿ ಐಫೋನ್‌ ಜೋಡಣೆ ಘಟಕಗಳನ್ನು ವಿಸ್ತರಿಸಲು ಮುಂದಾಗಿತ್ತು. ಈ ಹೊತ್ತಿನಲ್ಲೇ ಇದೀಗ ಅದು ಆ್ಯಪಲ್‌ ಕಂಪನಿಗೆ ಶಾಕ್‌ ನೀಡಿದೆ. ‘ಚೀನಾ ನೌಕರರ ವಾಪಸಾತಿಯಿಂದ ಐಫೋನ್‌ ಗುಣಮಟ್ಟದ ಮೇಲೆ ಸದ್ಯ ಯಾವುದೇ ಪರಿಣಾಮ ಬೀರಲ್ಲ. ಆದರೆ ಮುಂದಿನ ತಲೆಮಾರಿನ ಐಪೋನ್‌ ಉತ್ಪಾದನೆ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂದು ಹೇಳಲಾಗಿದೆ.

ವಿಶ್ವಾದ್ಯಂತ ಮಾರಾಟವಾಗುವ ಐಫೋನ್‌ಗಳಲ್ಲಿ ಶೇ.20ರಷ್ಟು ಸದ್ಯ ಭಾರತದಲ್ಲೇ ಉತ್ಪಾದನೆಯಾಗುತ್ತಿವೆ. 2026ರ ದ್ವಿತೀಯಾರ್ಧದಲ್ಲಿ ಅಮೆರಿಕದಲ್ಲಿ ಮಾರಾಟವಾಗುವ ಹೆಚ್ಚಿನ ಐಫೋನ್‌ಗಳನ್ನು ಭಾರತದಲ್ಲೇ ಉತ್ಪಾದಿಸುವ ಗುರಿಯನ್ನು ಆ್ಯಪಲ್‌ ಹೊಂದಿದೆ.

ಖರ್ಗೆ ಕಿಡಿ, ಸರ್ಕಾರ ಸ್ಪಷ್ಟನೆ:

ಫಾಕ್ಸ್‌ಕಾನ್‌ನಲ್ಲಿನ ಚೀನಾ ಎಂಜಿನಿಯರ್‌ಗಳ ವಾಪಸಾತಿ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಇದು ಮೇಕ್‌ ಇನ್‌ ಇಂಡಿಯಾ ವೈಫಲ್ಯವಲ್ಲವೆ?’ ಎಂದಿದ್ದಾರೆ. ಆದರೆ ಇದಕ್ಕೆ ಕೇಂದ್ರ ಸರ್ಕಾರ ಹಾಗೂ ಫಾಕ್ಸ್‌ಕಾನ್‌ ಸ್ಪಷ್ಟನೆ ನೀಡಿ, ‘ಚೀನಿ ಎಂಜಿನಿಯರ್‌ಗಳ ಬದಲು ಭಾರತೀಯ ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ನಡೆದಿದೆ’ ಎಂದಿದೆ.

ಏನಿದು ಕಳ್ಳಾಟ?– ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ತೈವಾನ್‌ ಮೂಲದ ಫಾಕ್ಸ್‌ಕಾನ್‌ ಕಂಪನಿ ಐಫೋನ್‌ಗಳನ್ನು ಉತ್ಪಾದಿಸುತ್ತದೆ

ಈ ಕಂಪನಿಗಳ ಒಟ್ಟು ನೌಕರರಲ್ಲಿ ಶೇ.1ರಷ್ಟು ಚೀನಿಯರು ಇದ್ದಾರೆ. ಸಂಖ್ಯೆ ಕಡಿಮೆ ಇದ್ದರೂ ಅವರೆಲ್ಲಾ ಅತಿ ಮುಖ್ಯ

– ಸೆಪ್ಟೆಂಬರ್‌ನಲ್ಲಿ ಐಫೋನ್‌ 17 ಬಿಡುಗಡೆಗೆ ತಯಾರಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲೇ ಚೀನಾದ ಹೊಸ ಆಟ

– ಫಾಕ್ಸ್‌ಕಾನ್‌ನಲ್ಲಿರುವ ಚೀನಿ ಉದ್ಯೋಗಿಗಳನ್ನು ವಾಪಸ್‌ ಕರೆಸಿಕೊಳ್ಳಲು ಒತ್ತಡ. ಮಣಿದ ಫಾಕ್ಸ್‌ಕಾನ್‌ ಕಂಪನಿ

– ಇದೇ ವೇಳೆ, ಭಾರತದ ಆಟೋಮೊಬೈಲ್‌, ಎಲೆಕ್ಟ್ರಾನಿಕ್ಸ್‌ ಪೂರೈಕೆಗೆ ಬೇಕಾದ ಅಯಸ್ಕಾಂತ ಪೂರೈಕೆಗೂ ತಡೆ

– ಭಾರತ ಜಾಗತಿಕ ಉತ್ಪಾದನಾ ಹಬ್‌ ಆದರೆ ತನಗೆ ತೊಂದರೆಯಾಗಲಿದೆ ಎಂಬ ಸಿಟ್ಟಿನಿಂದ ಈ ಕೃತ್ಯದ ಶಂಕೆ



Source link

Leave a Reply

Your email address will not be published. Required fields are marked *