ಈಗ ವಿಜಯೇಂದ್ರ ಮುಂದುವರಿಯಲಿ, ನಂತರ ನಾನು ಆಕಾಂಕ್ಷಿ: ಮಾಜಿ ಸಚಿವ ಶ್ರೀರಾಮುಲು | B Sriramulu Says By Vijayendra Should Continue He Will Seek Post Later Gvd

ಈಗ ವಿಜಯೇಂದ್ರ ಮುಂದುವರಿಯಲಿ, ನಂತರ ನಾನು ಆಕಾಂಕ್ಷಿ: ಮಾಜಿ ಸಚಿವ ಶ್ರೀರಾಮುಲು | B Sriramulu Says By Vijayendra Should Continue He Will Seek Post Later Gvd



ಮುಂದಿನ ಒಂದೂವರೆ ವರ್ಷಗಳ ಕಾಲ ವಿಜಯೇಂದ್ರ ಅವರನ್ನೇ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸಲಿ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಮಾರ್ಮಿಕವಾಗಿ ಹೇಳಿದ್ದಾರೆ.

ಬೆಂಗಳೂರು (ಜು.03): ಮುಂದಿನ ಒಂದೂವರೆ ವರ್ಷಗಳ ಕಾಲ ವಿಜಯೇಂದ್ರ ಅವರನ್ನೇ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸಲಿ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಮಾರ್ಮಿಕವಾಗಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಒಂದೂವರೆ ವರ್ಷದಿಂದ ವಿಜಯೇಂದ್ರ ಅವರೇ ರಾಜ್ಯಾಧ್ಯಕ್ಷರಾಗಿದ್ದಾರೆ. ಮಧ್ಯಂತರದಲ್ಲಿ ಅಧ್ಯಕ್ಷರ ಬದಲಾವಣೆ ನಮ್ಮ ಪಕ್ಷದಲ್ಲಿ ಆಗಿಲ್ಲ. ಹೀಗಾಗಿ, ಮುಂದಿನ ಒಂದೂವರೆ ವರ್ಷ ವಿಜಯೇಂದ್ರ ಅವರನ್ನೇ ಮುಂದುವರೆಸಲಿ ಎಂದು ಪ್ರತಿಪಾದಿಸಿದರು. ನೀವು ಕೂಡ ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ಹಿಂದೆ ನಾನು ಅಧ್ಯಕ್ಷ ಸ್ಥಾನ ಕೊಟ್ಟರೆ ನಿಭಾಯಿಸುವುದಾಗಿ ಹೇಳಿದ್ದೆ. ಈಗಲೂ ಆ ಮಾತಿಗೆ ಬದ್ಧನಾಗಿದ್ದೇನೆ. ಆದರೆ, ಈಗ ಅಲ್ಲ. ಒಂದೂವರೆ ವರ್ಷದ ಬಳಿಕ ನನಗೆ ಅವಕಾಶ ಕೊಡಲಿ ಎಂದರು.

ವಿಜಯೇಂದ್ರ ಬದಲಾವಣೆ ಬೇಡಿಕೆ ಬದಲಿಸಲ್ಲ: ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ.ವಿಜಯೇಂದ್ರ ಅವರನ್ನು ಬದಲಾವಣೆ ಮಾಡಬೇಕು ಎಂಬ ನಮ್ಮ ಬೇಡಿಕೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ರಾಜ್ಯ ಬಿಜೆಪಿಯ ಅತೃಪ್ತ ಬಣದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ್ ಮತ್ತು ಶಾಸಕ ಬಿ.ಪಿ.ಹರೀಶ್ ಅವರು ದಾವಣಗೆರೆ ಜಿಲ್ಲೆಯ ಸಂಘಟನೆಗೆ ಸೀಮಿತವಾಗಿ ಪಕ್ಷದ ನಾಯಕರನ್ನು ಭೇಟಿ ಮಾಡಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಮುಂದಿನ ಬಾರಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎಂದಾದಲ್ಲಿ ವಿಜಯೇಂದ್ರ ಅವರನ್ನು ಬದಲಾಯಿಸಬೇಕು ಎಂಬ ಅಭಿಪ್ರಾಯವನ್ನು ಈಗಾಗಲೇ ಪಕ್ಷದ ಹಿರಿಯ ನಾಯಕರಿಗೆ ತಿಳಿಸಿದ್ದೇವೆ. ಈಗ ನಮ್ಮ ಅಭಿಪ್ರಾಯವನ್ನು ನಾವು ಹೇಳಬೇಕಾಗಿದೆ. ಒಂದು ಬಾರಿ ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಂಡ ಬಳಿಕ ಮತ್ತೆ ಅದನ್ನು ಮಾರ್ಪಡಿಸಲು ಆಗುವುದಿಲ್ಲ. ಹೀಗಾಗಿಯೇ ನಾವು ನಮ್ಮ ಒತ್ತಾಯ ಮಂಡಿಸುತ್ತಲೇ ಇದ್ದೇವೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ತಟಸ್ಥ ಬಣ ಎಂದು ಗುರುತಿಸಿಕೊಳ್ಳುವ ಕೆಲ ನಾಯಕರು ತಮ್ಮ ಅಭಿಪ್ರಾಯ ಬಹಿರಂಗವಾಗಿ ಹೇಳಿಲ್ಲ. ನಾವು ಬಹಿರಂಗವಾಗಿಯೇ ನಮ್ಮ ನಿಲುವು ವ್ಯಕ್ತಪಡಿಸಿದ್ದೇವೆ ಎಂದು ಹೇಳಿದರು. ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಸಹಕಾರ ಸಚಿವರ ಹನಿಟ್ರ್ಯಾಪ್‌ ಪ್ರಕರಣ, ಕ್ರಿಕೆಟ್ ಅಭಿಮಾನಿಗಳ ಕಾಲ್ತುಳಿತ ದುರಂತ ಸೇರಿ ಹಲವು ವಿಚಾರಗಳಲ್ಲಿ ನಮ್ಮ ಪಕ್ಷದ ನಾಯಕರು ಕೈಚೆಲ್ಲಿದರು. ರಾಜ್ಯ ಸರ್ಕಾರದ ವಿರುದ್ಧ ಯಾವುದೇ ಕಠಿಣ ನಿಲುವು ಕೈಗೊಳ್ಳದೆ ಒಳಒಪ್ಪಂದ ಮಾಡಿಕೊಂಡರು. ಇದನ್ನು ನಾವು ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರ ನಿರ್ಧಾರಕ್ಕೆ ಕಾಯುತ್ತಿದ್ದೇವೆ ಎಂದು ತಿಳಿಸಿದರು.



Source link

Leave a Reply

Your email address will not be published. Required fields are marked *