ಬಿಬಿಎಂಪಿ ನಡೆಸುತ್ತಿರುವ ಜಾತಿ ಗಣತಿಯಲ್ಲಿ ಗಂಭೀರ ಲೋಪದೋಷಗಳು ಕಂಡುಬಂದಿದ್ದು, ಸಮೀಕ್ಷೆ ನಡೆಸದೆ ಸ್ಟಿಕ್ಕರ್ ಅಂಟಿಸುತ್ತಿರುವ ಬಿಬಿಎಂಪಿ ಸಿಬ್ಬಂದಿ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗಿದೆ. ಚಿಕ್ಕಲ್ಲಸಂದ್ರದಲ್ಲಿ ಮನೆ ಮಾಲೀಕರೊಬ್ಬರ ಮೇಲೆ ಬಿಬಿಎಂಪಿ ಸೂಪರ್‌ವೈಸರ್ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಬೆಂಗಳೂರು (ಜು.3): ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿದಂತೆ ಬಿಬಿಎಂಪಿ (BBMP) ನಡೆಸುತ್ತಿರುವ ಜಾತಿ ಗಣತಿಯಲ್ಲಿ ಗಂಭೀರ ಲೋಪದೋಷಗಳು ಕಂಡುಬಂದಿವೆ. ಸಮೀಕ್ಷೆಯನ್ನೇ ಸರಿಯಾಗಿ ನಡೆಸದೆ, ಕಂಡ ಕಂಡ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ ಹೋಗುತ್ತಿರುವ BBMP ಸಿಬ್ಬಂದಿ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ, ಚಿಕ್ಕಲ್ಲಸಂದ್ರದ ಸಾರ್ವಭೌಮ ನಗರದ 7ನೇ ಕ್ರಾಸ್‌ನಲ್ಲಿ ಮನೆ ಮಾಲೀಕ ನಂದೀಶ್ ಎಂಬವರ ಮೇಲೆ BBMP ಸೂಪರ್‌ವೈಸರ್ ಸುರೇಶ್ ಹಲ್ಲೆ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ.
ಮಾತನಾಡದೇ ಸ್ಟಿಕರ್ ಅಂಟಿಸಿದ್ದನ್ನ ಪ್ರಶ್ನಿಸಿದ್ದಕ್ಕೆ ಹಲ್ಲೆ!
ಪೌರಕಾರ್ಮಿಕರು ಯಾವುದೇ ಮಾಹಿತಿ ಸಂಗ್ರಹಿಸದೆ, ಮನೆಯವರೊಂದಿಗೆ ಮಾತನಾಡದೆ ಸ್ಟಿಕ್ಕರ್ ಅಂಟಿಸಿದ್ದನ್ನು ಪ್ರಶ್ನಿಸಿದ ನಂದೀಶ್‌ರವರಿಗೆ, ಸ್ಥಳಕ್ಕೆ ಆಗಮಿಸಿದ ವಸಂತಪುರ BBMP ಸೂಪರ್‌ವೈಸರ್ ಸುರೇಶ್ ಕಪಾಳಕ್ಕೆ ಹೊಡೆದು, ಕಾಲಿನಿಂದ ಒದ್ದಿರುವ ಆರೋಪ ಕೇಳಿಬಂದಿದೆ. ಈ ಘಟನೆಯಿಂದ ಕೆರಳಿದ ಮನೆಯವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಪೊಲೀಸರು ದೂರು ದಾಖಲಿಸದೆ ರಾಜಿ-ಸಂಧಾನದ ಮೂಲಕ ವಿಷಯವನ್ನು ಮುಗಿಸಿದ್ದಾರೆ ಎಂದು ತಿಳಿದುಬಂದಿದೆ.
‘ನಾವು ಮನೆಯೊಳಗೆ ಇದ್ದಾಗಲೇ ಸ್ಟಿಕ್ಕರ್ ಅಂಟಿಸಲಾಗಿದೆ. ಸಮೀಕ್ಷೆ ಯಾವ ರೀತಿ ನಡೆದಿದೆ, ದಾಖಲೆ ಎಲ್ಲಿದೆ ಎಂದು ಕೇಳಿದಾಗ ಸೂಪರ್‌ವೈಸರ್ ದೌರ್ಜನ್ಯಕ್ಕೆ ಒಳಗಾದೆವು’ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಸಾರ್ವಜನಿಕರ ಆಕ್ರೋಶ:
ಈ ಘಟನೆಯಿಂದಾಗಿ BBMP ಯ ಜಾತಿ ಸಮೀಕ್ಷೆಯ ವಿಶ್ವಾಸಾರ್ಹತೆಯೇ ಪ್ರಶ್ನೆಗೆ ಒಳಗಾಗಿದ್ದು, ಸರ್ಕಾರ ಮತ್ತು BBMP ಅಧಿಕಾರಿಗಳ ವಿರುದ್ಧ ಸಾರ್ವಜನಿಕ ಆಕ್ರೋಶ ಹೆಚ್ಚಾಗುತ್ತಿದೆ. ಸಮೀಕ್ಷೆಯನ್ನು ಪಾರದರ್ಶಕವಾಗಿ ಮತ್ತು ಜವಾಬ್ದಾರಿಯುತವಾಗಿ ನಡೆಸುವಂತೆ ಜನರು ಒತ್ತಾಯಿಸಿದ್ದಾರೆ.