ಅತ್ಯಂತ ಪ್ರಸಿದ್ಧ ಕ್ಯಾನ್ಸರ್ ಆಸ್ಪತ್ರೆಯಾಗಿರುವ ಎಚ್‌ಸಿಜಿಯಲ್ಲಿ ಸುರಕ್ಷತೆ ಮೇಲೆ ಗಣನೀಯ ಪರಿಣಾಮ ಬೀರಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಪ್ರಖ್ಯಾತ ಜಾಗತಿಕ ಔಷಧ ಕಂಪನಿ ಎಲಿ ಲಿಲ್ಲಿ ಅಂಡ್ ಕಂಪನಿಯು ತನ್ನ ಸಹಯೋಗವನ್ನೇ ರದ್ದುಪಡಿಸಿತ್ತು ಎಂಬ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರು : ಅತ್ಯಂತ ಪ್ರಸಿದ್ಧ ಕ್ಯಾನ್ಸರ್ ಆಸ್ಪತ್ರೆಯಾಗಿರುವ ಎಚ್‌ಸಿಜಿಯಲ್ಲಿ ಕ್ಲಿನಿಕಲ್ ಟ್ರಯಲ್‌ಗೆ ಸಂಬಂಧಿಸಿದಂತೆ ಹಗರಣ ರೀತಿಯ ನೀತಿಬಾಹಿರ ಚಟುವಟಿಕೆ ನಡೆದಿದೆ ಎಂಬ ಸ್ಫೋಟಕ ಸಂಗತಿ ಬಯಲಿಗೆ ಬರುವ ಮುನ್ನವೇ ಮಹತ್ವದ ವಿದ್ಯಮಾನವೊಂದು ಘಟಿಸಿತ್ತು. ಕ್ಲಿನಿಕಲ್ ಟ್ರಯಲ್‌ಗಳಿಗೆ ಸಂಬಂಧಿಸಿದ ನಿಯಮಗಳನ್ನು ಗಂಭೀರವಾಗಿ ಉಲ್ಲಂಘನೆ ಮಾಡಲಾಗಿದೆ ಹಾಗೂ ರೋಗಿಗಳ ಸುರಕ್ಷತೆ ಮೇಲೆ ಗಣನೀಯ ಪರಿಣಾಮ ಬೀರಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಅಮೆರಿಕ ಮೂಲದ ಪ್ರಖ್ಯಾತ ಜಾಗತಿಕ ಔಷಧ ಉತ್ಪಾದಕ ಕಂಪನಿ ಎಲಿ ಲಿಲ್ಲಿ ಅಂಡ್ ಕಂಪನಿಯು ಎಚ್‌ಸಿಜಿ ಜತೆಗಿನ ತನ್ನ ಸಹಯೋಗವನ್ನೇ ರದ್ದುಪಡಿಸಿತ್ತು ಎಂಬ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.
ಎಚ್‌ಸಿಜಿ ಆಸ್ಪತ್ರೆ ಗಂಭೀರ ಆರೋಪ ಎದುರಿಸುತ್ತಿರುವಾಗಲೇ, ಬಹಿರಂಗವಾಗಿರುವ ಈ ಮಾಹಿತಿ ಆ ಆಸ್ಪತ್ರೆಯ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಈ ಬೆಳವಣಿಗೆ ಎಚ್‌ಸಿಜಿ ಆಸ್ಪತ್ರೆಯ ನೈತಿಕ ಸಮಿತಿ ಮುಖ್ಯಸ್ಥರಾಗಿದ್ದ ಡಾ। ಕೃಷ್ಣಭಟ್ ಮಾಡಿದ್ದ ಆರೋಪಗಳನ್ನು ದೃಢೀಕರಿಸಿದಂತಾಗಿದೆ.
ಜಾಗತಿಕ ಔಷಧ ಕಂಪನಿಗಳು ಈ ರೀತಿ ಕ್ಲಿನಿಕಲ್ ಟ್ರಯಲ್ ಒಪ್ಪಂದವನ್ನೇ ರದ್ದುಗೊಳಿಸುವುದು ಬಲು ಅಪರೂಪ ಹಾಗೂ ಅತ್ಯಂತ ಕಠಿಣಾತಿಕಠಿಣ ಕ್ರಮ. ಎಚ್‌ಸಿಜಿ ನಡೆಸುತ್ತಿರುವ ಕ್ಲಿನಿಕಲ್ ಟ್ರಯಲ್ ಹಾಗೂ ರೋಗಿಗಳ ಸುರಕ್ಷತೆ ವಿಚಾರದಲ್ಲಿ ತನಗೆ ಯಾವುದೇ ವಿಶ್ವಾಸವೇ ಉಳಿದಿಲ್ಲ ಎಂಬ ಸಂದೇಶವನ್ನು ಈ ಮೂಲಕ ಸಾರಿದಂತಾಗಿದೆ. ಜತೆಗೆ ಭವಿಷ್ಯದಲ್ಲಿ ಎಚ್‌ಸಿಜಿ ಮಾಡಿಕೊಳ್ಳುವ ಸಹಯೋಗಕ್ಕೂ ಹೊಡೆತ ಬೀಳಲಿದೆ. ಸಾರ್ವಜನಿಕ ಹಾಗೂ ಹೂಡಿಕೆದಾರರ ವಿಶ್ವಾಸಕ್ಕೂ ಕೊಡಲಿ ಪೆಟ್ಟು ಬೀಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಠಿಣ ನಿಯಮ ಹೊಂದಿದ ಕಂಪನಿ:
ಎಲಿ ಲಿಲ್ಲಿ ಹಾಗೂ ಕಂಪನಿಯು ಔಷಧ ಅಭಿವೃದ್ಧಿ ಗುಣಮಟ್ಟ ವಿಚಾರದಲ್ಲಿ ಅತ್ಯಂತ ಕಠಿಣವಾದ ನಿಯಮಗಳನ್ನು ಹೊಂದಿದೆ. ಸ್ತನ ಕ್ಯಾನ್ಸರ್ ಅಧ್ಯಯನ ಸಂಬಂಧ 2023ರ ಫೆ.2ರಂದು ಈ ಕಂಪನಿ ಪತ್ರವೊಂದನ್ನು ಬರೆದಿತ್ತು.
ಗಂಭೀರ ಅಡ್ಡಪರಿಣಾಮವನ್ನು ರೋಗಿಗಳು ಅನುಭವಿಸಿದ ಹೊರತಾಗಿಯೂ ಪ್ರಾಯೋಗಿಕ ಔಷಧ ಪ್ರಮಾಣವನ್ನು ಕಡಿತಗೊಳಿಸುವ ಅಥವಾ ಸ್ಥಗಿತಗೊಳಿಸುವ ಪ್ರಕ್ರಿಯೆಯನ್ನು ಪಾಲಿಸಲು ಎಚ್‌ಸಿಜಿ ಆಸ್ಪತ್ರೆಯ ಡಾ। ಸತೀಶ್ ತುಂಗಪ್ಪ ಅವರು ಪದೇಪದೇ ವಿಫಲರಾಗಿದ್ದಾರೆ ಎಂದು ಎಲಿ ಲಿಲ್ಲಿ ತನ್ನ ಪತ್ರದಲ್ಲಿ ಎತ್ತಿ ತೋರಿಸಿತ್ತು. 9 ರೋಗಿಗಳ ವಿಚಾರದಲ್ಲಿ ಈ ರೀತಿಯ ನಿಯಮ ಉಲ್ಲಂಘನೆಯಾಗಿದೆ. ನೇರವಾಗಿ ಡೋಸ್ ವೈಫಲ್ಯ ರುಜುವಾತಾಗದಿದ್ದರೂ ಇಬ್ಬರು ರೋಗಿಗಳು ಸಾವಿಗೀಡಾಗಿದ್ದಾರೆ ಎಂದು ಎಲಿ ಲಿಲ್ಲಿ ತಿಳಿಸಿತ್ತು. ಈ ಗಂಭೀರ ಉಲ್ಲಂಘನೆಯ ಪರಿಣಾಮವಾಗಿ ಎಚ್‌ಸಿಜಿ ಜತೆಗೂಡಿ ನಡೆಸಲಾಗುತ್ತಿದ್ದ ಒಂದು ಅಧ್ಯಯನ (ಜೆ2ಜೆ-ಒಎಕ್ಸ್-ಜೆಝಡ್ಎಲ್‌ಸಿ)ದಲ್ಲಿ ರದ್ದುಗೊಳಿಸುತ್ತಿರುವುದಾಗಿಯೂ ಘೋಷಿಸಿತ್ತು
ಎಲಿ ಲಿಲ್ಲಿ ಕಂಪನಿಯು ಎಚ್‌ಸಿಜಿ ಆಸ್ಪತ್ರೆಯಲ್ಲಿ ಹೊಸ ರೋಗಿಗಳ ನೇಮಕಾತಿ, ಮರು ತರಬೇತಿಯನ್ನು ಅಮಾನತಿನಂತಹ ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಡಾ। ತುಂಗಪ್ಪ ಅವರ ಬಳಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ರೋಗಿಗಳ ಮೇಲಿನ ನಿಗಾವನ್ನು ತೀವ್ರಗೊಳಿಸಿರುವುದಾಗಿ ತಿಳಿಸಿದೆ. ಈ ವಿಷಯವನ್ನು ಅಮೆರಿಕದ ಎಫ್‌ಡಿಎ ಹಾಗೂ ಭಾರತದ ಆರೋಗ್ಯ ಸಚಿವಾಲಯಕ್ಕೂ ತಿಳಿಸುವುದಾಗಿ ಹೇಳಿದೆ.
ಏನಿದು ಪ್ರಕರಣ?:
ಎಚ್‌ಸಿಜಿ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಟ್ರಯಲ್ ವಿಚಾರವಾಗಿ ಹಗರಣ ರೀತಿಯ ನೀತಿಬಾಹಿರ ಚಟುವಟಿಕೆ ನಡೆಯುತ್ತಿವೆ ಎಂದು ಆಸ್ಪತ್ರೆಯ ನೈತಿಕ ಸಮಿತಿ ಮುಖ್ಯಸ್ಧ ನ್ಯಾ। ಪಿ. ಕೃಷ್ಣಭಟ್ ಅವರು ವರದಿ ನೀಡಿದ್ದರು. ಬದಲಾವಣೆ ತರಲು ಆಗದ ಕಾರಣವೊಡ್ಡಿ ಅವರು ನೈತಿಕ ಸಮಿತಿಗೆ ರಾಜೀನಾಮೆ ನೀಡಿದ್ದರು. ಕ್ಲಿನಿಕಲ್ ಟ್ರಯಲ್ ರಾದ್ಧಾಂತ ಬಯಲಾಗುತ್ತಿದ್ದಂತೆ ಆಸ್ಪತ್ರೆಯ ಸಿಇಒ ರಾಜ್ ಗೋರೆ ಹಾಗೂ ವೈದ್ಯಕೀಯ ವ್ಯವಹಾರಗಳ ನಿರ್ದೇಶಕ ಹರೀಶ್ ರೆಡ್ಡಿ ಅವರು ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಕೇಂದ್ರ ಔಷಧ ನಿಯಂತ್ರಣ ಮಹಾನಿರ್ದೇಶಕರು ಅಧಿಕೃತವಾಗಿ ತನಿಖೆ ಆರಂಭಿಸಿದ್ದರು. ಇದೇ ವೇಳೆ, ಆಸ್ಪತ್ರೆಯ ಕಾರ್ಯನಿರ್ವಾಹಕ ಅಧ್ಯಕ್ಷ ಡಾ। ಬಸವಲಿಂಗಪ್ಪ ಎಸ್. ಅಜಯಕುಮಾರ್ ಅವರು ಚಿಕಿತ್ಸೆ ವೇಳೆ ಹಲವು ಎಡವಟ್ಟುಗಳನ್ನು ಮಾಡಿ ಅಸಮರ್ಥ ವೃತ್ತಿಪರತೆ ತೋರಿದ ಕಾರಣಕ್ಕೆ ಅಮೆರಿಕದಲ್ಲಿದ್ದಾಗ ತಮ್ಮ ವೈದ್ಯಕೀಯ ಪರವಾನಗಿಯನ್ನೇ ಮರಳಿಸಿದ್ದ ಸಂಗತಿಯೂ ಅನಾವರಣವಾಗಿತ್ತು.
ಷೇರುಪೇಟೆಯಲ್ಲಿ ನೋಂದಣಿಯಾದ ಕಂಪನಿಯಾಗಿದ್ದರೂ, ತನ್ನ ಸಂಸ್ಥೆಯಲ್ಲಿ ಇಷ್ಟೆಲ್ಲಾ ಗಂಭೀರ ಬೆಳವಣಿಗೆಗಳು ನಡೆಯುತ್ತಿದ್ದರೂ ಅದನ್ನು ಷೇರುಪೇಟೆ ಹಾಗೂ ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿಗೆ ಎಚ್‌ಸಿಜಿ ತಿಳಿಸಿಲ್ಲ ಎಂಬುದೂ ಚರ್ಚೆಗೆ ಕಾರಣವಾಗಿತ್ತು.
ಕ್ಲಿನಿಕಲ್ ಟ್ರಯಲ್: ಮನುಷ್ಯರ ಬಲಿಪಶು ಮಾಡುವ ಪ್ರಯೋಗ!
ಯಾವುದೇ ಹೊಸ ಚಿಕಿತ್ಸೆ, ಹೊಸ ಔಷಧವನ್ನು ಮಾನವರ ಮೇಲೆ ಪ್ರಯೋಗ ಮಾಡಿ, ಅವುಗಳ ಕ್ಷಮತೆಯನ್ನು ತಿಳಿಯುವ ಪರೀಕ್ಷೆಯನ್ನು ಕ್ಲಿನಿಕಲ್ ಟ್ರಯಲ್ ಎನ್ನಲಾಗುತ್ತದೆ. ಇದನ್ನು ನಡೆಸಲು ಉತ್ಕೃಷ್ಟ ಮಾನದಂಡಗಳನ್ನು ಪಾಲಿಸಬೇಕಾಗುತ್ತದೆ. ಈ ಪ್ರಯೋಗದ ವೇಳೆ ಸಣ್ಣ ಅಡ್ಡಪರಿಣಾಮದಿಂದ ಜೀವ ಹಾನಿವರೆಗೆ ಏನು ಬೇಕಾದರೂ ಸಂಭವಿಸಬಹುದು.