ಆ್ಯಕ್ಸಿಯೋಂ-4ರ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್)ಗೆ ತೆರಳಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸ್ಥಿತಿಯಲ್ಲಿ ಸಂಭವಿಸುವ ನಿಶ್ಶಕ್ತಿಯ ಬಗ್ಗೆ ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಂಡಿದ್ದಾರೆ.
ನವದೆಹಲಿ: ಆ್ಯಕ್ಸಿಯೋಂ-4ರ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್)ಗೆ ತೆರಳಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸ್ಥಿತಿಯಲ್ಲಿ ಸಂಭವಿಸುವ ನಿಶ್ಶಕ್ತಿಯ ಬಗ್ಗೆ ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಂಡಿದ್ದಾರೆ.
ಈ ಬಗ್ಗೆ ಆ್ಯಕ್ಸಿಯೋಂ ಸ್ಪೇಸ್ ಹೇಳಿಕೆ ಬಿಡುಗಡೆ ಮಾಡಿದ್ದು, ‘ಶುಕ್ಲಾ ಅವರು ಲೈಫ್ ಸೈನ್ಸಸ್ ಗ್ಲೋವ್‌ಬಾಕ್ಸ್(ನಿಯಂತ್ರಿತ ಪರಿಸರದಲ್ಲಿ ಜೀವ ವಿಜ್ಞಾನ ಸಂಶೋಧನೆ ನಡೆಸಲು ಐಎಸ್‌ಎಸ್‌ನಲ್ಲಿರುವ ವ್ಯವಸ್ಥೆ)ನಲ್ಲಿ, ಮಾಂಸಖಂಡದಲ್ಲಿ ನಷ್ಟ ಮತ್ತು ನಿಶ್ಶಕ್ತಿಗೆ ನಿರ್ವಾತ ಹೇಗೆ ಕಾರಣವಾಗುತ್ತದೆ ಎಂಬುದನ್ನು ಸಂಶೋಧಿಸುತ್ತಿದ್ದಾರೆ’ ಎಂದು ತಿಳಿಸಿದೆ.
ಶುಕ್ಲಾ ಅವರ ಈ ಸಂಶೋಧನೆಯು, ಭೂಮಿಯ ಮೇಲಿರುವವರಲ್ಲೂ ವಯಸ್ಸಾಗುವಿಕೆ ಅಥವಾ ಇನ್ಯಾವುದೇ ಕಾರಣದಿಂದ ಸ್ನಾಯುಗಳ ಶಕ್ತಿ ಕ್ಷೀಣಿಸದರೆ, ಅದಕ್ಕೆ ಸೂಕ್ತ ಔಷಧಿ ಕಂಡುಹಿಡಿಯಲು ಉಪಯುಕ್ತ ಎನ್ನಲಾಗಿದೆ. ಅಂತೆಯೇ, ಗಗನಯಾತ್ರಿಗಳ ತಂಡವು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆಯೂ ಕೆಲಸ ಮಾಡುತ್ತಿದ್ದು, ಇದರಿಂದ ಅನೇಕ ಮಾನಸಿಕ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಸುಲಭವಾಗುತ್ತದೆ.
ಆಕ್ಸಿಯಮ್-4 ಯೋಜನೆಯ ಭಾಗವಾಗಿ ಶುಕ್ಲಾ 60ಕ್ಕೂ ಹೆಚ್ಚು ಪ್ರಯೋಗಗಳನ್ನು ನಡೆಸಲಿದ್ದಾರೆ.
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಐತಿಹಾಸಿಕ ಆಕ್ಸಿಯಮ್-4 ಯೋಜನೆಯ ಭಾಗವಾಗಿದ್ದು, ಈಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಕಾರ್ಯಾಚರಿಸುತ್ತಿದ್ದಾರೆ. ಆಕ್ಸಿಯಮ್-4 ಯೋಜನೆಯ ಭಾಗವಾಗಿ ಶುಕ್ಲಾ 60ಕ್ಕೂ ಹೆಚ್ಚು ಪ್ರಯೋಗಗಳನ್ನು ನಡೆಸಲಿದ್ದಾರೆ. ಇವುಗಳಲ್ಲಿ ಒಂದು ಪ್ರಯೋಗ, ಭೂಮಿ ಮತ್ತು ಬಾಹ್ಯಾಕಾಶ ಎರಡೂ ಕಡೆ ಮಧುಮೇಹಿಗಳ ಆರೈಕೆಯ ಭವಿಷ್ಯವನ್ನು ಬದಲಿಸಬಲ್ಲದು.
ಹಲವಾರು ವರ್ಷಗಳ ಕಾಲ, ಇನ್ಸುಲಿನ್ ಮೇಲೆ ಅವಲಂಬನೆ ಹೊಂದಿದ್ದ ವ್ಯಕ್ತಿಗಳಿಗೆ ಬಾಹ್ಯಾಕಾಶಕ್ಕೆ ತೆರಳಲ ಅವಕಾಶ ಇರಲಿಲ್ಲ. ಶೂನ್ಯ ಗುರುತ್ವಾಕರ್ಷಣೆಯಲ್ಲಿ ರಕ್ತದ ಸಕ್ಕರೆ ಮಟ್ಟವನ್ನು ನಿರ್ವಹಿಸುವುದು ಕಷ್ಟಕರ ಎಂಬ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿತ್ತು. ಬಾಹ್ಯಾಕಾಶದಲ್ಲಿ, ದೇಹದ ಕಾರ್ಯ ಚಟುವಟಿಕೆಗಳು ಸಂಪೂರ್ಣವಾಗಿ ಭಿನ್ನವಾಗಿರುತ್ತವೆ. ಆಹಾರ ಜೀರ್ಣವಾಗುವುದು ನಿಧಾನವಾಗುತ್ತದೆ, ಇನ್ಸುಲಿನ್ ಊಹಿಸಲು ಸಾಧ್ಯವಿಲ್ಲದಂತೆ ವರ್ತಿಸುತ್ತದೆ, ಮತ್ತು ಸ್ನಾಯುಗಳು ದುರ್ಬಲಗೊಳ್ಳುವುದರಿಂದ ದೇಹದ ಸಕ್ಕರೆಯ ಬಳಕೆಯೂ ವ್ಯತ್ಯಾಸ ಹೊಂದುತ್ತದೆ. ಸಂಪೂರ್ಣವಾಗಿ ಆರೋಗ್ಯವಂತರಾದ ಗಗನಯಾತ್ರಿಗಳೂ ಸಹ ಹಲವು ಬಾರಿ ಬಾಹ್ಯಾಕಾಶದಲ್ಲಿನ ಒತ್ತಡ, ನಿದ್ದೆಯ ವ್ಯತ್ಯಯ, ಮತ್ತು ಹಾರ್ಮೋನ್ ಬದಲಾವಣೆಗಳಿಂದ ಮಧುಮೇಹ ಪೂರ್ವದ (ಪ್ರಿಡಯಾಬಿಟಿಕ್) ಲಕ್ಷಣಗಳನ್ನು ತೋರುವುದಿದೆ. ಐಎಸ್ಎಸ್‌ನಲ್ಲಿ ಪೂರ್ಣಾವಧಿಯ ವೈದ್ಯರು ಲಭ್ಯವಿಲ್ಲದ್ದರಿಂದ, ಅಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಅಪಾರವಾಗಿ ಹೆಚ್ಚಿದರೆ, ಅಥವಾ ಕಡಿಮೆಯಾದರೆ ಅದು ಅಪಾಯಕಾರಿಯಾಗಿ ಪರಿಣಮಿಸಬಹುದು.