ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಪ್ರಕರಣವೊಂದಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಬಾಂಬೆ ಹೈಕೋರ್ಟ್ ಕೇಸ್ ಖುಲಾಸೆಗೊಳಿಸಿದೆ.
ಯಾವುದೇ ಹುಡುಗ ಅಥವಾ ಹುಡುಗಿ ನಿಮ್ಮ ಬಳಿ ಬಂದು ಐ ಲವ್ ಯು (I love you) ಅಂದ್ರೆ ಅದು ಲೈಂಗಿಕ ದೌರ್ಜನ್ಯವಲ್ಲ. ಬಾಂಬೆ ಹೈಕೋರ್ಟ್ ಈ ಬಗ್ಗೆ ಮಹತ್ವದ ತೀರ್ಪನ್ನು ನೀಡಿದೆ. ಐ ಲವ್ ಯು ಹೇಳುವುದು ಕೇವಲ ಭಾವನೆಗಳ ಅಭಿವ್ಯಕ್ತಿ. ಅದನ್ನು ಲೈಂಗಿಕ ಉದ್ದೇಶವೆಂದು ಪರಿಗಣಿಸಲಾಗುವುದಿಲ್ಲ ಎಂಬ ತೀರ್ಪನ್ನು ಬಾಂಬೆ ಹೈಕೋರ್ಟ್ (Bombay High Court) ನೀಡಿದೆ. 10 ವರ್ಷ ಹಳೆಯ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.
ಇತ್ತೀಚಿನ ದಿನಗಳಲ್ಲಿ ಲೈಂಗಿಕ ದೌರ್ಜನ್ಯದ ಹೆಸರಿನಲ್ಲಿ ಜನರು ಕೋರ್ಟ್ ಮೆಟ್ಟಿಲೇರುವ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಎಲ್ಲವೂ ಲೈಂಗಿಕ ದೌರ್ಜನ್ಯದಲ್ಲಿ ಬರೋದಿಲ್ಲ. ನ್ಯಾಯಾಧೀಶರಾದ ಊರ್ಮಿಳಾ ಜೋಶಿ ಫಾಲ್ಕೆ ಅವರ ಪ್ರಕಾರ, ಯಾವುದೇ ಲೈಂಗಿಕ ಅಪರಾಧಕ್ಕಾಗಿ, ಆರೋಪಿಯು ಅನುಚಿತ ದೈಹಿಕ ಸಂಪರ್ಕ ಬೆಳೆಸಬೇಕು, ಬಲವಂತವಾಗಿ ಬಟ್ಟೆ ತೆಗೆಯುವುದು ಅಥವಾ ಅಶ್ಲೀಲ ಸನ್ನೆ ಅಥವಾ ಕಾಮೆಂಟ್ ನಂತಹ ಕೃತ್ಯಗಳನ್ನು ಮಾಡಬೇಕು. ಅದು ಮಹಿಳೆಯ ಘನತೆಗೆ ಧಕ್ಕೆ ತರುತ್ತದೆ. ಇದನ್ನು ಲೈಂಗಿಕ ದೌರ್ಜನ್ಯವೆಂದು ಪರಿಗಣಿಸಲಾಗುತ್ತದೆ ಎಂದಿದ್ದಾರೆ.
ಏನು ಈ ಪ್ರಕರಣ ? : 2015 ರಲ್ಲಿ, ನಾಗ್ಪುರದ 17 ವರ್ಷದ ಹುಡುಗಿಯೊಬ್ಬಳು 35 ವರ್ಷದ ವ್ಯಕ್ತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಳು. 35 ವರ್ಷದ ವ್ಯಕ್ತಿ, ತನ್ನ ಕೈ ಹಿಡಿದು ತನ್ನ ಹೆಸರನ್ನು ಕೇಳಿದ್ದ. ಅಲ್ಲದೆ ಐ ಲವ್ ಯು ಎಂದು ಹೇಳಿದ್ದ ಎಂದು ಹುಡುಗಿ ಆರೋಪ ಮಾಡಿದ್ದಳು. ಈ ಬಗ್ಗೆ ಸಂತ್ರಸ್ತೆ ತನ್ನ ತಂದೆಗೆ ಮಾಹಿತಿ ನೀಡಿದ್ದಳು. ತಂದೆ ಪೊಲೀಸರಿಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿತ್ತು.
ಎಫ್ ಐಆರ್ ನಲ್ಲಿ ಏನಿದೆ? : 11ನೇ ತರಗತಿಯಲ್ಲಿ ಓದುತ್ತಿದ್ದ ಸಂತ್ರಸ್ತೆ ಕಾಲೇಜಿನಿಂದ ಮನೆಗೆ ವಾಪಸ್ ಆಗವು ವೇಳೆ ಮೋಟಾರ್ ಸೈಕಲ್ನಲ್ಲಿ ಬಂದಿದ್ದ ಆರೋಪಿ, ಸಂತ್ರಸ್ತೆಗೆ ಐ ಲವ್ ಯು ಹೇಳಿದ್ದ. ಅಲ್ಲದೆ ಹೆಸರು ಹೇಳುವಂತೆ ಒತ್ತಾಯಿಸಿದ್ದ. ಘಟನೆಯಿಂದ ಭಯಭೀತಳಾದ ಸಂತ್ರಸ್ತೆ ತನ್ನ ಪಾಲಕರಿಗೆ ಈ ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಳು.
3 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದ ಸೆಷನ್ಸ್ ನ್ಯಾಯಾಲಯ : ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. 2017 ರಲ್ಲಿ, ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದ ಸೆಷನ್ಸ್ ನ್ಯಾಯಾಲಯ, ಆರೋಪಿಗೆ ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ. ಈಗ ಹೈಕೋರ್ಟ್, ಸೆಷನ್ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿದೆ. ಆರೋಪಿಯ ನಿಜವಾದ ಉದ್ದೇಶ ಸಂತ್ರಸ್ತೆ ಜೊತೆ ದೈಹಿಕ ಸಂಪರ್ಕ ಬೆಳೆಸುವುದಾಗಿತ್ತು ಎಂಬುದಕ್ಕೆ ಯಾವುದೆ ಸಾಕ್ಷವಿಲ್ಲ ಎಂದು ಕೋರ್ಟ್ ಹೇಳಿದೆ.
ಐ ಲವ್ ಯು ನಂತಹ ಪದ ದೈಹಿಕ ಉದ್ದೇಶವನ್ನು ಪ್ರತಿಬಿಂಬಿಸುವುದಿಲ್ಲ : ಐ ಲವ್ ಯು ಎಂದ ಮಾತ್ರಕ್ಕೆ ಅದು ಲೈಂಗಿಕ ದೌರ್ಜನ್ಯವಾಗುವುದಿಲ್ಲ. ಇಂಥಹ ಪದಗಳ ಬಳಕೆ ಹಿಂದೆ ಯಾವ ಉದ್ದೇಶವಿದೆ ಎಂಬುದು ಮುಖ್ಯವಾಗುತ್ತದೆ ಎಂದು ಕೋರ್ಟ್ ಹೇಳಿದೆ.ಕೇವಲ ಪ್ರೀತಿಯನ್ನು ವ್ಯಕ್ತಪಡಿಸುವುದು ಅಥವಾ ಭಾವನೆಗಳನ್ನು ವ್ಯಕ್ತಪಡಿಸುವುದು ಕಾನೂನಿನ ದೃಷ್ಟಿಯಲ್ಲಿ ಲೈಂಗಿಕ ಉದ್ದೇಶದ ಅಡಿಯಲ್ಲಿ ಬರುವುದಿಲ್ಲ. ಈ ಪ್ರಕರಣ ಕಿರುಕುಳ ಅಥವಾ ಲೈಂಗಿಕ ಕಿರುಕುಳದ ವರ್ಗಕ್ಕೆ ಬರುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.