ಉದ್ಯೋಗಿಯನ್ನು 28 ವರ್ಷದ ಸ್ವಪ್ನಿಲ್ ನಾಗೇಶ್ ಮಲಿ ಎಂದು ಗುರುತಿಸಲಾಗಿದ್ದು, ಈತ ಮಹಾರಾಷ್ಟ್ರದವನಾಗಿದ್ದಾನೆ. ಆತನ ಫೋನ್‌ನಲ್ಲಿ ವಿವಿಧ ಮಹಿಳಾ ಉದ್ಯೋಗಿಗಳ 30 ಕ್ಕೂ ಹೆಚ್ಚು ಅಶ್ಲೀಲ ವೀಡಿಯೊಗಳು ಕಂಡುಬಂದಿವೆ.
ಬೆಂಗಳೂರು (ಜು.2): ಎಲೆಕ್ಟ್ರಾನಿಕ್ ಸಿಟಿ ಕ್ಯಾಂಪಸ್‌ನಲ್ಲಿರುವ ಇನ್ಫೋಸಿಸ್ ಕಚೇರಿಯಲ್ಲಿ ಮಹಿಳಾ ಉದ್ಯೋಗಿಯೊಬ್ಬಳ ಶೌಚಾಲಯದ ವೀಡಿಯೊಗಳನ್ನು ಚಿತ್ರೀಕರಿಸಿದ್ದಕ್ಕಾಗಿ ಮಾಹಿತಿ ತಂತ್ರಜ್ಞಾನ (ಐಟಿ) ದೈತ್ಯ ಇನ್ಫೋಸಿಸ್ ಉದ್ಯೋಗಿಯನ್ನು ವಜಾಗೊಳಿಸಿದೆ. ಯಾವುದೇ ರೀತಿಯ ಕಿರುಕುಳವನ್ನು ಸಹಿಸುವುದಿಲ್ಲ ಎಂದು ಕಂಪನಿ ಹೇಳಿದೆ.
ಟೆಕ್ಕಿಯನ್ನು 28 ವರ್ಷದ ಸ್ವಪ್ನಿಲ್ ನಾಗೇಶ್ ಮಲಿ ಎಂದು ಗುರುತಿಸಲಾಗಿದ್ದು, ಈತ ಮಹಾರಾಷ್ಟ್ರದವನಾಗಿದ್ದಾನೆ. ಆತನ ಫೋನ್‌ನಲ್ಲಿ ವಿವಿಧ ಮಹಿಳಾ ಉದ್ಯೋಗಿಗಳ 30 ಕ್ಕೂ ಹೆಚ್ಚು ಅಶ್ಲೀಲ ವೀಡಿಯೊಗಳು ಕಂಡುಬಂದಿವೆ.
“ಈ ಘಟನೆಯ ಬಗ್ಗೆ ನಮಗೆ ತಿಳಿದಿದೆ ಮತ್ತು ಕಂಪನಿಯಿಂದ ಹೊರಹಾಕಲಾಗಿರುವ ಉದ್ಯೋಗಿಯ ವಿರುದ್ಧ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಕಾನೂನು ಜಾರಿ ಅಧಿಕಾರಿಗಳೊಂದಿಗೆ ತ್ವರಿತ ದೂರು ನೀಡಲು ನಾವು ದೂರುದಾರರಿಗೆ ಸಹಾಯ ಮಾಡಿದ್ದೇವೆ ಮತ್ತು ಅವರು ಮತ್ತಷ್ಟು ತನಿಖೆ ನಡೆಸಬೇಕಂದಿದ್ದಲ್ಲಿ, ಸಹಕರಿಸುವುದನ್ನು ಮುಂದುವರಿಸುತ್ತೇವೆ. ಇನ್ಫೋಸಿಸ್ ಕಿರುಕುಳ ಮುಕ್ತ ವಾತಾವರಣವನ್ನು ಒದಗಿಸಲು ಬದ್ಧವಾಗಿದೆ ಮತ್ತು ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದೆ. ಕಂಪನಿಯ ನೀತಿ ಸಂಹಿತೆಯ ಯಾವುದೇ ಉಲ್ಲಂಘನೆಗೆ ಸಂಬಂಧಿಸಿದ ಪ್ರತಿಯೊಂದು ದೂರನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ” ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
ಜೂನ್ 30 ರಂದು ಮಹಿಳಾ ಉದ್ಯೋಗಿಯೊಬ್ಬರು ಪಕ್ಕದ ಕ್ಯುಬಿಕಲ್‌ನ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ಪ್ರತಿಬಿಂಬವನ್ನು ಗಮನಿಸಿ, ಯಾರೋ ನಿಜವಾಗಿಯೂ ತನ್ನನ್ನು ರೆಕಾರ್ಡ್ ಮಾಡುತ್ತಿದ್ದಾರೆಂದು ಯೋಚನೆ ಬಂದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ರೆಕಾರ್ಡ್ ಮಾಡುತ್ತಿರುವುದು ಗೊತ್ತಾಗಿ ಆಕೆ ಕಿರುಚಿಕೊಂಡಿದ್ದಳು.ನಂತರ ಸ್ವಪ್ನಿಲ್ ಮಾಲಿ ಅವಳಲ್ಲಿ ಕ್ಷಮೆಯಾಚಿಸಿದ್ದ ಎನ್ನಲಾಗಿದೆ.ಕೂಡಲೇ ಸ್ಥಳಕ್ಕೆ ಧಾವಿಸಿದ ಇತರ ಉದ್ಯೋಗಿಗಳು, ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಹಿಡಿದರು.
ಪ್ರಾಥಮಿಕ ಪರಿಶೀಲನೆಯ ಸಮಯದಲ್ಲಿ, ಎಚ್‌ಆರ್ ಸಿಬ್ಬಂದಿ ದೂರುದಾರರ ಫೋನ್‌ನಲ್ಲಿ ಅವರ ವೀಡಿಯೊ ಕಂಡುಬಂದಿದೆ ಎಂದು ವರದಿಯಾಗಿದೆ. ವೀಡಿಯೊವನ್ನು ಅಳಿಸುವ ಮೊದಲು ಅದರ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲಾಗಿದೆ. ಆರೋಪಿಯ ಫೋನ್‌ನಲ್ಲಿ ವಿವಿಧ ಮಹಿಳಾ ಉದ್ಯೋಗಿಗಳ 30 ಕ್ಕೂ ಹೆಚ್ಚು ವೀಡಿಯೊಗಳು ಸಿಕ್ಕಿದೆ.
ಕಾನೂನು ಕ್ರಮ ಕೈಗೊಂಡ ಮಹಿಳಾ ಉದ್ಯೋಗಿ ಜುಲೈ 1 ರಂದು ಪೊಲೀಸ್ ದೂರು ದಾಖಲಿಸಿದರು. ಆಕೆಯ ಹೇಳಿಕೆಯ ಆಧಾರದ ಮೇಲೆ, ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ಐಪಿಸಿ ಮತ್ತು ಐಟಿ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಮಾಲಿಯನ್ನು ಬಂಧಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ, ‘ಮಂಗಳವಾರ ಸಂಜೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮಹಿಳೆ ವಾಷ್ ರೂಮ್‌ಗೆ ಹೋದಾಗ ಒಬ್ಬ ವ್ಯಕ್ತಿ ಪಕ್ಕದ ವಾಷ್ ರೂಮ್‌ನಿಂದ ರೆಕಾರ್ಡ್ ಮಾಡ್ತಿದ್ದ ಅಂತ ದೂರು ದಾಖಲಾಗಿತ್ತು. ತನ್ನ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡ್ತಿದ್ದ ಅಂತ ದೂರು ನೀಡಿದ್ದರು. ವಿಡಿಯೋ ರೆಕಾರ್ಡ್ ಮಾಡಿದವನನ್ನು ಅರೆಸ್ಟ್ ಮಾಡಿದ್ದೇವೆ. ರೆಕಾರ್ಡ್ ಮಾಡಲು ಬಳಸಿದ್ದ ಮೊಬೈಲ್ ಎಫ್.ಎಸ್‌ಎಲ್ ಗೆ ಕಳುಹಿಸಲಾಗಿದೆ. ಆರೋಪಿ ಮಹಾರಾಷ್ಟ್ರದ ಸಾಂಗ್ಲಿಯವನು. ಮೂರು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ. ಬಿಇ ಮುಗಿಸಿ ಟೆಕ್ನಿಕಲ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದ. ಸದ್ಯ ಆತನ ಬಂಧಿಸಿ ವಿಚಾರಣೆ ಮಾಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.