Headlines

ಆಂಧ್ರ-ಕರ್ನಾಟಕ ಪೊಲೀಸರಿಂದ ಬೆಂಗಳೂರು ಬಿಜೆಪಿ ಮುಖಂಡರ ಹತ್ಯೆ ಕೇಸಿನ ತನಿಖೆ; ಇಬ್ಬರು ಆರೋಪಿಗಳ ಬಂಧನ | Bengaluru Real Estate Leader Veeraswamy Reddy Son Murder Joint Police Probe Sat

ಆಂಧ್ರ-ಕರ್ನಾಟಕ ಪೊಲೀಸರಿಂದ ಬೆಂಗಳೂರು ಬಿಜೆಪಿ ಮುಖಂಡರ ಹತ್ಯೆ ಕೇಸಿನ ತನಿಖೆ; ಇಬ್ಬರು ಆರೋಪಿಗಳ ಬಂಧನ | Bengaluru Real Estate Leader Veeraswamy Reddy Son Murder Joint Police Probe Sat



ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ವೀರಸ್ವಾಮಿ ರೆಡ್ಡಿ ಮತ್ತು ಅವರ ಮಗ ಪ್ರಶಾಂತ್ ರೆಡ್ಡಿ ಆಂಧ್ರಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ವ್ಯಾಪಾರ ವಿಚಾರವಾಗಿ ಕಿಡ್ನಾಪ್ ಮತ್ತು ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಆಂಧ್ರ, ಕರ್ನಾಟಕ ಪೊಲೀಸರು ಜಂಟಿ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು/ಬಾಪಟ್ಲಾ (ಜು.25): ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಬಿಜೆಪಿ ಮುಖಂಡರಾದ ವೀರಸ್ವಾಮಿ ರೆಡ್ಡಿ ಹಾಗೂ ಅವರ ಮಗ ಪ್ರಶಾಂತ್ ರೆಡ್ಡಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಪೊಲೀಸರು ಜಂಟಿ ತನಿಖೆ ಮುಂದುವರೆಸಿದ್ದಾರೆ. ಬೆಂಗಳೂರು ಕಾಡುಗೋಡಿ ಪ್ರದೇಶದ ನಿವಾಸಿಗಳಾದ ವೀರಸ್ವಾಮಿ ಮತ್ತು ಪ್ರಶಾಂತ್ ರೆಡ್ಡಿ, ಕೆಲವು ದಿನಗಳ ಹಿಂದೆ ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಗೆ ತೆರಳಿದ್ದ ನಂತರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಕುರಿತು ನರ್ಸಿಂಹಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ತನಿಖೆಯ ಪ್ರಗತಿ:

ಆಂಧ್ರಪ್ರದೇಶದ ಪೊಲೀಸರು ಮೃತರ ಮೊಬೈಲ್‌ಗಳನ್ನು ಪರಿಶೀಲಿಸಿ, ಮೃತರು ಬಾಪಟ್ಲಾ ಕಡೆಗೆ ಹೊರಡುವ ಮೊದಲು ಯಾರೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಈ ಪೈಕಿ ಪ್ರಮುಖವಾಗಿ ಮಾರ್ವೆಲ್ ರಿಯಲ್ ಎಸ್ಟೇಟ್ ಕಂಪನಿಯ ಮಾಲೀಕರಾದ ಮಾದವ್ ರೆಡ್ಡಿ ಹಾಗೂ ಅನಿಲ್ ರೆಡ್ಡಿ ಮೇಲೆ ಶಂಕೆ ವ್ಯಕ್ತವಾಗಿದೆ.

ವೀರಸ್ವಾಮಿ ಹಾಗೂ ಪ್ರಶಾಂತ್‌ ರೆಡ್ಡಿ ಅವರು ಮಾದವ್ ರೆಡ್ಡಿ ಜೊತೆಗೆ ಬೆಂಗಳೂರಿನ ಕಾಡುಗೋಡಿ ಸುತ್ತಮುತ್ತ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ತೊಡಗಿದ್ದರು. ಕೆಲ ಸಮಯದೊಳಗೆ ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಗಂಭೀರ ಮನಸ್ತಾಪ ಉಂಟಾಗಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ. ವ್ಯವಹಾರಿಕ ವಿಚಾರಕ್ಕೆ ಸಂಬಂಧಿಸಿದಂತೆ, ಮೃತರ ತಂದೆ-ಮಗನ ವಿರುದ್ಧ ನರ್ಸಿಂಹಪುರಂ ಪೊಲೀಸ್ ಠಾಣೆಯಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಆಧಾರದ ಮೇಲೆ ವೀರಸ್ವಾಮಿ ಹಾಗೂ ಪ್ರಶಾಂತ್ ರೆಡ್ಡಿಯವರನ್ನು ಆಂಧ್ರ ಪ್ರದೇಶಕ್ಕೆ ಕರೆಸಿದ್ದು, ನಂತರ ಕಿಡ್ನಾಪ್ ಮಾಡಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಆರೋಪಿಗಳ ಬಂಧನ:

ಸದ್ಯ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಇಬ್ಬರನ್ನು ಆಂಧ್ರ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಇಬ್ಬರು ಪ್ರಮುಖ ಆರೋಪಿಗಳಾದ ಮಾದವ್ ರೆಡ್ಡಿ ಹಾಗೂ ಅನಿಲ್ ರೆಡ್ಡಿ ಪರಾರಿಯಾಗಿದ್ದು, ಅವರನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆದಿದೆ. ಈ ಪ್ರಕರಣದ ಬೆಳವಣಿಗೆಯ ಬಗ್ಗೆ ಬೆಂಗಳೂರು ಕಾಡುಗೋಡಿ ಠಾಣೆ ಪೊಲೀಸರು ಕೂಡ ನಿಕಟ ಸಹಕಾರ ನೀಡುತ್ತಿದ್ದು, ಇಬ್ಬರು ರಾಜ್ಯಗಳ ಪೊಲೀಸರು ಜಂಟಿಯಾಗಿ ತನಿಖೆ ಮುಂದುವರೆಸಿದ್ದಾರೆ.

ಮುಗಿಲು ಮುಟ್ಟಿದ ಆಕ್ರಂದನ:
ಆಂಧ್ರ ಪ್ರದೇಶದಲ್ಲಿ ಕೊಲೆಯಾಗಿದ್ದ ಬಿಜೆಪಿ ಮುಖಂಡರಾದ ವೀರಸ್ವಾಮಿ ರೆಡ್ಡಿ ಹಾಗೂ ಅವರ ಮಗ ಪ್ರಶಾಂತ್ ರೆಡ್ಡಿ ಅವರ ಮೃತದೇಹಗಳನ್ನು ಅವರ ಕುಟುಂಬ ಸದಸ್ಯರಿಗೆ ಒಪ್ಪಿಸಲಾಗಿದೆ. ಇಂದು ಬೆಳಗ್ಗೆ ಇಬ್ಬರ ಮೃತದೇಹ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಕೂಡ ಅಂತಿಮ ದರ್ಶನ ಪಡೆದು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಇನ್ನು ಕುಟುಂಬ ಸದಸ್ಯರು ಮನೆಗೆ ಆಸರೆಯಾಗಿದ್ದ ಇಬ್ಬರನ್ನೂ ದುಷ್ಕರ್ಮಿಗಳು ಕೊಲೆ ಮಾಡಿ ಬೀದಿ ಹೆಣ ಮಾಡಿದ್ದಾರೆ. ನಮ್ಮ ಕುಟುಂಬ ಅಕ್ಷರಶಃ ಆಸರೆಯನ್ನು ಕಳೆದುಕೊಂಡು ಕಂಗಾಲಾಗಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *