ಅಹ್ಮದಾಬಾದ್ ವಿಮಾನ ದುರಂತದಿಂದ ನಾವಿನೂ ಹೊರಬಂದಿಲ್ಲ, ಅಷ್ಟರಲ್ಲಿ ಜಪಾನ್‌ನಲ್ಲಿ ಸಂಭವಿಸುತ್ತಿದ್ದ ಭಯಾನಕ ವಿಮಾನ ದುರಂತವೊಂದು ಕೂದೆಲೆಳೆ ಅಂತರದಿಂದ ತಪ್ಪಿ ಹೋಗಿದೆ. ಸಾವಿನ ಸಮೀಪ ಹೋಗಿ ಬಂದಂತಹ ಪ್ರಯಾಣಿಕರು ಆ ಭಯಾನಕ ಅನುಭವವನ್ನು ವಿವರಿಸಿದ್ದಾರೆ.
ಇನ್ನೇನು ಕೆಲವೇ ಕ್ಷಣಗಳಲ್ಲಿ ನಿಮ್ಮ ಸಾವು ಸಂಭವಿಸಲಿದೆ ಎಂಬುದು ನಿಮಗೆ ಮೊದಲೇ ತಿಳಿದರೆ ಏನ್ ಮಾಡ್ಬಹುದು. ಬಹುಶಃ ನೀವು ಮಾಡಿ ಮುಗಿಸಬೇಕಾದ ಕೆಲಸಗಳಿದ್ದರೆ ಅದನ್ನು ಒಂದು ಪುಸ್ತಕದಲ್ಲಿ ಬರೆದಿಡಬಹುದು, ನಿಮ್ಮ ಪ್ರೀತಿ ಪಾತ್ರರಿಗೆ ಕರೆ ಮಾಡಿ ಕೊನೆಯದಾಗಿ ಮಾತನಾಡಲು ಬಯಸಬಹುದು. ಇಷ್ಟದ ಆಹಾರ ಸೇವಿಸಲು ಬಯಸಬಹುದು, ತುಂಬಾ ಆಸ್ತಿ ಮಾಡಿಟ್ಟರೆ ಆಸ್ತಿಯನ್ನು ಮುಂದೆ ಯಾರು ನಿಭಾಯಿಸುತ್ತಾರೆ ಎಂದು ಬರೆದಿಡಬಹುದು. ಹೀಗೆ ಈ ಪಟ್ಟಿ ಮುಂದುವರೆಯುತ್ತಾ ಹೋಗುತ್ತದೆ. ಆದರೆ ಜಪಾನ್‌ನಲ್ಲಿ ವಿಮಾನವೊಂದು ತುರ್ತು ಲ್ಯಾಂಡಿಂಗ್‌ಗೂ ಮೊದಲು 26 ಸಾವಿರ ಅಡಿಗೆ ಹಠಾತ್ ಕುಸಿದ ಪರಿಣಾಮ ಪ್ರಯಾಣಿಕರಿಗೆ ಇನ್ನೇನು ಸತ್ತೇ ಹೋದೆವು ಎಂಬಂತಹ ಅನುಭವ ಆಗಿದ್ದು, ಸಾವಿಗೆ ಹೆದರಿ ವಿಮಾನದಲ್ಲಿದ್ದ ಪ್ರಯಾಣಿಕರು ವಿಮಾನದಲ್ಲೇ ಕುಳಿತು ಡಿಜಿಟಲ್ ವಿಲ್ ಬರೆದಿದ್ದಾರೆ. ಆದರೆ ಅದೃಷ್ಟವಶಾತ್ ಅವರೆಲ್ಲರೂ ಪಾರಾಗಿ ಬಂದಿದ್ದು, ಈ ಕತೆಯನ್ನು ತಮ್ಮ ಪ್ರೀತಿ ಪಾತ್ರ ಮುಂದೆ ಹೇಳಿಕೊಂಡಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ಅಹ್ಮಾದಾಬಾದ್‌ನಲ್ಲಿ 260 ಜನರನ್ನು ಬಲಿ ಪಡೆದ ಏರ್ ಇಂಡಿಯಾ ಏರ್ ಇಂಡಿಯಾ ಬೋಯಿಂಗ್ 784 ವಿಮಾನ ದುರಂತದಿಂದ ಭಾರತೀಯರಿನ್ನೂ ಹೊರ ಬಂದಿಲ್ಲ, ಹೀಗಿರುವಾಗ ಜಪಾನ್‌ನಲ್ಲಿ ಬೋಯಿಂಗ್ 737 ವಿಮಾನವೊಂದು ದೊಡ್ಡ ಅನಾಹುತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. 26 ಸಾವಿರ ಅಡಿ ಎತ್ತರಕ್ಕೆ ವಿಮಾನ ಹಠಾತ್ ಕುಸಿದ ಪರಿಣಾಮ ವಿಮಾನ ಪ್ರಯಾಣಿಕರೆಲ್ಲರೂ ತಾವು ಕ್ಷಣದಲ್ಲೇ ಸತ್ತೇ ಹೋದೆವು ಎಂದು ಭಯಭೀತರಾಗಿದ್ದಾರೆ. ಆದರೆ ಘಟನೆ ನಡೆದ ಕೆಲ ಕ್ಷಣದಲ್ಲಿ ವಿಮಾನ ತುರ್ತು ಭೂಸ್ಪರ್ಶವಾಗಿದ್ದು ವಿಮಾನದಲ್ಲಿದ್ದ ಎಲ್ಲರೂ ಪಾರಾಗಿ ಬಂದಿದ್ದು, ಆ ಭಯಾನಕ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.
ಕೆಲವರು ತಮ್ಮ ಆಕ್ಸಿಜನ್ ಮಾಸ್ಕ್‌ಗಳು ಬೀಳುವುದು, ವಿಮಾನದಲ್ಲಿರುವ ಸಿಬ್ಬಂದಿ ಕೂಗಾಡುವುದು ಮಾಡಿದರೆ ಇನ್ನು ಕೆಲವು ಪ್ರಯಾಣಿಕರು ತಮ್ಮ ವ್ಹೀಲ್ ಬರೆಯುವುದಲ್ಲದೇ ತಮ್ಮ ಬ್ಯಾಂಕ್ ಪಿನ್‌ಗಳನ್ನು ತಮ್ಮ ಆಪ್ತರೊಂದಿಗೆ ಹಂಚಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅಂದಹಾಗೆ ಶಾಂಘೈನಿಂದ ಟೋಕಿಯೋಗೆ ಹೊರಟಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ಈ ವಿಮಾನವೂ ಶಾಂಘೈನ ಪುಡಾಂಗ್ ವಿಮಾನ ನಿಲ್ದಾಣದಿಂದ (Shanghai Pudong Airport)ಹೊರಟು ನರಿಟಾ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದಾಗ ವಿಮಾನ ಇದ್ದಕ್ಕಿದ್ದಂತೆ 26 ಸಾವಿರ ಅಡಿಗೆ ಕುಸಿದಿದೆ. ಕೂಡಲೇ ವಿಮಾನದ ಕ್ಯಾಪ್ಟನ್ ಹಾಗೂ ಸಿಬ್ಬಂದಿ ತುರ್ತು ಕ್ರಮ ಕೈಗೊಂಡು ವಿಮಾನದ ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ.
191 ಪ್ರಯಾಣಿಕರಿದ್ದ ವಿಮಾನವೂ ಕೇವಲ 10 ನಿಮಿಷದಲ್ಲಿ 36 ಸಾವಿರ ಅಡಿ ಎತ್ತರದಿಂದ 26 ಸಾವಿರ ಅಡಿಗೆ ಕುಸಿದಿದೆ. ಈ ವೇಳೆ ವಿಮಾನ ಪ್ರಯಾಣಿಕರಿಗೆ ಒಂದು ಕ್ಷಣ ಸಾವೇ ಕಣ್ಣಮುಂದೆ ಬಂದಂತಾಗಿದ್ದು, ಕೂಗಾಟ ಕಿರುಚಾಟ ಜೋರಾಗಿದೆ. ಆ ಕ್ಷಣಗಳು ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಯಾಣಿಕರು ತಮಗಾದ ಭಯಾನಕ ಅನುಭವವನ್ನು ಹೇಳಿಕೊಂಡಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಪ್ರಯಾಣಿಕರು ಆಕ್ಸಿಜನ್ ಮಾಸ್ಕ್ ಅನ್ನು ಧರಿಸಿರುವುದನ್ನು ಕಾಣಬಹುದಾಗಿದೆ. ನಂತರ ಈ ವಿಮಾನವನ್ನು ಜಪಾನ್‌ನ ಒಸಾಕಾದಲ್ಲಿರುವ ಕನ್ಸಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ.
ನನಗೆ ಒಂದು ಸಣ್ಣ ಸದ್ದು ಕೇಳಿಸಿತು. ಕೆಲವೇ ಕ್ಷಣಗಳಲ್ಲಿ ವಿಮಾನದಲ್ಲಿದ್ದ ಆಕ್ಸಿಜನ್ ಮಾಸ್ಕ್ ಬಿದ್ದು ಹೋಯ್ತು. ವಿಮಾನದಲ್ಲಿ ತೊಂದರೆ ಇದೆ ಎಂದು ಹೇಳುತ್ತಾ ಗಗನಸಖಿಯೊಬ್ಬರು ಆಕ್ಸಿಜನ್ ಮಾಸ್ಕ್ ಧರಿಸುವಂತೆ ಹೇಳಿದರು ಎಂದು ಒಬ್ಬರು ಪ್ರಯಾಣಿಕರು ತಮಗಾದ ಅನುಭವ ಹೇಳಿಕೊಂಡಿದ್ದಾರೆ.
ವಿಮಾನದ ಈ ಸ್ಥಿತಿ ನೋಡಿ ಇನ್ನು ಸಾವು ಮುಂದಿದೆ ಎಂದೆನಿಸಿ, ಕಣ್ಣೀರಿನೊಂದಿಗೆ ಆತುರಾತುರವಾಗಿ ನಾನು ನನ್ನ ಇನ್ಶೂರೆನ್ಸ್ ವಿವರ, ಬ್ಯಾಂಕ್ ಕಾರ್ಡ್ ವಿವರ, ಪಿನ್‌ಗಳನ್ನು ಹಾಗೂ ವ್ಹೀಲ್ ಬರೆದಿದ್ದಾಗಿ ಹೇಳಿಕೊಂಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ವಿಮಾನಯಾನ ಸಂಸ್ಥೆಯೂ ಪ್ರಯಾಣಿಕರಿಗೆ 15, ಸಾವಿರ ಯೆನ್(104 ಡಾಲರ್) ಪರಿಹಾರದ ಜೊತೆಗೆ ಒಂದು ರಾತ್ರಿಯ ವಾಸ್ತವ್ಯದ ವ್ಯವಸ್ಥೆಯನ್ನು ನೀಡಿದೆ ಎಂದು ವರದಿಯಾಗಿದೆ.
Scroll to load tweet…