ಹಾಸನದಲ್ಲಿ ಮತ್ತೊಬ್ಬ 30 ವರ್ಷದ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಬೇಲೂರು ತಾಲ್ಲೂಕಿನ ಮಾದಿಹಳ್ಳಿ ಗ್ರಾಮದ ರವಿಕುಮಾರ್ ತರಕಾರಿ ತರಲು ಹೋದಾಗ ಹೆಂಡತಿಯ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಹಾಸನ (ಜು.1): ಹಾಸನದಲ್ಲಿ ಮತ್ತೊಬ್ಬ 30 ವರ್ಷದ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆಯಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪುವ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈಗಾಗಲೇ 26ಕ್ಕೂ ಹೆಚ್ಚು ಮರಣಗಳು ಸಂಭವಿಸಿರುವುದು ಆತಂಕ ಮೂಡಿಸಿದೆ. ಬೇಲೂರು ತಾಲ್ಲೂಕಿನಲ್ಲಿ ಮತ್ತೆ ಇಂಥದ್ದೊಂದು ದಾರುಣ ಘಟನೆ ವರದಿಯಾಗಿದೆ.
ಅಕಾಲಿಕ ಸಾವು ಬೆಚ್ಚಿ ಬೀಳಿಸಿದೆ:
ಬೆಳಕಿಗೆ ಬಂದಿರುವ ಹೊಸ ಘಟನೆ, ಬೇಲೂರು ತಾಲ್ಲೂಕಿನ ಮಾದಿಹಳ್ಳಿ ಗ್ರಾಮದ 30 ವರ್ಷದ ರವಿಕುಮಾರ್ ಎಂಬವರದ್ದು. ಅವರು ಪತ್ನಿಯ ತವರು ಮನೆ ಇರುವ ಯಕಶೆಟ್ಟಿಹಳ್ಳಿ ಗ್ರಾಮಕ್ಕೆ ತರಕಾರಿ ತರಲೆಂದು ತೆರಳಿದ್ದ ವೇಳೆ ಹೆಂಡತಿಯ ಮನೆಯಲ್ಲಿಯೇ ಈ ದುರ್ಘಟನೆ ಸಂಭವಿಸಿದೆ. ಇನ್ನು ಮಾವನ ಮನೆಯೊಳಗೆ ಹೋಗುತ್ತಿದ್ದಾಗಲೇ ಹೊಸ್ತಿಲ ಬಳಿ ಕುಸಿದು ಬಿದ್ದರು. ತಕ್ಷಣವೇ ಮನೆಯವರು ಸಹಾಯಕ್ಕೆ ಧಾವಿಸಿ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರಾದರೂ ಅಷ್ಟರಲ್ಲಿ ಸ್ಥಳದಲ್ಲಿಯೇ ಕೊನೆಯುಸಿರೆಳೆದರು.
ಆರೋಗ್ಯವಾಗಿದ್ದ ವ್ಯಕ್ತಿಯ ಹಠಾತ್ ಮರಣ:
ಕಳೆದ 3 ವರ್ಷಗಳ ಹಿಂದಷ್ಟೇ ವಿವಾಹವಾದ ರವಿಕುಮಾರ್ ಯಾವುದೇ ಅನಾರೋಗ್ಯವಿಲ್ಲದೆ, ಸಂಪೂರ್ಣ ಆರೋಗ್ಯದಿಂದ ಇದ್ದ ಯುವಕನಾಗಿದ್ದರು. ಹೀಗಾಗಿ ಅವರ ಹಠಾತ್ ಮರಣ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ಆಘಾತ ಉಂಟುಮಾಡಿದೆ. ಈ ಪ್ರಕರಣದೊಂದಿಗೆ ಜಿಲ್ಲೆಯಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ 26ಕ್ಕೆ ಏರಿದೆ. ಎಲ್ಲಾ ವಯೋಮಾನದವರಲ್ಲೂ, ವಿಶೇಷವಾಗಿ 25-45 ವರ್ಷದ ಯುವಜನತೆಯಲ್ಲೇ ಈ ರೀತಿಯ ಸಾವಿನ ಪ್ರಕರಣಗಳು ವರದಿಯಾಗುತ್ತಿರುವುದು ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.
ಆರೋಗ್ಯ ತಜ್ಞರ ಗಮನಸೆಳೆಯುವ ವಿಚಾರ:
ಯುವಜನತೆಯಲ್ಲಿಯೇ ಹಠಾತ್ ಹೃದಯಾಘಾತಗಳ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ, ಈ ಕುರಿತ ಅಧ್ಯಯನ ಅಗತ್ಯವಾಗಿದೆ. ಡಾ. ರವೀಂದ್ರನಾಥ ನೇತೃತ್ವದ ಸಮಿತಿಯ ವರದಿ ಇನ್ನೂ ಬರುವ ನಿರೀಕ್ಷೆಯಲ್ಲಿದೆ. ಹಾಗಾಗಿ, ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ, ನಿತ್ಯ ತಪಾಸಣೆಗಳು ಮತ್ತು ತೀವ್ರವಾದ ಮಾನಸಿಕ ಒತ್ತಡದಿಂದ ದೂರವಿರುವಂತ ಭರವಸೆ ನೀಡುವ ಆರೋಗ್ಯ ಸಲಹೆಗಳ ಅಗತ್ಯವಿದೆ.
ನಿನ್ನೆ ಒಂದೇ ದಿನ ನಾಲ್ಕು ಸಾವು: ಹಾಸನದಲ್ಲಿ ನಿನ್ನೆ ಸೋಮವಾರ (ಜೂ.30) ಒಂದೇ ದಿನದಲ್ಲಿ ಬರೋಬ್ಬರಿ 4 ಜನರು ಹೃದಯಾಘಾತಕ್ಕೆ ಬಲಿಯಾಗಿದ್ದರು. ಇದೀಗ ಬೇಲೂರಿನಲ್ಲಿ ಮೃತಪಟ್ಟ ರವಿಕುಮಾರ್ ಕೂಡ ನಿನ್ನೆ ಮಧ್ಯಾಹ್ನವೇ ಹೃದಯಾಘಾತಕ್ಕೆ ಬಲಿಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆದ್ದರಿಂದ ನಿನ್ನೆ ಒಂದೇ ದಿನ 5 ಜನರು ಹಾರ್ಟ್ ಅಟ್ಯಾಕ್‌ಗೆ ಬಲಿಯಾದಂತೆ ಆಗಿದೆ. ಇನ್ನು ಇಂದು ಕೂಡ ಹಾಸನದಲ್ಲಿ ಮೂವರು ಹೃದಯಾಘಾತಕ್ಕೆ ಬಲಿ ಆಗಿದ್ದಾರೆ. ಈ ಮೂಲಕ ಹಾಸನದ ಜನತೆಯಲ್ಲಿ ಭಾರೀ ಆತಂಕ ಮನೆ ಮಾಡಿದೆ. ರಾಜ್ಯ ಸರ್ಕಾರ ಕೋವಿಡ್ ಲಸಿಕೆ ಮತ್ತಿತರ ಮೇಲೆ ಆರೋಪ, ಪ್ರತ್ಯಾರೋಪ ಮಾಡುವುದನ್ನು ಬಿಟ್ಟು ಜಿಲ್ಲೆಯ ಜನತೆಯ ಪ್ರಾಣ ಕಾಪಾಡುವಂತಹ ಯಾವುದಾದರೂ ಮಾರ್ಗಗಳನ್ನು ಕೈಗೊಳ್ಳುವುದು ಜರೂರಾಗಿದೆ.