Headlines

ಕಾಂಗ್ರೆಸ್ ಸರ್ಕಾರದ ವಿಫಲತೆಗೆ ರಾಯರಡ್ಡಿ ಹೇಳಿಕೆಯೇ ಸಾಕ್ಷಿ: ಕುಮಾರಸ್ವಾಮಿ ವಾಗ್ದಾಳಿ | Hd Kumaraswamy Blames Congress Failure On Basvaraj Rayareddi Remark Gvd

ಕಾಂಗ್ರೆಸ್ ಸರ್ಕಾರದ ವಿಫಲತೆಗೆ ರಾಯರಡ್ಡಿ ಹೇಳಿಕೆಯೇ ಸಾಕ್ಷಿ: ಕುಮಾರಸ್ವಾಮಿ ವಾಗ್ದಾಳಿ | Hd Kumaraswamy Blames Congress Failure On Basvaraj Rayareddi Remark Gvd



ರಾಜ್ಯದ ಕಾಂಗ್ರೆಸ್‌ ಸರ್ಕಾರದ ದುಸ್ಥಿತಿಗೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರ ಹೇಳಿಕೆಯೇ ಸಾಕ್ಷಿ ಎಂದು ಕೇಂದ್ರ ಭಾರಿ ಕೈಗಾರಿಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರು (ಜು.07): ರಾಜ್ಯದ ಕಾಂಗ್ರೆಸ್‌ ಸರ್ಕಾರದ ದುಸ್ಥಿತಿಗೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರ ಹೇಳಿಕೆಯೇ ಸಾಕ್ಷಿ ಎಂದು ಕೇಂದ್ರ ಭಾರಿ ಕೈಗಾರಿಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಸ್ತೆ ಬೇಕಾದರೆ ಗ್ಯಾರಂಟಿ ಬೇಡ ಎಂದು ಬರೆದುಕೊಡಿ ಎಂಬ ರಾಯರಡ್ಡಿ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಗ್ಯಾರಂಟಿ ಕೊಡಿ ಎಂದು ಜನರೇನೂ ಕೇಳಿರಲಿಲ್ಲ. ಅವರಾಗಿಯೇ ಕೊಟ್ಟು ಅಧಿಕಾರಕ್ಕೆ ಬಂದಿದ್ದಾರೆ ಎಂದರು.

ರಾಯರಡ್ಡಿ ಅವರು ಹಲವಾರು ಬಾರಿ ಇಂತಹ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ಆ ಹೇಳಿಕೆ ಬಗ್ಗೆ ಟೀಕೆ ಬಂದ ಮೇಲೆ ಮತ್ತೆ ಅದಕ್ಕೆ ಮತ್ತೊಂದು ಸ್ಪಷ್ಟನೆ ಕೊಡುತ್ತಾರೆ. ಅಲ್ಲಿಗೆ ಸರ್ಕಾರದ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂಬುದನ್ನು ಅವರ ಹೇಳಿಕೆಯ ಮೂಲಕ ಅರ್ಥ ಮಾಡಿಕೊಳ್ಳಬಹುದು. ಈ ಸರ್ಕಾರದಿಂದ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯಾರೂ ನಿರೀಕ್ಷೆ ಮಾಡಲು ಆಗುವುದಿಲ್ಲ. ಇವರಿಗೆ ರಾಜ್ಯದ ಅಭಿವೃದ್ಧಿ ಬೇಕಿಲ್ಲ ಎಂದು ಕಿಡಿಕಾರಿದರು.

ಹಣಕ್ಕೆ ಕೊರತೆ ಇಲ್ಲ, ಅಭಿವೃದ್ಧಿಗೆ ಕೊರತೆ ಇಲ್ಲ ಎನ್ನುತ್ತೀರಿ. ಯೋಜನೆಗಳನ್ನು ಘೋಷಣೆ ಮಾಡಿದ್ದೀರಿ. ಆದರೆ, ಅದಕ್ಕೆ ಹಣ ನೀಡಿಲ್ಲ. 2024ರ ಬಜೆಟ್‌ನಲ್ಲಿ ಒಂದು ಕಾರ್ಯಕ್ರಮ ಘೋಷಣೆ ಮಾಡಿ ಆ ಕಾರ್ಯಕ್ರಮಕ್ಕೆ ದುಡ್ಡು ಇಲ್ಲ ಅಂತ ರದ್ದು ಮಾಡಿದ್ದಾರೆ. ಹೀಗಾಗಿ, ಈ ಸರ್ಕಾರದಲ್ಲಿ ಅಭಿವೃದ್ಧಿ ಎಂಬುದು ಕನಸಿನ ಮಾತು ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ದ್ವೇಷದ ರಾಜಕಾರಣ: ಕಾಂಗ್ರೆಸ್ ಸರ್ಕಾರ ನನ್ನ ವಿರುದ್ಧ ದ್ವೇಷದ ರಾಜಕಾರಣಿ ಮಾಡುತ್ತಿದೆ. ಸರ್ಕಾರದ ಅಧಿಕಾರ ದುರುಪಯೋಗದ ಬಗ್ಗೆ ದಾಖಲೆಗಳಿರುವುದರಿಂದ ನನ್ನ ವಿರುದ್ಧ ಯುದ್ಧ ಶುರು ಮಾಡಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ಇಡೀ ಸರ್ಕಾರ ಒಬ್ಬ ಕುಮಾರಸ್ವಾಮಿಯನ್ನು ಸೈಲೆಂಟ್ ಮಾಡಲು ಪ್ರಯತ್ನಿಸುತ್ತಿದೆ. ಸರ್ಕಾರದ ಅಕ್ರಮಗಳ ಬಗ್ಗೆ ನನ್ನ ಬಳಿ ಟನ್‌ಗಟ್ಟಲೆ ದಾಖಲೆಗಳಿವೆ. ಯಾವುದೇ ದಾಖಲೆಗಳನ್ನು ಕೊಟ್ಟರು ಇವತ್ತಿನ ತನಿಖಾ ಸಂಸ್ಥೆಗಳ ಮೇಲೆ ನನಗೆ ನಂಬಿಕೆ ಇಲ್ಲ. ನಮ್ಮದು ಬಂದು ಸಂಸ್ಕೃತಿಯಲ್ಲ. ಸರ್ವ ಜನಾಂಗದ ಶಾಂತಿಯ ತೋಟದ ಸಂಸ್ಕೃತಿ ಎಂದು ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದರು.

ಕರ್ನಾಟಕ ಸಿಡಿ ಮತ್ತು ಪೆನ್ ಡ್ರೈವ್ ತಯಾರು ಮಾಡುವ ರಾಜ್ಯವಾಗಿದೆ ಎಂದು ನೇರವಾಗಿ ಆರೋಪಿಸಿದ ಕುಮಾರಸ್ವಾಮಿ, ಹನಿ ಟ್ರ್ಯಾಪ್ ಮತ್ತು ಸುಪಾರಿ ಕುರಿತಂತೆ ಗೃಹ ಮಂತ್ರಿಗಳು ಯಾವ ರೀತಿಯ ತನಿಖೆ ಮಾಡಿಸಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಹಿತಿ ಇಲ್ಲವೇ?, ಯಾರ ಮನೆ ಮೇಲೆ ದಾಳಿ ಮಾಡಿಸಿದರು?. ಆ ಮನೆಯಲ್ಲಿ ಏನೇನು ಸಿಕ್ಕಿತು?. ಯಾಕೆ ಸುಪಾರಿ ಕೊಟ್ಟರು ಎಂದೆಲ್ಲಾ ಅಂಶಗಳ ಬಗ್ಗೆ ತನಿಖೆ ನಡೆಸಿ ಸತ್ಯವನ್ನು ಹೊರಗೆ ತರುತ್ತಾರಾ ?. ಆ ಧೈರ್ಯ ಈ ಸರ್ಕಾರಕ್ಕೆ ಇದೆಯೇ ಎಂದು ಪ್ರಶ್ನಿಸಿದರು. ನಾನು ಕೇವಲ ಪ್ರಚಾರಕ್ಕೆ ದಾಖಲೆ ಕೊಟ್ಟರೂ ನ್ಯಾಯ ದೊರಕುವುದಿಲ್ಲ ಎಂದು ನನಗೆ ಗೊತ್ತಿದೆ. ದಾಖಲೆಗಳು ನನ್ನ ಬಳಿ ಭದ್ರವಾಗಿವೆ. ಒಂದು ಬಾರಿ 5 ವರ್ಷದ ಸ್ವತಂತ್ರ ಸರ್ಕಾರ ಕೊಡಿ.

ಎಲ್ಲರ ಆಡಳಿತವನ್ನು ನೋಡಿದ್ದೀರಿ. ನನಗೂ ಒಂದು ಅವಕಾಶ ಕೊಡಿ. ಎಲ್ಲಾ ಅಕ್ರಮಗಳಿಗೂ ತಾರ್ಕಿಕ ಅಂತ್ಯ ಕಾಣಿಸುತ್ತೇನೆ ಎಂದು ವಿಶ್ವಾಸದಿಂದ ನುಡಿದರು. ನಾನು ಪ್ರಧಾನ ಮಂತ್ರಿಯ ಮಗ. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ. ಈಗ ಕೇಂದ್ರ ಮಂತ್ರಿ. ನಾನು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಲು ಸಾಧ್ಯವೇ. ಕಂದಾಯ ಪ್ರಕರಣದಲ್ಲಿ ಡಿವೈಎಸ್ಪಿ ಅವರನ್ನು ತನಿಖಾಧಿಕಾರಿಯನ್ನಾಗಿ ಮಾಡಿದ್ದು ರಾಜ್ಯದ ಇತಿಹಾಸದಲ್ಲೇ ಇದೇ ಮೊದಲು. ನನಗೆ ಈ ಪರಿಸ್ಥಿತಿಯನ್ನು ತಂದವರು ಇನ್ನೆಷ್ಟು ಮನೆ ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದರು.



Source link

Leave a Reply

Your email address will not be published. Required fields are marked *