ಮುಖ್ಯಮಂತ್ರಿ ಬದಲಾವಣೆ ಕುರಿತ ಹೇಳಿಕೆಗೆ ಶಾಸಕ ಇಕ್ಬಾಲ್ ಹುಸೇನ್‌ಗೆ ಕೆಪಿಸಿಸಿ ಕಾರಣ ಕೇಳಿ ನೋಟಿಸ್. ಡಿ.ಕೆ. ಶಿವಕುಮಾರ್ ನೀಡಿರುವ ನೋಟಿಸ್‌ನಲ್ಲಿ ಒಂದು ವಾರದ ಒಳಗೆ ಸ್ಪಷ್ಟನೆ ನೀಡುವಂತೆ ಸೂಚನೆ.
ಬೆಂಗಳೂರು (ಜು.01): ಕಾಂಗ್ರೆಸ್ ಪಕ್ಷದ ಶಿಸ್ತು ಉಲ್ಲಂಘಿಸಿದ ಆರೋಪದ ಮೇಲೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಹೇಳಿಕೆ ಕುರಿತಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು (ಕೆಪಿಸಿಸಿ) ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಈ ನೋಟಿಸ್ ಅನ್ನು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವತಃ ಜಾರಿಗೊಳಿಸಿದ್ದು, ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ವೇಳೆ ಅವರು ಮುಖ್ಯಮಂತ್ರಿ ಬದಲಾವಣೆಯ ಕುರಿತು ನೀಡಿದ ಹೇಳಿಕೆ ಪಕ್ಷದ ಗೌರವಕ್ಕೆ ಧಕ್ಕೆಯಾಗಲು ಕಾರಣವಾಗಿದೆ ಎಂದು ತೋರಿಸಲಾಗಿದೆ. ಇಕ್ಬಾಲ್ ಹುಸೇನ್ ಮಾಧ್ಯಮಗಳ ಮುಂದೆ ಮುಖ್ಯಮಂತ್ರಿ ಬದಲಾವಣೆ ಕುರಿತಾಗಿ ನೀಡಿದ ಹೇಳಿಕೆ, ಪಕ್ಷದೊಳಗೆ ಗೊಂದಲವನ್ನು ಉಂಟುಮಾಡಿದ್ದು, ಇದು ಮುಜುಗರದ ಸಂಗತಿಯಾಗಿ ಪರಿಗಣಿಸಲಾಗಿದೆ. ಪಕ್ಷದ ಅಧೀನದಲ್ಲಿರುವ ಶಿಸ್ತು ನಿಯಮಗಳನ್ನು ಉಲ್ಲಂಘಿಸಿರುವ ಈ ಹೇಳಿಕೆ ಬಹಿರಂಗವಾಗಿ ಮಾತನಾಡಬಾರದ ಆತಂಕದ ವಿಷಯವೆಂದು ಪಕ್ಷದ ವರಿಷ್ಠರು ಸ್ಪಷ್ಟಪಡಿಸಿದ್ದಾರೆ.
ಒಂದು ವಾರದಲ್ಲಿ ಸ್ಪಷ್ಟನೆ ನೀಡಬೇಕು:
ತಮ್ಮ ಈ ಹೇಳಿಕೆಗಳು ಪಕ್ಷದ ಶಿಸ್ತಿಗೆ ವಿರುದ್ಧವಾಗಿದೆ. ಈ ಅಶಿಸ್ತಿನ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ನೋಟಿಸ್ ತಲುಪಿದ ದಿನದಿಂದ ಒಂದು (7 ದಿನ) ವಾರದೊಳಗೆ ಸಮರ್ಪಕವಾಗಿ ಸಮಜಾಯಿಷಿ ನೀಡಬೇಕು’ ಎಂಬ ಸೂಚನೆಯನ್ನು ನೋಟಿಸ್‍ನಲ್ಲಿ ಒದಗಿಸಲಾಗಿದೆ. ಈ ಮೂಲಕ ಕಾಂಗ್ರೆಸ್ ಹೈಕಮಾಂಡ್ ಪಕ್ಷದೊಳಗಿನ ಶಿಸ್ತು ನಿಯಮಗಳ ಪಾಲನೆಯು ಕಡ್ಡಾಯ ಎಂಬ ಸಂದೇಶ ನೀಡಲು ಮುಂದಾಗಿದೆ. ಪಕ್ಷಕ್ಕೆ ಮುಜುಗರ ಉಂಟಾಗುವಂತಹ ಯಾವುದೇ ಹೇಳಿಕೆಗಳನ್ನು ನೀಡದಂತೆ ಕಠಿಣ ಎಚ್ಚರಿಕೆ ರವಾನಿಸಲಾಗಿದೆ. ಜೊತೆಗೆ, ಎಲ್ಲರೈ ಪಕ್ಷದ ನಿಷ್ಠೆ ಮತ್ತು ಸಾರ್ವಜನಿಕ ಇಮೇಜ್‌ಗೆ ಧಕ್ಕೆಯಾಗದಂತೆ ಜಾಗರೂಕರಾಗಿ ನಡೆದುಕೊಳ್ಳಬೇಕು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.