ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದ ಪಿತೂರಿ ಬಹಿರಂಗಪಡಿಸಲು ಕೇಂದ್ರ ತನಿಖಾ ದಳ ಕೋರಿರುವ ದಾಖಲೆ ಮತ್ತು ವಿಧಿವಿಜ್ಞಾನ ಚಿತ್ರಗಳನ್ನು ಒದಗಿಸುವಂತೆ ಸಿಐಡಿ ಮತ್ತು ಜಾರಿ ನಿರ್ದೇಶನಾಲಯಕ್ಕೆ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.
ಬೆಂಗಳೂರು (ಜು.03): ವಾಲ್ಮೀಕಿ ಅಭಿವೃದ್ಧಿ ನಿಗಮದ (ಕೆಎಂವಿಎಸ್‌ಟಿಡಿಸಿಎಲ್) ಹಣ ದುರ್ಬಳಕೆ ಪ್ರಕರಣದ ಪಿತೂರಿ ಬಹಿರಂಗಪಡಿಸಲು ಕೇಂದ್ರ ತನಿಖಾ ದಳ (ಸಿಬಿಐ) ಕೋರಿರುವ ದಾಖಲೆ ಮತ್ತು ವಿಧಿವಿಜ್ಞಾನ ಚಿತ್ರಗಳನ್ನು ಒದಗಿಸುವಂತೆ ಸಿಐಡಿ ಮತ್ತು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ. ವಾಲ್ಮೀಕಿ ನಿಗಮದ ಹಗರಣ ಸಂಬಂಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತಿತರರು ಸಲ್ಲಿಸಿದ್ದ ತಕರಾರು ಅರ್ಜಿ ಭಾಗವಾಗಿ ಸಿಬಿಐ ಮಧ್ಯಂತರ ಅರ್ಜಿ ಸಲ್ಲಿಸಿ, ಪ್ರಕರಣದ ಹಿಂದಿನ ಒಳ ಸುಳಿ ಭೇದಿಸಲು ದಾಖಲೆಗಳ ಅಗತ್ಯವಿದ್ದು, ಅದನ್ನು ಒದಗಿಸುವಂತೆ ಸಿಐಡಿ ಹಾಗೂ ಇ.ಡಿಗೆ ನಿರ್ದೇಶಿಸಬೇಕು ಎಂದು ಕೋರಿತ್ತು.
ಈ ಕೋರಿಕೆಗೆ ಪೂರಕವಾಗಿ ತಾನು ನಡೆಸಿದ ತನಿಖೆಯ ಸಂದರ್ಭದಲ್ಲಿ ಬೆಂಗಳೂರಿನ ಕೆನರಾ ಬ್ಯಾಂಕ್‌ನಲ್ಲಿನ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯ (ಕೆಜಿಟಿಟಿಐ) 95 ಲಕ್ಷ ರು. ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ 2.17 ಕೋಟಿ ಹಣವನ್ನು ವಾಲ್ಮೀಕಿ ನಿಗಮದ ಬೆಂಗಳೂರಿನ ಸಿದ್ದಯ್ಯ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಮೂಲಕ ಮಾಜಿ ಸಚಿವ ಬಿ.ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್ ಖಾತೆಗೆ ವರ್ಗಾವಣೆಯಾಗಿದೆ. ಇದರಿಂದ ಕೆಜಿಟಿಟಿಐ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳ ಪಾತ್ರದ ಬಗ್ಗೆ ತನಿಖೆ ನಡೆಸಲು ಅನುಮತಿಸಬೇಕು ಎಂದು ವಿವರಿಸಿತ್ತು.
ಸಿಬಿಐಯ ಈ ಮನವಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಇತರರು ಭಾಗಿಯಾಗಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ. 89.63 ಕೋಟಿಯನ್ನು ವಾಲ್ಮೀಕಿ ನಿಗಮದಿಂದ 700 ಫಲಾನುಭವಿಗಳ ಖಾತೆಗೆ ವರ್ಗಾಯಿಸಿ, ದಾಖಲೆಗಳನ್ನು ತಿರುಚಿ, ಅದನ್ನು ಅಲ್ಲಿಂದ ಬೇರೆ ಖಾತೆಗಳಿಗೆ ವರ್ಗಾಯಿಸಲಾಗಿದೆ. ಐಷಾರಾಮಿ ಕಾರು ಖರೀದಿಸಲು ಬಳಕೆ ಮಾಡಲಾಗಿದೆ. ಇದು ಬೃಹತ್ ಹಗರಣವಾಗಿದ್ದು, ದೊಡ್ಡ ಪಿತೂರಿ ನಡೆದಿದೆ. ಇದನ್ನು ಬಯಲಿಗೆ ಎಳೆಯಲು ಸಮಗ್ರ ತನಿಖೆಯ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೆ, ಪಿತೂರಿ ಬಯಲಿಗೆಳೆಯಲು ಮತ್ತು ಸಮಗ್ರವಾದ ತನಿಖೆ ನಡೆಸುವ ದೃಷ್ಟಿಯಿಂದ, ಸಿಐಡಿ ಹಾಗೂ ಇ.ಡಿಯು ತನ್ನ ತನಿಖೆ ವೇಳೆ ಸಂಗ್ರಹಿಸಿರುವ ಡಿಜಿಟಲ್ ಸಾಧನಗಳ ವಿಧಿವಿಜ್ಞಾನ ಚಿತ್ರಗಳುಗಳನ್ನು ಸಿಬಿಐಗೆ ನೀಡಬೇಕು ಎಂದು ಪೀಠ ಆದೇಶದಲ್ಲಿ ನಿರ್ದೇಶಿಸಿದೆ. ವಾಲ್ಮೀಕಿ ನಿಗಮದ ಹಣವನ್ನು ಅಕ್ರಮವಾಗಿ ವರ್ಗಾಯಿಸಿದ ಪ್ರಕರಣ ಸಂಬಂಧ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಿರುದ್ಧ ದಾಖಿಲಿಸಿರುವ ಎಫ್‌ಐಆರ್ ಕುರಿತ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಲು ಸಿಬಿಐಗೆ ನಿರ್ದೇಶಿಸಬೇಕು ಎಂದು ಕೋರಿ ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಬಿಜೆಪಿ ನಾಯಕರಾದ ರಮೇಶ ಜಾರಕಿಹೊಳಿ, ಮಾಜಿ ಶಾಸಕರಾದ ಅರವಿಂದ ಲಿಂಬಾವಳಿ ಮತ್ತು ಕುಮಾರ್ ಬಂಗಾರಪ್ಪ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.