ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಎಂದು ಹೇಳಿದ್ಯಾರು?: ಬಿ.ವೈ.ವಿಜಯೇಂದ್ರ | Bjp State President Post Not Vacant Says By Vijayendra Gvd

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಎಂದು ಹೇಳಿದ್ಯಾರು?: ಬಿ.ವೈ.ವಿಜಯೇಂದ್ರ | Bjp State President Post Not Vacant Says By Vijayendra Gvd



ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇದೆ ಎಂಬುದಾಗಿ ಯಾರು ಹೇಳಿದ್ದಾರೆ ಎಂದು ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಬೆಂಗಳೂರು (ಜು.03): ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇದೆ ಎಂಬುದಾಗಿ ಯಾರು ಹೇಳಿದ್ದಾರೆ ಎಂದು ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ನಾನು ರಾಜ್ಯಾಧ್ಯಕ್ಷನಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದೇನೆ. ಒಂದು ದಿನವೂ ಸುಮ್ಮನೆ ಕುಳಿತಿಲ್ಲ. ಅದು ಪಕ್ಷದ ಹೈಕಮಾಂಡ್‌ಗೂ ಗೊತ್ತಿದೆ. ನನಗೂ ಪ್ರಮಾಣಪತ್ರ ನೀಡಿದ್ದಾರೆ. ಕಾರ್ಯಕರ್ತರಿಗೂ ನನ್ನ ಕೆಲಸದ ಬಗ್ಗೆ ಸಮಾಧಾನ ಇದೆ’ ಎಂದು ಪ್ರತಿಪಾದಿಸಿದರು.

ಪಕ್ಷದ ಕೆಲವು ಹಿರಿಯ ನಾಯಕರು ಬದಲಾವಣೆ ಬಯಸಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ‘ಹಿರಿಯರು ಅಪೇಕ್ಷೆ ಪಡುತ್ತಿರುವುದು ತಪ್ಪಲ್ಲ. ಪಕ್ಷದ ಹೈಕಮಾಂಡ್ ಎಲ್ಲವನ್ನೂ ನೋಡಿ ತೀರ್ಮಾನ ಮಾಡುತ್ತದೆ. ಪಕ್ಷದ ಹೈಕಮಾಂಡ್ ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದು ಪಕ್ಷ ಸಂಘಟನೆಗಾಗಿ ಹೊರತು ಮುಖ್ಯಮಂತ್ರಿ ಆಗಲಿ ಎಂದಲ್ಲ. ನಾನು ನನ್ನ ಕೆಲಸ ಮಾಡಿಕೊಂಡು ಹೊರಟಿದ್ದೇನೆ” ’ ಎಂದು ಹೇಳಿದರು.

ಬೀದಿಗಳಲ್ಲಿ ಹೋರಾಟ: ಸುಹಾಸ್‌ ಶೆಟ್ಟಿ ಹತ್ಯೆ ಬಳಿಕ ದ.ಕ. ಪೊಲೀಸರು ತಡರಾತ್ರಿ ಹಿಂದೂ ಸಂಘಟನೆ ಕಾರ್ಯಕರ್ತರ ಮನೆಗಳಿಗೆ ತೆರಳಿ ತೊಂದರೆ ನೀಡುವುದನ್ನು ತಕ್ಷಣ ನಿಲ್ಲಿಸದಿದ್ದರೆ ಪಶ್ಚಾತ್ತಾಪ ಪಡಬೇಕಾದೀತು. ಇದೇ ವರ್ತನೆ ಮುಂದುವರಿಸಿದರೆ ಆಂದೋಲನ ರೂಪದಲ್ಲಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ. ದ.ಕ.ದಲ್ಲಿ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ನಿಯೋಗದೊಂದಿಗೆ ಜಿಲ್ಲೆಗೆ ಭೇಟಿ ನೀಡಿದ ಅವರು ಅಧಿಕಾರಿಗಳು, ಕಾರ್ಯಕರ್ತರ ಜತೆ ಪ್ರತ್ಯೇಕ ಮಾತುಕತೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ಪೊಲೀಸರು ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದು ಗೂಂಡಾ ವರ್ತನೆ ತೋರಿಸುತ್ತಿದ್ದಾರೆ. ವಿಶ್ವ ಹಿಂದೂ ಪರಿಷತ್‌, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಮನೆಗಳಿಗೆ ತಡರಾತ್ರಿ ಬಾಗಿಲು ತಟ್ಟಿ ಫೋಟೊ ತೆಗೆದು ಬೆದರಿಸುತ್ತಿದ್ದಾರೆ. ಇದನ್ನು ನಿಲ್ಲಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ. ಬೀದಿ ಬೀದಿಗಳಲ್ಲಿ ಹೋರಾಟ ಮಾಡಲಿದ್ದೇವೆ. ಪರಿಸ್ಥಿತಿಯನ್ನು ಅಲ್ಲಿಯವರೆಗೆ ತೆಗೆದುಕೊಂಡು ಹೋಗಲು ಬಿಡಬೇಡಿ ಎಂದು ಹೇಳಿದರು.

ಹಿಂದೂ ಕಾರ್ಯಕರ್ತರ ಟಾರ್ಗೆಟ್‌: ಕೆಲ ಸಮಯದ ಹಿಂದೆ ಕಾಂಗ್ರೆಸ್ ಸರ್ಕಾರ ಕೋಮು ನಿಗ್ರಹ ದಳ ರಚನೆ ಮಾಡಿದ ನಂತರ ಪೊಲೀಸರ ಗೂಂಡಾ ವರ್ತನೆ ಜಾಸ್ತಿಯಾಗಿದೆ ಎಂದು ಆರೋಪಿಸಿದ ವಿಜಯೇಂದ್ರ, ಕೋಮು ನಿಗ್ರಹ ದಳ ಇರುವುದೇ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್‌ ಮಾಡಲು. ಕರಾವಳಿಯು ಬಿಜೆಪಿ, ಹಿಂದೂ ಕಾರ್ಯಕರ್ತರ ಭದ್ರಕೋಟೆಯಾಗಿದೆ. ಅದಕ್ಕಾಗಿಯೇ ನಮ್ಮ ಕಾರ್ಯಕರ್ತರನ್ನು ಟಾರ್ಗೆಟ್‌ ಮಾಡುವ ಷಡ್ಯಂತ್ರವನ್ನು ಕಾಂಗ್ರೆಸ್‌ ಸರ್ಕಾರ ರಚಿಸಿದೆ ಎಂದು ದೂರಿದರು. ರಾಜ್ಯದಲ್ಲಿ 800ಕ್ಕೂ ಅಧಿಕ ರೇಪ್‌ ಪ್ರಕರಣಗಳು ನಡೆದಿವೆ.

ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ದ.ಕ.ದಲ್ಲಿ ಅಲ್ಪಸಂಖ್ಯಾತರನ್ನು ಖುಷಿಪಡಿಸಲು ಹಿಂದೂಗಳಿಗೆ ತೊಂದರೆ ನೀಡುವುದು ಎಷ್ಟರಮಟ್ಟಿಗೆ ಸರಿ? ಹೀಗೇ ಮುಂದುವರಿದು ಕಾನೂನು ಸುವ್ಯವಸ್ಥೆ ಕುಸಿದುಬಿಟ್ಟರೆ ರಾಜ್ಯ ಸರ್ಕಾರವೇ ಅದರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು. ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧ ಎಫ್‌ಐಆರ್‌ ದಾಖಲು ಮಾಡುತ್ತಾರೆ. ಆದರೆ ರಾಜ್ಯಪಾಲರ ವಿರುದ್ಧ ಮಾತನಾಡಿದ ಎಂಎಲ್ಸಿ ಐವನ್‌ ಡಿಸೋಜ ಮೇಲೆ ಏಕೆ ಕ್ರಮ ಇಲ್ಲ? ಇಲ್ಲಿನ ಪೊಲೀಸರು ರಾಜ್ಯ ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು.



Source link

Leave a Reply

Your email address will not be published. Required fields are marked *