ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಒಟ್ಟು 10 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು, ಒಮ್ಮೆಲೆ ಇಷ್ಟು ಪ್ರಮಾಣದ ಪ್ರಶಸ್ತಿ ಪಡೆದ ವಿಮಾನ ನಿಲ್ದಾಣಗಳ ಪೈಕಿ ಒಂದಾಗಿದೆ.
ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್)ವು ತನ್ನ ದೇಶೀಯ ಹಾಗೂ ಅಂತಾರಾಷ್ಟ್ರೀಯ ಲೌಂಜ್‌ಗಳಲ್ಲಿ ಚಾಲ್ತಿಗೆ ತಂದಿರುವ ಆಹಾರ, ಪಾನೀಯ (ಎಫ್‌ಎಬಿ) ಹಾಗೂ ಆತಿಥ್ಯ ಕ್ಷೇತ್ರದಲ್ಲಿ ಜಾಗತಿಕವಾಗಿ ಒಟ್ಟು 10 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು, ಒಮ್ಮೆಲೆ ಇಷ್ಟು ಪ್ರಮಾಣದ ಪ್ರಶಸ್ತಿ ಪಡೆದ ವಿಮಾನ ನಿಲ್ದಾಣಗಳ ಪೈಕಿ ಒಂದಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಕೆಐಎಎಲ್ ಮುಖ್ಯ ವಾಣಿಜ್ಯ ಅಧಿಕಾರಿ ಕೆನ್ನೆತ್ ಗುಲ್ಡ್‌ಬ್ಜೆರ್ಗ್, ಇತ್ತೀಚೆಗೆ ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆದ ‘ವಿಮಾನ ನಿಲ್ದಾಣ ಆಹಾರ, ಪಾನೀಯ ಹಾಗೂ ಆತಿಥ್ಯ ಕ್ಷೇತ್ರದ ಸಮ್ಮೇಳನ- 2025 ರ ಪ್ರಶಸ್ತಿ ಸಮಾರಂಭ’ದಲ್ಲಿ ಈ ಪ್ರಶಸ್ತಿಗಳನ್ನು ಸ್ವೀಕರಿಸಲಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದ ಲೌಂಜ್ ಮತ್ತು ರೆಸ್ಟೋರೆಂಟ್‌ಗಳು ಭಾರತದಲ್ಲಿ ಮಾತ್ರವಲ್ಲದೆ, ಜಾಗತಿಕವಾಗಿಯೂ ತನ್ನ ಶ್ರೇಷ್ಠತೆಯನ್ನು ಸಾಬೀತುಪಡಿಸುತ್ತಿವೆ. ಅದರಲ್ಲೂ ಪ್ರಮುಖವಾಗಿ 080 ಲೌಂಜ್ ಒಟ್ಟು ಏಳು ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದೆ ಎಂದು ತಿಳಿಸಿದ್ದಾರೆ.
ಟರ್ಮಿನಲ್ 2 ರಲ್ಲಿರುವ 080 ಲೌಂಜ್ ‘ಪ್ರಾದೇಶಿಕ ಮತ್ತು ಜಾಗತಿಕ ವಿಭಾಗದಲ್ಲಿ ವರ್ಷದ ಅತ್ಯುತ್ತಮ ಲೌಂಜ್’ ಪ್ರಶಸ್ತಿಯ ಜೊತೆಗೆ, ಪ್ರಾದೇಶಿಕ ಮತ್ತು ಜಾಗತಿಕ ವಿಭಾಗದಲ್ಲಿ ‘ಏರ್‌ಪೋರ್ಟ್ ಎಫ್ ಅಂಡ್ ಬಿ ಆಫರ್ ಆಫ್ ದಿ ಇಯರ್ – ಸೆನ್ಸ್ ಆಫ್ ಪ್ಲೇಸ್’ ಪ್ರಶಸ್ತಿಗೆ ಭಾಜನವಾಗಿದೆ. ಟಿ2 ನಲ್ಲಿರುವ 080 ಪ್ರಾದೇಶಿಕ ಲೌಂಜ್‌ನೊಳಗಿನ ಸಿಗ್ನೇಚರ್ ರೆಸ್ಟೋರೆಂಟ್ ಕಿಲಾ, ಗಮನಾರ್ಹ ವಾಸ್ತುಶಿಲ್ಪ ಮತ್ತು ವಾತಾವರಣಕ್ಕಾಗಿ ‘ಪ್ರಾದೇಶಿಕ ವಿಭಾಗದಲ್ಲಿ ಅತ್ಯುತ್ತಮ ರೆಸ್ಟೋರೆಂಟ್ ವಿನ್ಯಾಸ’ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಜೊತೆಗೆ, ಟರ್ಮಿನಲ್ 1 ರಲ್ಲಿರುವ 080 ದೇಶೀಯ ಲೌಂಜ್ ಪ್ರಾದೇಶಿಕ ಮತ್ತು ಜಾಗತಿಕ ವಿಭಾಗದಲ್ಲಿ ‘ವರ್ಷದ ವಿಮಾನ ನಿಲ್ದಾಣ ಲೌಂಜ್ ಓಪನಿಂಗ್’ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ವಿವರಿಸಿದ್ದಾರೆ.