ಸೋಲಿಗ ಬಾಲಕಿಗೆ 12 ವರ್ಷವಾದ್ರೂ ಸಿಗದ ಆಧಾರ್ ಕಾರ್ಡ್! ದಿನಾ 30 ರೂ ತೆತ್ತು ಬಸ್‌ಲ್ಲಿ ಶಾಲೆಗೆ ಹೋಗೋ ಬಾಲಕಿ | Chamarajanagar 12 Year Old Soliga Girl Denied Aadhaar In Karnataka Gow

ಸೋಲಿಗ ಬಾಲಕಿಗೆ 12 ವರ್ಷವಾದ್ರೂ ಸಿಗದ ಆಧಾರ್ ಕಾರ್ಡ್! ದಿನಾ 30 ರೂ ತೆತ್ತು ಬಸ್‌ಲ್ಲಿ ಶಾಲೆಗೆ ಹೋಗೋ ಬಾಲಕಿ | Chamarajanagar 12 Year Old Soliga Girl Denied Aadhaar In Karnataka Gow



ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೌಳೇಹಳ್ಳದ 12 ವರ್ಷದ ಬಾಲಕಿಗೆ ಆಧಾರ್ ಕಾರ್ಡ್ ಇಲ್ಲದ ಕಾರಣ ಸರ್ಕಾರಿ ಸೌಲಭ್ಯಗಳಿಂದ ವಂಚಿತಳಾಗಿದ್ದಾಳೆ. ಶಾಲೆಗೆ ಹೋಗಲು ದಿನಾ 30 ರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಿಗದೆ ತೊಂದರೆ ಅನುಭವಿಸುತ್ತಿದ್ದಾಳೆ.

ವರದಿ: ಪುಟ್ಟರಾಜು. ಆರ್. ಸಿ ಏಷಿಯಾನೆಟ್ ಸುವರ್ಣ ನ್ಯೂಸ್

ಚಾಮರಾಜನಗರ: ಆಕೆ ಸೋಲಿಗ ಬಾಲಕಿ, 12 ವರ್ಷವಾಗಿದೆ ಆದ್ರೆ ಇಲ್ಲಿಯವರೆಗೂ ಆಧಾರ್ ಕಾರ್ಡ್ ಸಿಕ್ಕಿಲ್ಲ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಉಚಿತ ಬಸ್ ಪ್ರಯಾಣ,ಬ್ಯಾಂಕ್ ಖಾತೆ ತೆರೆಯಲು ಸಾಧ್ಯವಾಗುತ್ತಿಲ್ಲ. ಇದ್ರಿಂದ ಯಾವುದೇ ಸರ್ಕಾರಿ ಸವಲತ್ತು ಸಿಕ್ತಿಲ್ಲ. ದಿನಾ ಶಾಲೆಗೆ ಹೋಗಲೂ 30 ರೂ ಬಸ್ ಚಾರ್ಜ್ ಕೊಟ್ಟು ಓಡಾಡುವ ದುಸ್ಥಿತಿಯಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

ಈ ಸೋಲಿಗ ಬಾಲಕಿಗೆ 12 ವರ್ಷವಾದರೂ ಕೂಡ ಇನ್ನೂ ಆಧಾರ್ ಕಾರ್ಡ್ ಸಿಕ್ಕಿಲ್ಲ. ಇದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೌಳೇಹಳ್ಳ ಡ್ಯಾಂ ನಿವಾಸಿ ಎಸ್ ಚೈತ್ರ ದುಸ್ಥಿತಿಯಾಗಿದೆ. ಬಾಲಕಿ ಚೈತ್ರ ಲೊಕ್ಕನಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ನಿತ್ಯವೂ ಕೂಡ ಶಾಲೆಗೆ ಕೌಳೇಹಳ್ಳದಿಂದ ಲೊಕ್ಕನಹಳ್ಳಿಗೆ ಸಂಚರಿಸಬೇಕಿದೆ . ಇದಕ್ಕಾಗಿ ದಿನಾ 30 ರೂಪಾಯಿ ಖರ್ಚು ಮಾಡುವ ಪರಿಸ್ಥಿತಿ ಇದೆ. ಪುಟ್ಟ ಹೆಣ್ಣು ಮಗುವಿನಿಂದ ಹಿಡಿದು ಎಲ್ಲಾ ವಯಸ್ಸಿನ ಮಹಿಳೆಯರಿಗೂ ಶಕ್ತಿ ಯೋಜನೆಯಡಿ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಇದೆ. ಆದರೆ ಈ ಸೋಲಿಗ ಬಾಲಕಿಗೆ ಮಾತ್ರ ಉಚಿತ ಪ್ರಯಾಣದ ಭಾಗ್ಯವಿಲ್ಲ. ದಿನಾ 30 ರೂಪಾಯಿ ಬಸ್ ಚಾರ್ಜ್ ತೆತ್ತು ಶಾಲೆಗೆ ಹೋಗಿ ಬರುವ ಪರಿಸ್ಥಿತಿ ಇದೆ. ಮೊದಲೇ ಬಡ ವಿಧ್ಯಾರ್ಥಿ ಉಚಿತ ಸೌಲಭ್ಯದಿಂದ ವಂಚಿತವಾಗಿದ್ದೇನೆ ಅಂತಾ ಅಳಲು ತೋಡಿಕೊಳ್ಳುತ್ತಿದ್ದಾರೆ..

ಇನ್ನೂ ಜಾತಿ ಹಾಗು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಬ್ಯಾಂಕ್ ಖಾತೆ, ಬಸ್ ಪ್ರಯಾಣ ಎಲ್ಲದಕ್ಕೂ ಆಧಾರ್ ಕಾರ್ಡ್ ಬೇಕೇಬೇಕು. ಆದರೆ ಆಧಾರ್ ಕಾರ್ಡ್ ಇಲ್ಲದೆ ಎಲ್ಲ ಸೌಲಭ್ಯಗಳಿಂದ ವಂಚಿತಳಾಗಿತ್ತಿದ್ದಾಳೆ. ಮನೆಯಲ್ಲೇ ಜನಿಸಿದ್ದರಿಂದ ಬರ್ತ್ ಸರ್ಟಿಫಿಕೇಟ್ ಸಿಕ್ಕಿಲ್ಲ. ಬರ್ತ್ ಸರ್ಟಿಫಿಕೇಟ್ ಇಲ್ಲದೆ ಆಧಾರ್ ಕಾರ್ಡ್ ಕೊಡ್ತಿಲ್ಲ. ತಂದೆ ಇಲ್ಲ, ತಾಯಿ ಮಹದೇವಮ್ಮ ಕೂಲಿ ಕೆಲಸ ಮಾಡ್ತಿದ್ದಾಳೆ. ನಿತ್ಯ ಕೂಲಿ ಮಾಡಿ ಮಗಳಿಗೆ ಬಸ್ ಚಾರ್ಜ್ ಕೊಟ್ಟು ಕಳಿಸಬೇಕಾಗಿದೆ ಕೂಡಲೇ ಆಧಾರ್ ಕಾರ್ಡ್ ಸೌಲಭ್ಯ ಕಲ್ಪಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಒಟ್ನಲ್ಲಿ ಆಧಾರ್ ಕಡ್ಡಾಯ ಮಾಡಿ ಹಲವು ವರ್ಷಗಳಾಗಿದೆ. ಈ ಬಾಲಕಿ ಚೈತ್ರ ಮನೆಯಲ್ಲಿ ಹುಟ್ಟಿದ್ದರಿಂದ ಇನ್ನೂ ಆಧಾರ್ ಸಿಕ್ಕಿಲ್ಲ, ಇದ್ರಿಂದ ಸರ್ಕಾರದ ಎಲ್ಲಾ ಸೌಲಭ್ಯದಿಂದ ವಂಚಿತಳಾಗಿದ್ದಾಳೆ. ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತು ಆಧಾರ್ ಸೌಲಭ್ಯ ಕಲ್ಪಿಸ್ತಾರಾ ಅನ್ನೋದ್ನ ಕಾದು ನೋಡಬೇಕಾಗಿದೆ.



Source link

Leave a Reply

Your email address will not be published. Required fields are marked *