ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಒತ್ತು: ಕಾರ್ಮಿಕ ಸಚಿವ ಸಂತೋಷ್ ಲಾಡ್ | Social Security Unorganized Workers Minister Santosh Lad Gvd

ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಒತ್ತು: ಕಾರ್ಮಿಕ ಸಚಿವ ಸಂತೋಷ್ ಲಾಡ್ | Social Security Unorganized Workers Minister Santosh Lad Gvd



ಕರ್ನಾಟಕ ಸರ್ಕಾರ ರಾಜ್ಯದ ಗಿಗ್ ಕಾರ್ಮಿಕರಿಗಾಗಿ (ಸ್ವತಂತ್ರ ಉದ್ಯೋಗಿ) ವಿಶೇಷ ವಿಮಾ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ದೊಡ್ಡಬಳ್ಳಾಪುರ (ಜು.11): ರಾಜ್ಯ ಸರ್ಕಾರ ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಅನುಷ್ಠಾನಗೊಳಿಸಿದ್ದು ಈ ಯೋಜನೆಯಿಂದ 23 ಅಸಂಘಟಿತ ವರ್ಗದ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಕಾರ್ಮಿಕ ಇಲಾಖೆಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಪಂ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಓಬದೇನಹಳ್ಳಿಯಲ್ಲಿ ನಿರ್ಮಿಸಿರುವ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಚಯಗಳ ಉದ್ಘಾಟನೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಸಂಘಟಿತ ವರ್ಗಗಳ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 91 ಅಸಂಘಟಿತ ವಲಯಗಳನ್ನು ಗುರ್ತಿಸಲಾಗಿದ್ದು ಕಾರ್ಮಿಕ ಇಲಾಖೆ ಮಂಡಳಿಗಳ ಮೂಲಕ ಹಲವು ಸೌಲಭ್ಯ ಒದಗಿಸುತ್ತಿದ್ದೇವೆ. ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ, ಹೆರಿಗೆ ಸೌಲಭ್ಯ, ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಸಹಾಯಧನ, ವೈದ್ಯಕೀಯ, ಅಪಘಾತ ಮದುವೆ ಸಹಾಯಧನ, ತಾಯಿ ಮಗು ಸಹಾಯ ಹಸ್ತ ಮುಂತಾದ ಸೌಲಭ್ಯ ನೀಡಲಾಗುತ್ತಿದೆ ಎಂದರು. ರಾಜ್ಯ ಅಸಂಘಟಿತ ಸಾಮಾಜಿಕ ಭದ್ರತಾ ಮಂಡಳಿಯಡಿ 23 ಅಸಂಘಟಿತ ಕಾರ್ಮಿಕ ವರ್ಗಗಳ ಕಾರ್ಮಿಕರಿಗೆ ಉಚಿತವಾಗಿ ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ. ಅಸಂಘಟಿತ ವಲಯದ ಗಿಗ್ ಕಾರ್ಮಿಕರು, ಸಿನಿಮಾ ಮತ್ತು ಸಾಂಸ್ಕೃತಿಕ ಕಾರ್ಯಕರ್ತರು, ಪತ್ರಿಕಾ ವಿತರಕ ಕಾರ್ಮಿಕರು ಹಾಗೂ ಖಾಸಗಿ ವಾಣಿಜ್ಯ ಸಾರಿಗೆ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ಪ್ರತ್ಯೇಕ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆ: ಕರ್ನಾಟಕ ಸರ್ಕಾರ ರಾಜ್ಯದ ಗಿಗ್ ಕಾರ್ಮಿಕರಿಗಾಗಿ (ಸ್ವತಂತ್ರ ಉದ್ಯೋಗಿ) ವಿಶೇಷ ವಿಮಾ ಯೋಜನೆಯನ್ನು ಜಾರಿಗೊಳಿಸಿದೆ. ಆನ್ಲೈನ್ ಮೂಲಕ ಸರಕು ಸೇವೆ ಒದಗಿಸುವು ಸ್ವಿಗ್ಗಿ, ಜೊಮಾಟೋ, ಅಮೆಜಾನ್, ಫ್ಲಿಪ್‌ಕಾರ್ಟ್, ಬಿಗ್‌ಬಾಸ್ಕೆಟ್ ಮುಂತಾದ ಇ-ಕಾಮರ್ಸ್ ಸಂಸ್ಥೆಗಳಲ್ಲಿ ಡೆಲಿವರಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಹಲವು ಪ್ರಯೋಜನಗಳನ್ನು ನೀಡುತ್ತಿದೆ. ಅಪಘಾತದಲ್ಲಿ ಆಕಸ್ಮಿಕ ಮರಣಕ್ಕೆ ಮೊದಲು ಅವರಿಗೆ ₹2 ಲಕ್ಷ ನೀಡಲಾಗಿತ್ತಿತ್ತು, ಈಗ ₹5 ಲಕ್ಷ ನೀಡಲಾಗುತ್ತಿದೆ ಎಂದರು.

ಆಶಾದೀಪ ಯೋಜನೆ: ರಾಜ್ಯ ಸರ್ಕಾರ ಖಾಸಗಿ ವಲಯದ ಕೈಗಾರಿಕೆ, ಕಾರ್ಖಾನೆಗಳಲ್ಲಿ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಹೆಚ್ಚು ನೇಮಕಾತಿ ಮಾಡಿಕೊಳ್ಳಲು ಮಾಲೀಕರು, ಉದ್ಯೋಗದಾತರನ್ನು ಉತ್ತೇಜಿಸುವ ದೃಷ್ಠಿಯಿಂದ ಹಾಗೂ ಈ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಖಾಸಗಿ ವಲಯದಲ್ಲಿ ಉದ್ಯೋಗಾವಕಾಶ ಪಡೆಯಲು ಅನುಕೂಲವಾಗುವಂತೆ ಆಶಾದೀಪ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಮಾಲೀಕರು ಪಾವತಿಸುವ ಇಎಸ್ಐ ಮತ್ತು ಇಪಿಎಫ್ ವಂತಿಕೆ ಮರುಪಾವತಿ ಮಾಡಲಾಗುವುದು. ಅಪ್ರೆಂಟಿಸ್ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳ ಶಿಷ್ಯವೇತನ ಮರುಪಾವತಿ ಮಾಡಲಾಗುವುದು. ಕೌಶಲ್ಯಾಭಿವೃದ್ಧಿ ಇಲಾಖೆಯ ಮುಖಾಂತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿಗಳನ್ನು ಏರ್ಪಡಿಸಿ, ಸ್ವಾವಲಂಭಿಗಳಾಗಲು ಉತ್ತೇಜನ ನೀಡಲಾಗುತ್ತದೆ ಎಂದರು.

ಇಎಸ್‌ಐ ಆಸ್ಪತ್ರೆಗೆ ಸೌಲಭ್ಯ: ದೊಡ್ಡಬಳ್ಳಾಪುರದಲ್ಲಿ ಇಎಸ್ಐ ಆಸ್ಪತ್ರೆ ಕಟ್ಟಡ ನಿರ್ಮಾಣಗೊಂಡಿದ್ದ ಅದಕ್ಕೆ ಬೇಕು ಸೌಲಭ್ಯಗಳು ಮತ್ತು ಉಪಕರಣಗಳು ಸರಬರಾಜು ಮಾಡಬೇಕಿದೆ. ಹಾಗಾಗಿ ನಾವು ಕೇಂದ್ರ ಸರ್ಕಾರದ ಸಚಿವರೊಂದಿಗೆ ಇದರ ಬಗ್ಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಮಾತನಾಡಿ, ಅಸಂಘಟಿತ ಕಾರ್ಮಿಕರಿಗೆ ವಿಶೇಷ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ಜಿಲ್ಲೆಯಾದ್ಯಂತ ಕೈಗಾರಿಕೆಗಳು ಹೆಚ್ಚಿದ್ದು, ಹಲವಾರು ಕುಟುಂಬಗಳು ತಮ್ಮ ಜಮೀನು ಕಳೆದುಕೊಂಡಿದ್ದಾರೆ. ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಸಿಗಬೇಕು. ಈ ನಿಟ್ಟಿನಲ್ಲಿ ಈ ಭಾಗದಲ್ಲಿ ಒಂದು ತರಬೇತಿ ಕೇಂದ್ರ ಸ್ಥಾಪಿಸಿದರೆ ಉತ್ತಮ. ಇದರಿಂದ ಹಲವು ಅಭ್ಯರ್ಥಿಗಳು ಕೌಶಲ್ಯಾಭಿವೃದ್ಧಿ ತರಬೇತಿ ಪಡೆದು ಉದ್ಯೋಗ ಪಡೆಯುವಂತಾಗುತ್ತದೆ. ಇದರ ಬಗ್ಗೆ ಸರ್ಕಾರದ ಹಂತದಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದರು.



Source link

Leave a Reply

Your email address will not be published. Required fields are marked *