ಪ್ರಪಂಚದಲ್ಲಿ ಚಿತ್ರ ವಿಚಿತ್ರ ಸಂಪ್ರದಾಯ, ಪದ್ಧತಿ ಪಾಲಿಸುವ ಜನಾಂಗವಿದೆ. ಕೆಲ ಪದ್ಧತಿ ಅಪಾಯಕಾರಿ. ರಾಜಸ್ಥಾನದ ಜಿಪ್ಸಿ ಪಾಲಿಸುವ ಈ ಸಂಪ್ರದಾಯ ಕೂಡ ಅತ್ಯಂತ ಡೇಂಜರ್.
ಕಣ್ಣಿ (eye )ಗೆ ಸಣ್ಣ ಧೂಳು ಹೋದ್ರೂ ಸಹಿಸೋದು ಕಷ್ಟ. ನಮ್ಮ ದೇಹದ ಅತ್ಯಂತ ಸೂಕ್ಷ್ಮ ಅಂಗವಾಗಿರುವ ಕಣ್ಣಿಗೆ ಯಾವುದೇ ಪದಾರ್ಥ ಹಾಕ್ಬಾರದು. ಸ್ವಲ್ಪ ಎಡವಟ್ಟಾದ್ರೂ ದೃಷ್ಟಿ ಕಳೆದುಕೊಳ್ಳುವ ಅಪಾಯ ಇರುತ್ತೆ. ಆದ್ರೆ ರಾಜಸ್ಥಾನದಲ್ಲಿರುವ ಬುಡಕಟ್ಟು ಜನಾಂಗವೊಂದು ಕಣ್ಣಿಗೆ ಹಾವಿನ ವಿಷವನ್ನು ಬಿಟ್ಟುಕೊಳ್ಳುತ್ತೆ. ಅಚ್ಚರಿ ಅಂದ್ರೆ ಹಾವಿನ ವಿಷವನ್ನು ಕಣ್ಣಿಗೆ ಹಾಕಿದ್ರೂ ಅವರ ಕಣ್ಣಿಗೆ ಯಾವುದೇ ಹಾನಿಯಾಗೋದಿಲ್ಲ. ರಾಜಸ್ಥಾನದಲ್ಲಿ ಜಿಪ್ಸಿ (Gypsy) ಬುಡಕಟ್ಟು ಜನಾಂಗವೇ ಅನೇಕಾನೇಕ ವರ್ಷಗಳಿಂದ ಈ ಪದ್ಧತಿಯನ್ನು ಪಾಲಿಸಿಕೊಂಡು ಬರ್ತಿದೆ. ಇದನ್ನು ಕಲ್ಬೆಲಿಯಾ ಅಥವಾ ನಾಟ್ ಸಮುದಾಯ ಎಂದು ಕರೆಯಲಾಗುತ್ತದೆ. ವಿಶ್ವದ ಅತ್ಯಂತ ನಿಗೂಢ ಮತ್ತು ಪ್ರಾಚೀನ ಅಲೆಮಾರಿ ಸಮುದಾಯಗಳಲ್ಲಿ ಇದೂ ಒಂದು. ಈ ಬುಡಕಟ್ಟಿನ ಸಂಪ್ರದಾಯಗಳು ಮತ್ತು ಜೀವನಶೈಲಿ ತುಂಬಾ ವಿಚಿತ್ರ ಮತ್ತು ವಿಶಿಷ್ಟವಾಗಿದೆ. ಇಲ್ಲಿನ ಜನರಿಗೆ ಹಾವೆಂದ್ರೆ ಭಯವಿಲ್ಲ. ಹಾವಿನ ವಿಷ ಬಳಕೆಯನ್ನು ಶೌರ್ಯದ ಸಂಕೇತ ಅಂತ ಅವರು ಭಾವಿಸ್ತಾರೆ. ಇದು ಅವರ ನಂಬಿಕೆ, ಪರಂಪರೆಯ ಭಾಗವಾಗಿದೆ. ಅವರ ಪ್ರಕಾರ, ಹಾವಿನ ವಿಷ ಕಣ್ಣಿಗೆ ಹಾನಿಯಲ್ಲ. ಕಣ್ಣಿಗೆ ಅದನ್ನು ಹಾಕೋದ್ರಿಂದ ದೃಷ್ಟಿ ತೀಕ್ಷ್ಣವಾಗುತ್ತದೆ ಮತ್ತು ಆತ್ಮ ಶುದ್ಧವಾಗು ಅಂತ ಅವರು ನಂಬ್ತಾರೆ.
ಆಧುನಿಕ ಔಷಧ ಮತ್ತು ವಿಜ್ಞಾನದ ಪ್ರಕಾರ ಕಣ್ಣಿಗೆ ಹಾವಿನ ವಿಷ ಬಿಟ್ಟುಕೊಳ್ಳೋದು ಅಪಾಯಕಾರಿ. ಇದ್ರಿಂದ ದೃಷ್ಟಿ ಹೋಗ್ಬಹುದು. ಗಂಭೀರ ಸೋಂಕಿಗೆ ಕಾರಣವಾಗಬಹುದು. ಅಪ್ಪಿತಪ್ಪಿ ವಿಷ ಬಿದ್ರೆ ತಕ್ಷಣ ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ ವೈದ್ಯರನ್ನು ಭೇಟಿಯಾಗ್ಬೇಕು. ಆಶ್ಚರ್ಯ ಅಂದ್ರೆ ಈ ಸಮುದಾಯದ ಜನರು ಯಾವುದೇ ಹಾನಿಯಿಲ್ಲದೆ ಈ ಸಂಪ್ರದಾಯವನ್ನು ಅನುಸರಿಸುತ್ತಿದ್ದಾರೆ. ವಿಷದಿಂದ ಅವರ ದೇಹವನ್ನು ರಕ್ಷಿಸುವ ಯಾವ ರೀತಿಯ ರೋಗನಿರೋಧಕ ಶಕ್ತಿ ಅವರ ದೇಹದಲ್ಲಿದೆ ಅನ್ನೋದು ವಿಜ್ಞಾನಿಗಳಿಗೆ ಈಗ್ಲೂ ನಿಗೂಢವಾಗಿಯೇ ಇದೆ.
ಇಲ್ಲಿನ ಜನರು ಹಾವಿನೊಂದಿಗೆ ವಾಸ ಮಾಡ್ತಾರೆ. ಮನೆಯಲ್ಲಿ ಹಾವನ್ನು ಸಾಕ್ತಾರೆ. ಅವರ ಸಾಂಪ್ರದಾಯಿಕ ನೃತ್ಯ ಕಲ್ಬೇಲಿಯಾ. ಈ ನೃತ್ಯದ ಭಂಗಿಗಳು ಹಾವಿನ ಚಲನೆಯನ್ನು ಅನುಕರಿಸುತ್ತವೆ. ಈ ನೃತ್ಯ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ನೃತ್ಯ ಮತ್ತು ಸಂಗೀತ ಇಲ್ಲಿನ ಜನರಿಗೆ ಕೇವಲ ಮನರಂಜನೆಯಲ್ಲ. ಉಸಿರಾಗಿದೆ. ಈ ಸಮುದಾಯ ಪ್ರದರ್ಶಿಸುವ ನೃತ್ಯ ಪ್ರಪಂಚದಾದ್ಯಂತ “ಕಲ್ಬೆಲಿಯಾ ನೃತ್ಯ” ಎಂದೇ ಪ್ರಸಿದ್ಧವಾಗಿದೆ. ಸಾಂಪ್ರದಾಯಿಕವಾಗಿ, ಜಿಪ್ಸಿ ಮಹಿಳೆಯರು ತಮ್ಮ ಟ್ಯಾರೋ ಕಾರ್ಡ್ ಮತ್ತು ಹಸ್ತಸಾಮುದ್ರಿಕ ಶಾಸ್ತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಕೆಲವು ಜಿಪ್ಸಿ ಸಮುದಾಯಗಳು ಕುದುರೆ ವ್ಯಾಪಾರ ಮತ್ತು ವೇಶ್ಯಾವಾಟಿಕೆಯಲ್ಲಿಯೂ ತೊಡಗಿಸಿಕೊಂಡಿವೆ. ಪ್ರಪಂಚದಾದ್ಯಂತ ಈ ಬುಡಕಟ್ಟು ಜನಾಂಗ ನೆಲೆ ನಿಂತಿದೆ. ಅವರ ಮೂಲ ಭಾಷೆ ರೋಮಾನಿ ಆದ್ರೂ ಅವರು ಸ್ಥಳೀಯ ಭಾಷೆಗಳನ್ನು ಮಾತನಾಡ್ತಾರೆ. ಹಾಗೆಯೇ ಮುಸ್ಲಿಂ, ಕ್ರಿಶ್ಮಿಯನ್ ಧರ್ಮವನ್ನು ಪಾಲಿಸುವ ಜನರೂ ಇದ್ರಲ್ಲಿದ್ದಾರೆ. ಇವರು ಮದುವೆಗೆ ಹೆಚ್ಚು ಪ್ರಾಮುಖ್ಯತೆ ನೀಡ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಮದುವೆ ನಡೆಯುತ್ತೆ. ಮದುವೆ ಟೈಂನಲ್ಲಿ ಸಾಂಪ್ರದಾಯಿಕ ನೃತ್ಯ ಹಾಗೂ ಸಂಗೀತಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಅಲೆಮಾರಿ ಜೀವನ ಅನುಸರಿಸುವ ಇವರ ದೊಡ್ಡ ಸಮಸ್ಯೆ ಶಿಕ್ಷಣ. ಒಂದು ಕಡೆಯಿಂದ ಇನ್ನೊಂದು ಕಡೆ ಓಡಾಡೋದ್ರಿಂದ ಮಕ್ಕಳಿಗೆ ಶಿಕ್ಷಣ ಸಿಗ್ತಿಲ್ಲ. ಈಗ್ಲೂ ಆತ್ಮ, ಪೂರ್ವಜರ ಬಗ್ಗೆ
ಹೆಚ್ಚು ನಂಬಿಕೆ ಇಡುವ ಜನರು ಸಮಾಜದ ಜೊತೆ ಬೆರೆಯುವುದು ಅಪರೂಪ. ಇಲ್ಲಿನ ಮತ್ತೊಂದು ವಿಶೇಷ ಅಂದ್ರೆ ಇಲ್ಲಿನ ಜನರು ಸಾವನ್ನು ಸಂಭ್ರಮಿಸ್ತಾರೆ. ಮಗು ಜನಿಸಿದಾಗ ದುಃಖ ವ್ಯಕ್ತಪಡಿಸುತ್ತಾರೆ. ವ್ಯಕ್ತಿ ಸತ್ತಾಗ, ಹೊಸ ಬಟ್ಟೆ ಧರಿಸಿ, ಸಿಹಿ ಹಂಚಿ, ಮದ್ಯಸೇವನೆ ಮಾಡ್ತಾರೆ. ಅದೇ ಮಗು ಜನಿಸಿದಾಗ ಅಳುವ ಇವರು ಮನೆಯಲ್ಲಿ ಅಡುಗೆ ಮಾಡೋದಿಲ್ಲ. ಮಗುವಿಗೆ ಶಾಪ ಹಾಕ್ತಾರೆ.