ಎಲ್ಲ ಸರ್ಕಾರದಲ್ಲೂ ಶಾಸಕರ ಅಸಮಾಧಾನ ಇದ್ದೇ ಇರುತ್ತದೆ. ಶಾಸಕರು, ಸಚಿವರು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ತಿಳಿಸಿದರು.
ಬೆಂಗಳೂರು (ಜು.03): ಎಲ್ಲ ಸರ್ಕಾರದಲ್ಲೂ ಶಾಸಕರ ಅಸಮಾಧಾನ ಇದ್ದೇ ಇರುತ್ತದೆ. ಶಾಸಕರು, ಸಚಿವರು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಕುರಿತಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮುಖ್ಯಮಂತ್ರಿ ಬದಲಾವಣೆಯೂ ಇಲ್ಲ ಎಂದರು.
ಅಲ್ಲದೆ, ಎಲ್ಲ ಸರ್ಕಾರದಲ್ಲೂ ಶಾಸಕರಿಗೆ ಅಸಮಧಾನವಿದ್ದೇ ಇರುತ್ತದೆ. ಕೆಲ ಶಾಸಕರು ಅನುದಾನ ಮತ್ತು ಅಭಿವೃದ್ಧಿ ವಿಚಾರವಾಗಿ ಬೇಸರವಿರಬಹುದು. ಆದರೆ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ನಮ್ಮ ಸರ್ಕಾರ ಭದ್ರವಾಗಿದೆ. ಕೆಲವರ ಅಭಿಪ್ರಾಯವು ಪಕ್ಷಕ್ಕೆ ಸಂಬಂಧಿಸಿದಲ್ಲ. ಬದಲಿಗೆ ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದರು.
ಸಿದ್ದರಾಮಯ್ಯ ಮಾಸ್ ಲೀಡರ್: ಸಿದ್ದರಾಮಯ್ಯ ಅವರು ಲಕ್ಕಿ ಸಿಎಂ ಎಂದು ಬಿ.ಆರ್. ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅಜಯ್ ಸಿಂಗ್, ಮುಖ್ಯಮಂತ್ರಿಯಾಗಬೇಕು ಎಂದು ಅದೃಷ್ಟವಂತರಾಗಿರಲೇಬೇಕು. ಆ ಬಗ್ಗೆ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಲಕ್ಕಿ ಸಿಎಂ ಎಂದು ಒಪ್ಪಿಕೊಂಡಿದ್ದಾರೆ. ನನ್ನ ತಂದೆ ಧರ್ಮಸಿಂಗ್ ಅವರೂ ಸಿಎಂ ಆಗಿದ್ದವರು. ಅವರೂ ಅದೃಷ್ಟವಂತರೇ. ಇನ್ನು, ಸಿದ್ದರಾಮಯ್ಯ ಮಾಸ್ ಲೀಡರ್. ಹೀಗೆ, ಮಾಸ್ ಲೀಡರ್ ಆಗಬೇಕೆಂದರೆ ಪರಿಶ್ರಮವೂ ಬೇಕು, ಅದೃಷ್ಟವೂ ಇರಬೇಕು ಎಂದು ಹೇಳಿದರು.
ಬೇರೆ ಆಯ್ಕೆಯಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನು ಬೆಂಬಲ ನೀಡಲೇಬೇಕು, ಬೆಂಬಲ ನೀಡುತ್ತೇನೆ. ಐ ಹ್ಯಾವ್ ನೋ ಅದರ್ ಆಪ್ಷನ್ (ನನಗೆ ಬೇರೆ ಆಯ್ಕೆಯಿಲ್ಲ) ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಜತೆಗೆ, ಮುಂದಿನದು ಹೈಕಮಾಂಡ್ ತೀರ್ಮಾನ. ಅದಕ್ಕೆ ನಾನು ಬದ್ಧನಾಗಿರುವೆ ಎಂದೂ ಹೇಳಿದ್ದಾರೆ. ಐದು ವರ್ಷದ ಅವಧಿಗೂ ನಾನೇ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬುಧವಾರ ಪ್ರತಿಕ್ರಿಯೆ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಹೇಳಿಕೆಗೆ ನಾನು ಆಕ್ಷೇಪಿಸುವುದಿಲ್ಲ. ಐ ಹ್ಯಾವ್ ನೋ ಅದರ್ ಆಪ್ಷನ್. ನಾನು ಅವರಿಗೆ ಬೆಂಬಲ ನೀಡುತ್ತೇನೆ ಎಂದರು
ಜತೆಗೆ, ಮುಂದಿನದು ಹೈಕಮಾಂಡ್ ನಿರ್ಧಾರ. ಅವರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಲಕ್ಷಾಂತರ ಕಾರ್ಯಕರ್ತರು ಪಕ್ಷವನ್ನು ಬೆಂಬಲಿಸಿ ಕೆಲಸ ಮಾಡಿದ್ದಾರೆ. ಪಕ್ಷದ ತೀರ್ಮಾನ ಬೆಂಬಲಿಸಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಇದಕ್ಕೂ ಮುನ್ನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್ ಅವರು, ಮುಂದಿನ ಮುಖ್ಯಮಂತ್ರಿ ಶಿವಕುಮಾರ್ ಎಂದು ಹೇಳುವಂತೆ ನಾನು ಯಾರಿಗೂ ತಿಳಿಸಿಲ್ಲ. ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಹೇಳುವ ಅವಶ್ಯಕತೆಯೂ ಇಲ್ಲ. ಈ ರೀತಿ ಯಾರೆಲ್ಲ ಮಾತನಾಡುತ್ತಾರೋ ಅವರಿಗೆ ಪಕ್ಷ ನೋಟಿಸ್ ನೀಡುತ್ತದೆ ಎಂದರು.