ಬೆಂಗಳೂರಿನಲ್ಲಿ ಮಹಾರಾಷ್ಟ್ರದ ನೋಂದಣಿ ಹೊಂದಿದ ₹7.5 ಕೋಟಿ ಮೌಲ್ಯದ ಫೆರಾರಿ ಕಾರನ್ನು ಆರ್‌ಟಿಒ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ತೆರಿಗೆ ಪಾವತಿಸದೆ ಓಡಾಡುತ್ತಿದ್ದ ಕಾರಣ ₹1.78 ಕೋಟಿ ತೆರಿಗೆ, ದಂಡ ವಿಧಿಸಲಾಗಿದೆ. ಸಂಜೆಯೊಳಗೆ ಹಣ ಕಟ್ಟದಿದ್ದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ.
ಬೆಂಗಳೂರು (ಜು.03): ರಾಜ್ಯದಲ್ಲಿ ವಾಹನ ತೆರಿಗೆ ಪಾವತಿಸದೇ ಐಶಾರಾಮಿ ಕಾರುಗಳ ಓಡಾಟ ಹೆಚ್ಚಾಗುತ್ತಿರುವ ಹಿನ್ನೆಲೆ, ಬೆಂಗಳೂರಿನ ಲಾಲ್‌ಬಾಗ್ ಬಳಿ ಬೆಂಗಳೂರಿನ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಅಧಿಕಾರಿಗಳು ಮಹಾರಾಷ್ಟ್ರ ರಿಜಿಸ್ಟ್ರೇಷನ್ ಹೊಂದಿದ ಫೆರಾರಿ ಕಾರು ವಶಕ್ಕೆ ಪಡೆದಿದ್ದಾರೆ. ಅಂದಾಜು ₹7.5 ಕೋಟಿ ಮೌಲ್ಯದ ಈ ಕಾರು ರಾಜ್ಯದಲ್ಲಿ ಅನಧಿಕೃತವಾಗಿ ಓಡಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ತಕ್ಷಣ ಕ್ರಮಕ್ಕೆ ಮುಂದಾಗಿದ್ದು, ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಮಹಾರಾಷ್ಟ್ರದಲ್ಲಿ 20 ಲಕ್ಷ ತೆರಿಗೆ, ರಾಜ್ಯದಲ್ಲಿ ಉಳಿದ ತೆರಿಗೆ ಬಾಕಿ!
2023ರ ಸೆಪ್ಟೆಂಬರ್ ತಿಂಗಳಿಂದ ಈ ಫೆರಾರಿ ವಾಹನ ಬೆಂಗಳೂರು ನಗರದಲ್ಲಿ ಚಲಿಸುತ್ತಿದ್ದರೂ, ಅದರ ಮೇಲೆ ಕರ್ನಾಟಕ ರಾಜ್ಯಕ್ಕೆ ತೆರಿಗೆ ಪಾವತಿಯಾಗಿರಲಿಲ್ಲ. ಕೇವಲ ಮಹಾರಾಷ್ಟ್ರದಲ್ಲಿ ₹20 ಲಕ್ಷ ರೋಡ್ ಟ್ಯಾಕ್ಸ್ ಪಾವತಿಸಲಾಗಿತ್ತು. ಆದರೆ, ಕರ್ನಾಟಕದಲ್ಲಿ ನೋಂದಾಯಿಸದ ಈ ವಾಹನ ಬಗೆಗಿನ ಮಾಹಿತಿ ಟ್ರಾಫಿಕ್ ಪೊಲೀಸರಿಂದ ಆರ್‌ಟಿಒಗೆ ನೀಡಲಾಗಿತ್ತು. ಆರ್‌ಟಿಒ ಪ್ರಾಥಮಿಕ ತನಿಖೆ ಪ್ರಕಾರ, ವಾಹನ ಮಾಲೀಕರು ರಾಜ್ಯಕ್ಕೆ ಪಾವತಿಸಬೇಕಾದ ಒಟ್ಟು ತೆರಿಗೆ ಮತ್ತು ದಂಡ ₹1.78 ಕೋಟಿ ಆಗಿದ್ದು, ಈ ಬಗ್ಗೆ ಮಾಲೀಕರಿಗೆ ನೋಟಿಸ್ ನೀಡಲಾಗಿದೆ.
ಇದಲ್ಲದೆ, ಇಂದು ಸಂಜೆಯೊಳಗೆ ನೀವು ಹಣ ಪಾವತಿ ಮಾಡದಿದ್ದಲ್ಲಿ ತೆರಿಗೆ ಕಟ್ಟದೇ ವಾಹನ ಸಂಚಾರ ಮಾಡುತ್ತಿರುವ ಸಂಚಾರ ನಿಯಮ ಉಲ್ಲಂಘನೆ ಆಧಾರದಲ್ಲಿ ಫೆರಾರಿ ಕಾರನ್ನು ಕಾನೂನುಬದ್ಧವಾಗಿ ಸೀಝ್ ಮಾಡಲು ತಯಾರಿ ನಡೆದಿದೆ. ಇನ್ನು ಆರ್‌ಟಿಒ ಅಧಿಕಾರಿಗಳು ಕಾರನ್ನು ವಶಕ್ಕೆ ಪಡೆದ ಬಳಿಕ, ಮಾಲೀಕರ ಮನೆ ಮುಂದೆ ನಿಲ್ಲಿಸಿ, ಹಿರಿಯ ಅಧಿಕಾರಿಗಳ ಸೂಚನೆಗಾಗಿ ಕಾಯುತ್ತಿದ್ದಾರೆ. ಕೆಲವರು ಈ ಕ್ರಮವನ್ನು ಶಂಕಾಸ್ಪದವಾಗಿ ನೋಡುತ್ತಿದ್ದಾರೆ. ಯಾಕೆಂದರೆ, ಕಾರು ಸೀಝ್ ಮಾಡಲು ವಿಳಂಬವಾಗುತ್ತಿರುವುದು ಅನುಮಾನ ಹುಟ್ಟಿಸಿದೆ. ಪೊಲೀಸರು ಒಂದಷ್ಟು ಹಣ ಪಡೆದು ಕಾರನ್ನು ಬಿಟ್ಟು ಕಳಿಸಬಹುದು ಎಂದು ಚರ್ಚೆ ಮಾಡುತ್ತಿದ್ದಾರೆ.
ಸಂಜೆಯೊಳಗೆ ಗಡುವು:
ಆರ್‌ಟಿಒ ಅಧಿಕಾರಿಗಳು ಮಾಲೀಕರಿಗೆ ಇಂದು (ಜುಲೈ 3) ಸಂಜೆ ಒಳಗೆ ₹1.78 ಕೋಟಿ ತೆರಿಗೆ ಮತ್ತು ದಂಡ ಪಾವತಿಸಲು ಅಂತಿಮ ಗಡುವು ನೀಡಿದ್ದಾರೆ. ಈ ಮೊತ್ತ ಪಾವತಿಯಾಗದಿದ್ದರೆ, ಕಾರು ಕಾನೂನಿನ ಪ್ರಕಾರ ಸಂಪೂರ್ಣವಾಗಿ ಸೀಝ್ ಆಗಲಿದೆ.